ಸಮುದ್ರ ಯಾನ ಮಿಷನ್‌ಗೆ ಭಾರತ ಸಿದ್ಧ
ನವದೆಹಲಿ,ಮಾ.೧೬- “ಸಮುದ್ರಯಾನ ಮಿಷನ್” ಮೂಲಕ ೨೦೨೫ರ ಅಂತ್ಯದ ವೇಳೆಗೆ ಸಮುದ್ರದ ತಳಭಾಗವನ್ನು ಅನ್ವೇಷಿಸಲು ಭಾರತ ಸಿದ್ಧವಾಗಿದೆ ಎಂದು ಕೇಂದ್ರ ಭೂ ವಿಜ್ಞಾನ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.
೨೦೨೫ರಲ್ಲಿ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಗಗನಯಾನ ಮಿಷನ್‌ನಂತೆಯೇ, ಭಾರತ ಮುಂದಿನ ವರ್ಷದ ಅಂತ್ಯದ ವೇಳೆಗೆ ಸಮುದ್ರಯಾನದಲ್ಲಿ ೬,೦೦೦ ಮೀಟರ್ ಆಳದ ಸಾಗರ ಅಧ್ಯಯನ ಮಾಡಲು ತನ್ನ ವಿಜ್ಞಾನಿಗಳನ್ನು ಕಳುಹಿಸುತ್ತದೆ ಎಂದು ತಿಳಿಸಿದ್ದಾರೆ.
ಸಬ್‌ಮರ್ಸಿಬಲ್ ಯೋಜನೆಗಾಗಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಷನ್ ಟೆಕ್ನಾಲಜಿ ಅಭಿವೃದ್ಧಿಪಡಿಸಿದ ನೀರೊಳಗಿನ ಅಕೌಸ್ಟಿಕ್ ಟೆಲಿಫೋನ್ ಅನ್ನು ಮಾರ್ಚ್ ೯ ರಂದು ಬಂಗಾಳ ಕೊಲ್ಲಿಯಲ್ಲಿ ಸುಮಾರು ೫೦೦ ಮೀಟರ್ ಆಳದಲ್ಲಿ ಯಶಸ್ವಿಯಾಗಿ ಪರೀಕ್ಷಿಸಿದ ನಂತರ ಸಚಿವರಿಂದ ಈ ಪ್ರಕಟಣೆ ಹೊರಬಿದ್ದಿದೆ.
ಸುದ್ಧಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅವರು ವಿಜ್ಞಾನಿಗಳನ್ನು ಸಮುದ್ರದ ಆಳಕ್ಕೆ ಕೊಂಡೊಯ್ಯುವ ಭಾರತದ ಆಳ-ಸಾಗರದ ಸಬ್‌ಮರ್ಸಿಬಲ್, ‘ಮತ್ಸ್ಯ ೬೦೦೦’ “ಉತ್ತಮ ಕೋರ್ಸ್‌ನಲ್ಲಿದೆ” ಮತ್ತು “ಈ ವರ್ಷದ ಅಂತ್ಯದ ವೇಳೆಗೆ” ಅದನ್ನು ಪರೀಕ್ಷಿಸಬಹುದು ಎಂದು ಹೇಳಿದ್ದಾರೆ.
ವಿಜ್ಞಾನಿಗಳು ೨೦೨೫ರ ಅಂತ್ಯದ ವೇಳೆಗೆ ಮೊದಲ ಆಳವಿಲ್ಲದ ನೀರಿನ ಪರೀಕ್ಷೆ ಕೈಗೊಳ್ಳಲು ಸಾಧ್ಯವಾಗುತ್ತದೆ. ಈ ಯೋಜನೆ ೨೦೨೧ ರಲ್ಲಿ ಪ್ರಾರಂಭಿಸಲಾಯಿತು. ಸಬ್‌ಮರ್ಸಿಬಲ್ ವೈಜ್ಞಾನಿಕ ಸಂವೇದಕಗಳು ಮತ್ತು ಸಾಧನಗಳ ಸೂಟ್‌ನೊಂದಿಗೆ ಸಜ್ಜುಗೊಂಡಿರುತ್ತದೆ ಮತ್ತು ೧೨ ಗಂಟೆಗಳ ಕಾರ್ಯಾಚರಣೆಯಿಂದ ತುರ್ತು ಪರಿಸ್ಥಿತಿಯಲ್ಲಿ ೯೬ ಗಂಟೆಗಳವರೆಗೆ ವಿಸ್ತರಿಸಬಹುದು ಎಂದಿದ್ದಾರೆ.
ಕೇಂದ್ರ ಭೂ ವಿಜ್ಞಾನ ಸಚಿವಾಲಯ ಈ ಕುರಿತು ಟ್ವೀಟ್ ಮಾಡಿದ್ದು “ಮಾನವಸಹಿತ ಸಬ್‌ಮರ್ಸಿಬಲ್‌ಗಾಗಿ ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾದ ತಂತ್ರಜ್ಞಾನದೊಂದಿಗೆ ನೀರೊಳಗಿನ ಅಕೌಸ್ಟಿಕ್ ಟೆಲಿಫೋನ್ ಅನ್ನು ಸಂಶೋಧನಾ ನೌಕೆಯ ಮೂಲಕ ಬಂಗಾಳ ಕೊಲ್ಲಿ ಯಲ್ಲಿ ೫೦೦ ಮೀಟರ್ ಆಳದವರೆಗೆ ಯಶಸ್ವಿಯಾಗಿ ಪರೀಕ್ಷಿಸಲಾಗಿದೆ ಇದು ಮುಂದಿನ ದಿನಗಳಲ್ಲಿ ಸಾಗರದ ತಳ ಭಾಗವನ್ನು ಸಂಶೋಧನೆ ಮಾಡಲು ನೆರವಾಗಲಿದೆ ಎಂದು ತಿಳಿಸಿದೆ.
ಕ್ಲಬ್ ಸೇರಲು ಸಜ್ಜು
ಇಲ್ಲಿಯವರೆಗೆ, ಅಮೆರಿಕಾ, ರಷ್ಯಾ, ಚೀನಾ, ಫ್ರಾನ್ಸ್ ಮತ್ತು ಜಪಾನ್‌ನಂತಹ ದೇಶಗಳು ಆಳವಾದ ಸಾಗರ ಸಿಬ್ಬಂದಿ ಕಾರ್ಯಾಚರಣೆ ಯಶಸ್ವಿಯಾಗಿ ನಡೆಸಿವೆ.
ಈ ಮೂಲಕ ಮುಂದಿನ ದಿನಗಳಲ್ಲಿ ದೇಶದ ಆಳ-ಸಾಗರದ ಕಾರ್ಯಾಚರಣೆ ಯಶಸ್ವಿಯಾದರೆ, ಅದು ಭಾರತವನ್ನು ಸಾಗರದೊಳಗಿನ ಚಟುವಟಿಕೆ ಕೈಗೊಳ್ಳಲು ತಂತ್ರಜ್ಞಾನ ಮತ್ತು ವಾಹನಗಳನ್ನು ಹೊಂದಿರುವ ರಾಷ್ಟ್ರಗಳ ಗಣ್ಯ ಕ್ಲಬ್‌ಗೆ ಸೇರಿದಂತಾಗಲಿದೆ ಎಂದು ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.