ನೆತನ್ಯಾಹು ವಿರುದ್ಧ ಹೇಳಿಕೆಗೆ ಆಕ್ರೋಶ
ವಾಷಿಂಗ್ಟನ್, ಮಾ.೧೫- ಗಾಜಾದಲ್ಲಿ ಇಸ್ರೇಲ್ ನಡೆಸುತ್ತಿರುವ ಭೀಕರ ದಾಳಿಯಿಂದ ಮಿತ್ರರಾಷ್ಟ್ರ ಅಮೆರಿಕಾ ಕೂಡ ಇಕ್ಕಟ್ಟಿಗೆ ಸಿಲುಕಿದಂತಾಗಿದ್ದು, ಯುದ್ದ ನಿಲ್ಲಿಸುವಲ್ಲಿ ವಿಫಲತೆ ಹೊಂದಿದೆ ಎಂಬ ಆರೋಪ ಕೂಡ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಇದೀಗ ಯುಎಸ್ ಸೆನೆಟ್ ಬಹುಮತದ ನಾಯಕ ಚಕ್ ಶುಮರ್ ಅವರು, ಇಸ್ರೇಲ್ ಚುನಾವಣೆ ನಡೆಸಿ, ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಬದಲಾಯಿಸಲು ಕರೆ ನೀಡಿದ್ದಾರೆ. ಸದ್ಯ ಶುಮರ್ ಹೇಳಿಕೆಯು ಇಸ್ರೇಲ್‌ನಲ್ಲಿ ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ.
ಇಸ್ರೇಲ್ ಹಾಗೂ ಅಮೆರಿಕಾ ಜಗತ್ತಿನ ಅತ್ಯಂತ ವಿಶ್ವಾಸಾರ್ಹ ಮಿತ್ರರಾಷ್ಟ್ರರಲ್ಲಿ ಒಬ್ಬರಾಗಿದ್ದು, ಉತ್ತಮ ದ್ವಿಪಕ್ಷೀಯ ಸಂಬಂಧ ಹೊಂದಿದ ರಾಷ್ಟ್ರಗಳಾಗಿದೆ. ಆದರೆ ಇತ್ತೀಚಿಗಿನ ದಿನಗಳಲ್ಲಿ ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ದಾಳಿಯಿಂದಾಗಿ ಅಮೆರಿಕಾ ಕೂಡ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದು, ಇರಿಸು ಮುರಿಸು ಉಂಟಾಗುವಂತೆ ಮಾಡಿದೆ. ಅಲ್ಲದೆ ತನ್ನ ಮಿತ್ರರಾಷ್ಟ್ರನ ಯುದ್ದವನ್ನು ನಿಲ್ಲಿಸಲು ಅಮೆರಿಕಾ ವಿಫಲವಾಗಿದೆ ಎಂಬ ಆರೋಪ ಕೂಡ ಯುಎಸ್ ವಿರುದ್ಧ ಕೇಳಿಬಂದಿದೆ, ಸದ್ಯ ಈ ಹಿನ್ನೆಲೆಯಲ್ಲಿ ನಿನ್ನೆ ಸೆನೆಟ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ಶುಮರ್, ಗಾಝಾದಲ್ಲಿ ನಡೆಯುತ್ತಿರುವ ಸಾವು-ನೋವುಗಳು ಇಸ್ರೇಲ್ ಅನ್ನು ಪರಿಯಾ” ಆಗಿ ಪರಿವರ್ತಿಸುವ ಅಪಾಯವನ್ನುಂಟುಮಾಡುತ್ತಿದೆ. ಗಾಝಾದಲ್ಲಿ ನಾಗರಿಕರನ್ನು ರಕ್ಷಿಸುವ ನಿಟ್ಟಿನಲ್ಲಿ ಇಸ್ರೇಲ್ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಶುಮರ್ ತಿಳಿಸಿದ್ದಾರೆ. ಸದ್ಯದ ಶುಮರ್ ಹೇಳಿಕೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ನೆತನ್ಯಾಹು ಅವರ ಲಿಕುಡ್ ಪಕ್ಷವು ?ಇಸ್ರೇಲ್ ಬನಾನಾ ರಿಪಬ್ಲಿಕ್ ಅಲ್ಲ ಮತ್ತು ಪ್ರಧಾನ ಮಂತ್ರಿಯ ನೀತಿಗಳನ್ನು ಹೆಚ್ಚಿನ ಬಹುಮತದಿಂದ ನಾವು ಬೆಂಬಲಿಸುತ್ತೇವೆ. ಸೆನೆಟರ್ ಶುಮರ್ ಇಸ್ರೇಲ್‌ನ ಚುನಾಯಿತ ಸರ್ಕಾರವನ್ನು ಗೌರವಿಸಬೇಕು ಮತ್ತು ಅದನ್ನು ದುರ್ಬಲಗೊಳಿಸಬಾರದು ಎಂದು ನಿರೀಕ್ಷಿಸಲಾಗಿದೆ ಎಂದು ತಿಳಿಸಿದೆ. ಅಲ್ಲದೆ ಅಮೆರಿಕಾದ ವಾಷಿಂಗ್ಟನ್‌ನಲ್ಲಿರುವ ಇಸ್ರೇಲ್ ರಾಯಬಾರಿ ಕೂಡ ಆಕ್ರೋಶ ಹೊರಹಾಕಿದ್ದಾರೆ. ಪ್ರಜಾಪ್ರಭುತ್ವದ ಮಿತ್ರರಾಷ್ಟ್ರದ ದೇಶೀಯ ರಾಜಕೀಯ ದೃಶ್ಯದ ಬಗ್ಗೆ ಪ್ರತಿಕ್ರಿಯಿಸುವುದು ಅಸಹಾಯಕ” ಮತ್ತು ಪ್ರತಿಕೂಲವಾಗಿದೆ ಎಂದು ಪಕ್ಷ ತಿಳಿಸಿದೆ.