ಟಿಕೆಟ್ ಸಿಕ್ಕರೆ ಸ್ಪರ್ಧೆಗೆ ಸಿದ್ಧ
ಮಂಗಳೂರು,ಮಾ.೧೫-ಈ ಬಾರಿ ಲೋಕಸಭೆ ಚುನಾವಣೆಗೆ ಬಿಜೆಪಿಯಿಂದ ಟಿಕೆಟ್ ಸಿಕ್ಕರೆ ಸ್ಪರ್ಧಿಸಲು ಸಿದ್ಧ ಎಂದು ಯುವ ಬ್ರಿಗೇಡ್‌ನ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.
ಈ ಕುರಿತು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಮಾತನಾಡಿದ ಅವರು, ಚುನಾವಣೆಗೆ ಸ್ಪರ್ಧಿಸಲು ಅವಕಾಶ ಸಿಕ್ಕರೆ ನನ್ನ ವಿರೋಧವಿಲ್ಲ. ಆದರೆ ಚುನಾವಣೆಗೆ ಟಿಕೆಟ್ ಕೇಳುವುದಿಲ್ಲ ಎಂದಿದ್ದಾರೆ .ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಸಿಗುವ ಸಾಧ್ಯತೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಅಂತಹ ಅವಕಾಶ ಬಂದರೆ ಸ್ಪರ್ಧಿಸಲು ನನ್ನ ಅಭ್ಯಂತರವಿಲ್ಲ. ನಾನು ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದು ಖಚಿತವಾಗಿ ಹೇಳಿದ್ದಾರೆ. ಆದರೆ ಸಧ್ಯಕ್ಕೆ ಕೇವಲ ವದಂತಿಯಾಗಿದೆ ಎಂದು ಹೇಳಿದ್ದಾರೆ. ೨೦೧೪ ಮತ್ತು ೨೦೧೯ರ ಲೋಕಸಭೆ ಚುನಾವಣೆಯಲ್ಲೂ ಇಂತಹ ವದಂತಿ ಹಬ್ಬಿತ್ತು. ಈಗ ೨೦೨೪ ರಲ್ಲೂ ಇಂತಹ ವದಂತಿ ಹಬ್ಬಿದೆ.
ನಾನು ಚುನಾವಣೆಗೆ ಸ್ಪರ್ಧಿಸಲು ಅವಕಾಶ ಬಂದರೆ ನನಗೆ ಸಂತೋಷವಾಗುತ್ತದೆ. ಆದರೆ ನಾನಾಗಿ ಹೋಗಿ ಟಿಕೆಟ್ ಕೇಳುವುದಿಲ್ಲ. ನಾನು ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂಬುದು ದೇವರ ಇಚ್ಛೆಯಾಗಿದ್ದರೆ ಖಂಡಿತ ಹಾಗೆಯೇ ಆಗುತ್ತದೆ.ಆದರೆ ಇಲ್ಲಿಯವರೆಗೆ ಯಾರೂ ನನ್ನನ್ನು ಸಂಪರ್ಕಿಸಿಲ್ಲ, ನಾನು ಟಿಕೆಟ್ ಕುರಿತು ಯಾರನ್ನು ಸಂಪರ್ಕಿಸಿಲ್ಲ ಎಂದು ಸೂಲಿಬೆಲೆ ಸ್ಪಷ್ಟಪಡಿಸಿದ್ದಾರೆ.