ಉಗ್ರವಾದಕ್ಕೆ ಬ್ರಿಟನ್‌ನಿಂದ ಹೊಸ ವ್ಯಾಖ್ಯಾನ
ಲಂಡನ್, ಮಾ.೧೪- ಅಕ್ಟೋಬರ್ ೭ರಂದು ಇಸ್ರೇಲ್ ಮೇಲೆ ಹಮಾಸ್ ದಾಳಿಯ ನಂತರ ಬ್ರಿಟನ್‌ನಲ್ಲಿ ಯಹೂದಿಗಳು ಮತ್ತು ಮುಸ್ಲಿಮರ ವಿರುದ್ಧ ದ್ವೇಷದ ಅಪರಾಧಗಳು ತೀವ್ರ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಅಲ್ಲದೆ ಧಾರ್ಮಿಕ ಮೂಲಭೂತವಾದಿಗಳ ಪ್ರಮಾಣದಲ್ಲೂ ಏರಿಕೆ ಉಂಟಾಗಿದೆ. ಈ ಉಲ್ಬಣತೆಯನ್ನು ನಿವಾರಿಸುವ ನಿಟ್ಟಿನಲ್ಲಿ ಬ್ರಿಟನ್ ಸರ್ಕಾರವು ಇದೀಗ ಉಗ್ರವಾದಕ್ಕೆ ಸಂಬಂಧಿಸಿದಂತೆ ಹೊಸ ವ್ಯಾಖ್ಯಾನವನ್ನು ಹೊರತಂದಿದೆ. ಮುಂದಿನ ದಿನಗಳಲ್ಲಿ ಇದು ಉಗ್ರವಾದ ಹಾಗೂ ಅದನ್ನು ಬೆಂಬಲಿಸುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಅವಕಾಶ ಮಾಡಿಕೊಡುತ್ತದೆ.
ಇತ್ತೀಚಿಗಿನ ದಿನಗಳಲ್ಲಿ ಬ್ರಿಟನ್‌ನಲ್ಲಿ ಮೂಲಭೂತವಾದಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದ್ದು, ದ್ವೇಷದ ಅಪರಾಧಗಳ ಸಂಖ್ಯೆಯಲ್ಲೂ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಬ್ರಿಟನ್ ಸರ್ಕಾರ ಇದೀಗ ಉಗ್ರವಾದಕ್ಕೆ ಸಂಬಂಧಿಸಿದಂತೆ ಹೊಸ ವ್ಯಾಖ್ಯಾನವನ್ನು ಹೊರತಂದಿದೆ. ಆದರೆ ಇದರ ವಿರುದ್ಧ ವಿಮರ್ಶಕರು ಟೀಕೆ ಮಾಡಿದ್ದು, ಇದರಿಂದ ವಾಕ್ ಸ್ವಾತಂತ್ರ್ಯಕ್ಕೆ ಹಾನಿ ಉಂಟು ಮಾಡಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಇನ್ನು ಬ್ರಿಟನ್ ಉಗ್ರವಾದದ ಕುರಿತಾದ ಹೊಸ ವ್ಯಾಖ್ಯಾನದ ಪ್ರಕಾರ, ಇದು ಹಿಂಸಾಚಾರ, ದ್ವೇಷ ಅಥವಾ ಅಸಹಿಷ್ಣುತೆಯ ಆಧಾರದ ಮೇಲೆ ಸಿದ್ದಾಂಗತರ ಪ್ರಚಾರ ಅಥವಾ ಪ್ರಗತಿ, ಇದು ಇತರರ ಮೂಲಭೂತ ಹಕ್ಕುಗಳು ಹಾಗೂ ಸ್ವಾತಂತ್ರ್ಯಗಳನ್ನು ನಿರಾಕರಿಸುವ, ನಾಶಮಾಡುವ ಗುರಿಯನ್ನು ಹೊಂದಿದೆ. ಅಲ್ಲದೆ ಬ್ರಿಟನ್‌ನ ಉದಾರ ಸಂಸದೀಯ ಪ್ರಜಾಪ್ರಭುತ್ವ ಮತ್ತು ಪ್ರಜಾಸತ್ತಾತ್ಮಕ ಹಕ್ಕುಗಳ ವ್ಯವಸ್ಥೆಯನ್ನು ದುರ್ಬಲಗೊಳಿಸುವುದು, ರದ್ದುಗೊಳಿಸುವುದು ಅಥವಾ ಬದಲಿಸುವುದಾಗಿದೆ. ಇದರ ಗುರಿ ಸಾಧನೆಗೆ ಇತರರನ್ನು ಅನುಮತಿಸುವ ವಾತಾವರಣವನ್ನು ಉದ್ದೇಶಪೂರ್ವಕವಾಗಿ ರಚಿಸುತ್ತಿದೆ. ಇನ್ನು ಈ ಹೊಸ ವ್ಯಾಖ್ಯಾನವು ತಮ್ಮ ಹಿಂಸಾತ್ಮಕ, ದ್ವೇಷಪೂರಿತ ಅಥವಾ ಅಸಹಿಷ್ಣು ಗುರಿಗಳನ್ನು ಮುನ್ನಡೆಸುವ ಉಗ್ರಗಾಮಿಗಳ ಸಾರ್ವಜನಿಕ ನಡವಳಿಕೆಯ ಮೂಲಕ ಉಗ್ರವಾದವು ಹೇಗೆ ಸಾಕ್ಷಿಯಾಗಿದೆ ಎಂಬುದನ್ನು ಸ್ಪಷ್ಟವಾಗಿ ವಿವರಿಸಲು ಸಹಾಯ ಮಾಡುತ್ತದೆ ಎಂದು ಬ್ರಿಟನ್ ಸರ್ಕಾರದ ವೆಬ್‌ಸೈಟ್‌ನಲ್ಲಿ ತಿಳಿಸಲಾಗಿದೆ. ಇನ್ನು ಹೊಸ ವ್ಯಾಖ್ಯಾನದ ಹಿಂದೆ ಇರುವ ಇಲಾಖೆಯ ಮುಖ್ಯಸ್ಥ, ಸಮುದಾಯಗಳ ಸಚಿವ ಮೈಕೆಲ್ ಗೋವ್ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ್ದು, ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡಲು ಮತ್ತು ಇತರ ಜನರ ಮೂಲಭೂತ ಹಕ್ಕುಗಳನ್ನು ನಿರಾಕರಿಸುವವರಿಗೆ ಸರ್ಕಾರವು ಅಜಾಗರೂಕತೆಯಿಂದ ವೇದಿಕೆಯನ್ನು ಒದಗಿಸುವುದಿಲ್ಲ ಎಂದು ಇಂದಿನ ಕ್ರಮಗಳು ಖಚಿತಪಡಿಸುತ್ತವೆ ಎಂದು ತಿಳಿಸಿದ್ದಾರೆ. ಇನ್ನು ಬ್ರಿಟನ್ ಈಗಾಗಲೇ ಭಯೋತ್ಪಾದನೆಯಲ್ಲಿ ತೊಡಗಿರುವ ಗುಂಪುಗಳನ್ನು ನಿಷೇಧಿಸುತ್ತದೆ ಮತ್ತು ಅಂತಹ ಸಂಘಟನೆಗಳಿಗೆ ಸದಸ್ಯತ್ವ ಅಥವಾ ಬೆಂಬಲವು ಕ್ರಿಮಿನಲ್ ಅಪರಾಧವಾಗಿದೆ.