ಶೋಭಾ ಕರಂದ್ಲಾಜೆ ಗೋಬ್ಯಾಕ್ ಅಂದೋಲನ
ಕೆಂಗೇರಿ,ಮಾ.೧೮:ಕಾರ್ಯಕರ್ತರ ಶ್ರಮದಿಂದ ಅಧಿಕಾರ ಪಡೆದ ಶೋಭಾ ಕರಂದ್ಲಾಜೆ ಹಾಗೂ ಡಿ. ವಿ. ಸದಾನಂದ ಗೌಡರು ಕಾರ್ಯಕರ್ತರ ಶ್ರಮಕ್ಕೆ ಯಾವುದೇ ರೀತಿಯ ಮನ್ನಣೆ ನೀಡದೆ ಕಾಲಹರಣ ಮಾಡಿ ಚುನಾವಣಾ ಸಂದರ್ಭದಲ್ಲಿ ಮತ್ತೆ ಮತ್ತೆ ಅಧಿಕಾರಕ್ಕಾಗಿ ಅಪಹಪಿಸುತ್ತಿರುವುದು ಸ್ವಾರ್ಥ ರಾಜಕಾರಣವಾಗಿದೆ ಎಂದು ಬಿಜೆಪಿ ಮುಖಂಡ ರವಿಕುಮಾರ್ ತೀವ್ರ ಆಕ್ರೋಶ ವ್ಯಕ್ತಪಡಿಸಿ
ಗೋ ಬ್ಯಾಕ್ ಗೋ ಬ್ಯಾಕ್ ಶೋಭಾ ಕರಂದ್ಲಾಜೆ ಎಂದು ಹೇಳಿ ಯಶವಂತಪುರ ವಿಧಾನಸಭಾ ಕ್ಷೇತ್ರದ ಹೆವ್ಮಿಗೇಪುರ ವಾರ್ಡಿನ ವಾಜರಹಳ್ಳಿಯಲ್ಲಿ ಸ್ಥಳೀಯ ಬಿಜೆಪಿ ನಾಯಕರಿಂದ ಶೋಭಾ ಕರಂದ್ಲಾಜೆ ಗೋ ಬ್ಯಾಕ್ ಆಂದೋಲನವನ್ನು ಹಮ್ಮಿಕೊಂಡಿದ್ದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ರವಿಕುಮಾರ್ ಶಾಸಕರಾಗಿದ್ದ ಶೋಭಾ ಕರಂದ್ಲಾಜೆ ಅವರು ಕಾರ್ಯಕರ್ತರಿಗೆ ಯಾವುದೇ ಮಾಹಿತಿ ನೀಡದೆ ಬಿ ಎಸ್ ಯಡಿಯೂರಪ್ಪ ರವರೊಂದಿಗೆ ಸೇರಿ ಕೆ ಜೆಪಿ ಪಕ್ಷವನ್ನು ಸ್ಥಾಪಿಸಿ ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸದೆ ರಾಜಾಜಿನಗರದ ಸುರೇಶ್ ಕುಮಾರ್ ವಿರುದ್ಧ ಸ್ಪರ್ಧಿಸಿ ಕಾರ್ಯಕರ್ತರನ್ನ ಬೀದಿಗೆ ಬಿಟ್ಟು ಹೋದ ಶೋಭಾ ಕರಂದ್ಲಾಜೆ ಅವರು ಮತ್ತೆ ಲೋಕಸಭಾ ಚುನಾವಣಾ ನೆಪದಲ್ಲಿ ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ಬಂದಿರುವುದು ದುರ್ದೈವದ ಸಂಗತಿ ಆಗಿದೆ ಎಂದರು. ಬಿಜೆಪಿ ವರಿಷ್ಠರು ಸ್ಥಳೀಯ ಮಹಿಳಾ ಮುಖಂಡರಿಗೆ, ಸ್ಥಳೀಯರಿಗೆ ಆದ್ಯತೆ ನೀಡುವ ಮೂಲಕ ಕಾರ್ಯಕರ್ತರ ಮನವಿಗೆ ಸ್ಪಂದಿಸಬೇಕೆಂದು ಒತ್ತಾಯಿಸಿದರು. ಸ್ಥಳೀಯ ಮುಖಂಡರನ್ನು ಸ್ಥಳೀಯ ಕಾರ್ಯಕರ್ತರನ್ನ ಕತ್ತಲಲ್ಲಿಟ್ಟು ಪದೇ ಪದೇ ಕ್ಷೇತ್ರ ಬದಲಾಯಿಸಿ ವಲಸೆ ವಲಸೆ ಹೋಗುತ್ತಿರುವ ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್ ನೀಡುವುದು ನ್ಯಾಯವೇ ಎಂದು ಪ್ರಶ್ನಿಸಿದರು.ಬೆಂಗಳೂರು ಉತ್ತರ ಕ್ಷೇತ್ರದಿಂದ ಆಯ್ಕೆಯಾಗಿದ್ದ ಡಿ. ವಿ. ಸದಾನಂದ ಗೌಡರು ಕೇಂದ್ರದಲ್ಲಿ ಮಂತ್ರಿ ಯಾಗಿದ್ದರೂ ಕ್ಷೇತ್ರಕ್ಕೆ ಯಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲಿಲ್ಲ ಸದಾ ಸ್ಮಿತರಾಗಿ ಎಸಿ ರೂಮಿನಲ್ಲಿ ಕೂತು ಐದು ವರ್ಷ ಕಾಲ ಹರಣ ಮಾಡಿದ್ದೆ ದೊಡ್ಡ ಸಾಧನೆಯಾಗಿದೆ ಎಂದು ವ್ಯಂಗ್ಯವಾಡಿದರು. ಇದೇ ಸಂದರ್ಭದಲ್ಲಿ ಬಿಜೆಪಿ ಸ್ಥಳೀಯ ನಾಯಕರುಗಳಾದ ರವಿಕುಮಾರ್ ಗೌಡ, ಗಿರಿಜೇಶ್ ಕುಮಾರ್, ವೆಂಕಟೇಶ್, ಮಂಜುನಾಥ್, ಹಂಸ ರವಿಕುಮಾರ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು