ಅಮೆರಿಕ ವರ್ತನೆಗೆ ಚೀನಾ ಆಕ್ರೋಶ
ನ್ಯೂಯಾರ್ಕ್, ಮಾ.೧೫- ಈಗಾಗಲೇ ಟಿಕ್‌ಟಾಕ್‌ಗೆ ನಿಷೇಧ ಹೇರುವ ಮಸೂದೆಗೆ ಅಮೆರಿಕಾ ಸಂಸತ್‌ನ ಕೆಳಮನೆ (ಹೌಸ್ ಆಫ್ ರೆಪ್ರಸೆಂಟೇಟಿವ್ಸ್) ಅನುಮೋದನೆ ನೀಡಿದೆ. ಸದ್ಯ ಈ ನಡೆಗೆ ಚೀನಾ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಅಮೆರಿಕಾವು ಅನ್ಯಾಯವಾಗಿ ದರೋಡೆಕೋರನಂತೆ ವರ್ತಿಸುತ್ತಿದ್ದು, ನಮ್ಮ ಹಿತಾಸಕ್ತಿಗಳನ್ನು ರಕ್ಷಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಚೀನಾ ತಿಳಿಸಿದೆ.
ಅಮೆರಿಕಾ ಸಂಸತ್‌ನ ಕೆಳಮನೆಯಲ್ಲಿ ಅನುಮೋದನೆ ಪಡೆದಿರುವ ಹಿನ್ನೆಲೆಯಲ್ಲಿ ಸದ್ಯ ಮಸೂದೆಯನ್ನು ಸೆನೆಟ್‌ಗೆ ಕಳುಹಿಸಲಾಗಿದ್ದು, ಒಂದು ವೇಳೆ ಇಲ್ಲಿ ಒಪ್ಪಿಗೆ ಪಡೆದುಕೊಂಡ ಬಳಿಕ ಅಧ್ಯಕ್ಷ ಜೋ ಬೈಡೆನ್ ಅವರು ಮಸೂದೆಗೆ ಸಹಿ ಹಾಕಲಿದ್ದಾರೆ. ಆದರೆ ಸೆನೆಟ್‌ನಲ್ಲಿ ಮಸೂದೆಗೆ ಒಪ್ಪಿಗೆ ಪಡೆದುಕೊಳ್ಳುವುದು ಅನುಮಾನವೆಂದೇ ಹೇಳಲಾಗಿದೆ. ಹಲವು ಸೆನೆಟರ್‌ಗಳು ಟಿಕ್‌ಟಾಕ್ ನಿಷೇಧದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಸದ್ಯ ನಿಷೇಧ ನಿರ್ಧಾರವನ್ನು ಖಂಡಿಸಿ ಅಮೆರಿಕನ್ ಟಿಕ್‌ಟಾಕ್ ಬಳಕೆದಾರರು ಕೂಡ ಶ್ವೇತಭವನದ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೆ ಸದ್ಯ ಟಿಕ್‌ಟಾಕ್‌ನ ಮಾತೃಸಂಸ್ಥೆಯಾದ ಬೈಟ್‌ಡ್ಯಾನ್ಸ್ ಅಮೆರಿಕಾ ಆರು ತಿಂಗಳ ಕಾಲಾವಕಾಶ ನೀಡಿದ್ದು, ಈ ಅವಧಿಯಲ್ಲಿ ಚೀನಾ ಮಾಲಕತ್ವದಿಂದ ಟಿಕ್‌ಟಾಕ್ ದೂರ ಹೋಗುವಂತೆ ಸೂಚಿಸಲಾಗಿದೆ. ಅಥವಾ ಅಮೆರಿಕಾದಲ್ಲಿ ನಿಷೇಧಕ್ಕೆ ಸಿದ್ಧರಾಗುವಂತೆ ಸೂಚಿಸಲಾಗಿದೆ. ಇನ್ನು ಚೀನಾ ಮೂಲದ ಅಪ್ಲಿಕೇಶನ್‌ನಿಂದ ಅಮೆರಿಕಾದ ಜನರ ಡೇಟಾಗೆ ಅಪಾಯ ಉಂಟು ಮಾಡಿದೆ ಎಂದು ಯುಎಸ್ ಶಾಸಕರು ಟಿಕ್‌ಟಾಕ್ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಆದರೆ ಟಿಕ್‌ಟಾಕ್‌ನ ಮಾಲಕರು ಆ ಆರೋಪಗಳನ್ನು ತಿರಸ್ಕರಿಸಿದ್ದಾರೆ. ಇನ್ನು ಮಸೂದೆಗೆ ಸಂಬಂಧಿಸಿದಂತೆ ಹೌಸ್ ಆಫ್ ರೆಪ್ರಸೆಂಟೇಟಿವ್ಸ್‌ನಲ್ಲಿ ನಡೆದ ಮತದಾನದಲ್ಲಿ ನಿಷೇಧದ ಪರವಾಗಿ ೩೫೨ ಹಾಗೂ ವಿರುದ್ಧವಾಗಿ ೬೫ ಮಂದಿ ಮತ ಚಲಾಯಿಸಿದ್ದರು. ಯುಎಸ್ ಸೆನೆಟ್ ಟಿಕ್‌ಟಾಕ್ ನಿಷೇಧದ ಮಸೂದೆಯನ್ನು ಅಂಗೀಕರಿಸಲು ಸಾಕಷ್ಟು ಬೆಂಬಲವಿದೆಯೇ ಎಂಬುದು ಅಸ್ಪಷ್ಟವಾಗಿದೆ. ಅಲ್ಲದೆ ಈಗಿನ ಯಥಾಸ್ಥಿತಿಯನ್ನು ಬಿಟ್ಟು ಮಸೂದೆ ಎಂದಿಗೂ ಮತಕ್ಕೆ ಬಾರದಿರುವ ಸಾಧ್ಯತೆಯೂ ಇದೆ ಎನ್ನಲಾಗಿದೆ.
ಮಸೂದೆಯ ಮೇಲಿನ ಮತದಾನವು ನ್ಯಾಯಯುತ ಸ್ಪರ್ಧೆ ಮತ್ತು ನ್ಯಾಯದ ತತ್ವಗಳಿಗೆ ವಿರುದ್ಧವಾಗಿದೆ. ಯಾರಾದರೂ ಇನ್ನೊಬ್ಬ ವ್ಯಕ್ತಿಯು ಹೊಂದಿರುವ ಒಳ್ಳೆಯದನ್ನು ನೋಡಿದಾಗ ಮತ್ತು ಅದನ್ನು ಸ್ವತಹ ತೆಗೆದುಕೊಳ್ಳಲು ಪ್ರಯತ್ನಿಸುವುದು ಸಂಪೂರ್ಣವಾಗಿ ಡಕಾಯಿತನದ ತರ್ಕವಾಗಿದೆ.
-ವಾಂಗ್ ವೆನ್‌ಬಿನ್, ಚೀನಾ
ವಿದೇಶಾಂಗ ಸಚಿವಾಲಯದ ವಕ್ತಾರ