ಟಿಕ್‌ಟಾಕ್ ನಿಷೇಧಕ್ಕೆ ಯುಎಸ್ ಸಂಸತ್ ಸದನ ಒಪ್ಪಿಗೆ
ವಾಷಿಂಗ್ಟನ್, ಮಾ.೧೪- ಈಗಾಗಲೇ ಭಾರತದಲ್ಲಿ ನಿಷೇಧಕ್ಕೆ ಒಳಗಾಗಿರುವ ಚೀನಾದ ಮೂಲದ ಪ್ರಖ್ಯಾತ ಸಾಮಾಜಿಕ ಜಾಲತಾಣ ಟಿಕ್‌ಟಾಕ್‌ಗೆ ಇದೀಗ ಅಮೆರಿಕಾ ಕೂಡ ದೊಡ್ಡ ಶಾಕ್ ನೀಡಿದೆ. ಟಿಕ್‌ಟಾಕ್‌ಗೆ ನಿಷೇಧ ಹೇರುವ ಮಸೂದೆಗೆ ಅಮೆರಿಕಾ ಸಂಸತ್‌ನ ಕೆಳಮನೆ (ಹೌಸ್ ಆಫ್ ರೆಪ್ರಸೆಂಟೇಟಿವ್ಸ್) ಅನುಮೋದನೆ ನೀಡಿದೆ. ಸದ್ಯ ಮಸೂದೆ ಸೆನೆಟ್‌ನಲ್ಲಿದ್ದು, ಇಲ್ಲಿ ಒಪ್ಪಿಗೆ ಪಡೆದರೆ, ಬಳಿಕ ಅಧ್ಯಕ್ಷ ಜೋ ಬೈಡೆನ್ ಅವರು ಸಹಿ ಹಾಕಿ, ಟಿಕ್‌ಟಾಕ್‌ಗೆ ನಿಷೇಧ ಹೇರಲಿದ್ದಾರೆ.
ಸದ್ಯ ಚೀನೀ ಮೂಲದ ಬೈಟ್‌ಡ್ಯಾನ್ಸ್ ಕಂಪೆನಿ ಬಳಿ ಆರು ತಿಂಗಳೊಳಗೆ ಅಮೆರಿಕಾದ ಕಂಪೆನಿಗೆ ಸಂಸ್ಥೆಯ ಮಾರಾಟ ಮಾಡಲು ಸೂಚಿಸಲಾಗಿದೆ. ಸದ್ಯ ಈ ಕ್ರಮದ ವಿರುದ್ಧ ಸಹಜವಾಗಿಯೇ ಚೀನಾ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಇದು ಯುಎಸ್‌ಗೆ ತಿರುಗುಬಾಣವಾಗಲಿದೆ ಎಂದು ಎಚ್ಚರಿಸಿದೆ. ಇನ್ನು ಟಿಕ್‌ಟಾಕ್ ನಿಷೇಧಿಸುವ ಮಸೂದೆಯನ್ನು ಕೆಳಮನೆಯಲ್ಲಿ ೩೫೨-೬೫ ಮತಗಳಿಂದ ಅನುಮೋದಿಸಲಾಗಿದೆ. ಆದರೆ ಸೆನೆಟ್‌ನ ಮುಂದಿನ ಹಂತದಲ್ಲಿ ಮಸೂದೆಗೆ ತಡೆ ಉಂಟು ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಟಿಕ್‌ಟಾಕ್ ತನ್ನ ಚೀನಾ ಮಾಲಕರಿಂದ ದೂರ ಇರಬೇಕು ಅಥವಾ ಅಮೆರಿಕದಲ್ಲಿ ನಿಷೇಧಕ್ಕೆ ಒಳಗಾಗಬೇಕು’ ಎಂಬ ಅಂಶವನ್ನು ಮಸೂದೆ ಹೊಂದಿದೆ. ಒಂದು ವೇಳೆ ಅಮೆರಿಕದಲ್ಲಿ ತನ್ನ ಕಾರ್ಯಾಚರಣೆ ಮುಂದುವರಿಸಬೇಕಿದ್ದರೆ ಟಿಕ್‌ಟಾಕ್ ತನ್ನ ಆಸ್ತಿಗಳನ್ನು ಅಮೆರಿಕದ ಸಂಸ್ಥೆಯೊಂದಕ್ಕೆ ಮಾರಬೇಕು ಎಂದು ಸೂಚಿಸಲಾಗಿದೆ. ಇನ್ನು ಸುಮಾರು ೧೫೦ ದಶಲಕ್ಷ ಅಮೆರಿಕನ್ನರು ಬಳಸುತ್ತಿರುವ ಟಿಕ್‌ಟಾಕ್ ನಿಷೇಧವನ್ನು ಸೆನೆಟ್‌ನ ಹಲವು ಸದಸ್ಯರು ವಿರೋಧಿಸುತ್ತಿದ್ದು, ಹಾಗಾಗಿ ಮುಂದಿನ ಹಂತದಲ್ಲಿ ತೊಡಕುಂಟು ಮಾಡುವ ಸಾಧ್ಯತೆ ಇದೆ. ಒಂದು ವೇಳೆ ?ವಿದೇಶಿ ಪ್ರತಿಸ್ಪರ್ಧಿಗಳು ನಿಯಂತ್ರಿಸುವ ಅಪ್ಲಿಕೇಶನ್‌ಗಳ ಕಾಯ್ದೆಯಿಂದ ಅಮೆರಿಕನ್ನರನ್ನು ರಕ್ಷಿಸುವುದು’ ಎಂಬ ಹೆಸರಿನ ಮಸೂದೆ ಸೆನೆಟ್‌ನ ಅನುಮೋದನೆ ಪಡೆದರೆ ಅಧ್ಯಕ್ಷ ಜೋ ಬೈಡನ್ ಸಹಿ ಹಾಕಲಿದ್ದಾರೆ ಎಂದು ಶ್ವೇತಭವನದ ಮೂಲಗಳು ಹೇಳಿವೆ. ೨೦೧೨ರಲ್ಲಿ ಟಿಕ್‌ಟಾಕ್ ಸ್ಥಾಪಿಸಲಾಗಿದ್ದು, ಸಂಸ್ಥೆಯು ಚೀನಾದ ಕೇಮನ್ ದ್ವೀಪಗಳಲ್ಲಿ ನೋಂದಾಯಿಸಲ್ಪಟ್ಟಿದೆ. ಯುರೋಪ್ ಹಾಗೂ ಅಮೆರಿಕಾದಾದ್ಯಂತ ಇದನ್ನು ಕೋಟ್ಯಾಂತರ ಜನರು ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಆದರೆ ಟಿಕ್‌ಟಾಕ್ ಅಮೆರಿಕಾದಲ್ಲಿ ಬಳಕೆದಾರರ ಫೋನ್‌ಗಳಲ್ಲಿ ಖಾಸಗಿ ಮಾಹಿತಿಗಳನ್ನು ಕಲೆಹಾಕಿ, ಚೀನಾಗೆ ರವಾನಿಸುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ನಿಷೇಧಕ್ಕೆ ಆಗ್ರಹ ಕೇಳಿಬಂದಿದೆ.