18 ಓಟಿಟಿ ನಿಷೇಧಿಸಿದ ಕೇಂದ್ರ
ನವದೆಹಲಿ,ಮಾ.೧೪-ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಒಟ್ಟು ೧೮ ಓಟಿಟಿ ಪ್ಲಾಟ್‌ಫಾರ್ಮ್‌ಗಳ ಮೇಲೆ ಕಠಿಣ ಕ್ರಮ ಕೈಗೊಂಡಿದೆ. ಅಶ್ಲೀಲ ಮತ್ತು ಅಸಭ್ಯ ವಿಷಯಗಳನ್ನು ಪ್ರಕಟಿಸುವ ೧೮ ಓಟಿಟಿ ಪ್ಲಾಟ್‌ಫಾರ್ಮ್‌ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಈ ವೇದಿಕೆಗಳಿಗೆ ಈ ಹಿಂದೆ ಹಲವು ಬಾರಿ ಎಚ್ಚರಿಕೆ ನೀಡಲಾಗಿತ್ತು ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ತಿಳಿಸಿದೆ. ಇದರೊಂದಿಗೆ ಸರ್ಕಾರವು ೧೯ ವೆಬ್‌ಸೈಟ್‌ಗಳು, ೧೦ ಅಪ್ಲಿಕೇಶನ್‌ಗಳು ಮತ್ತು ೫೭ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳನ್ನು ನಿರ್ಬಂಧಿಸಿದೆ.
ಈ ಪ್ಲಾಟ್‌ಫಾರ್ಮ್‌ಗಳ ಅಶ್ಲೀಲ ವಿಷಯದ ಕಾರಣದಿಂದ ದೇಶಾದ್ಯಂತ ನಿಷೇಧಿಸಿ ಕೇಂದ್ರ ಸಚಿವಾಲಯ ನೋಟಿಸ್ ಜಾರಿ ಮಾಡಿದೆ. ಆಯಾ ವೆಬ್‌ಸೈಟ್‌ಗಳ ನಿರ್ವಾಹಕರಿಗೆ ಕೇಂದ್ರ ಸರ್ಕಾರ ಈಗಾಗಲೇ ಹಲವು ಸೂಚನೆಗಳನ್ನು ನೀಡಿದೆ. ಆದರೆ, ಉಲ್ಲಂಘನೆಯ ಕಾರಣದಿಂದ ನಿಷೇಧ ಹೇರಲಾಗಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ಟ್ವಿಟರ್ ಮೂಲಕ ತಿಳಿಸಿದೆ.
ಸಚಿವಾಲಯ ಹೊರಡಿಸಿದ ಹೇಳಿಕೆಯ ಪ್ರಕಾರ, ನಿರ್ಬಂಧಿಸಲಾದ ಓಟಿಟಿ ಪ್ಲಾಟ್‌ಫಾರ್ಮ್‌ಗಳ ಬಗ್ಗೆ, ಅವರು ಮಹಿಳೆಯರ ಬಗ್ಗೆ ಅಶ್ಲೀಲ, ಅಸಭ್ಯ ಮತ್ತು ಅವಹೇಳನಕಾರಿ ವಿಷಯವನ್ನು ಪ್ರಸಾರ ಮಾಡುತ್ತಾರೆ ಎಂದು ಹೇಳಲಾಗಿದೆ.
ಯೆಸ್ಮಾ ಸೇರಿದಂತೆ ೧೮ ಓಟಿಟಿ ಪ್ಲಾಟ್‌ಫಾರ್ಮ್‌ಗಳ ಪ್ರಸಾರವನ್ನು ಕೇಂದ್ರವು ನಿರ್ಬಂಧಿಸಿದೆ.
ಡ್ರೀಮ್ಸ್ ಫಿಲ್ಮ್ಸ್ ವೂವಿ ಯೆಸ್ಸ್ಮಾ ಅನ್‌ಕಟ್ ಅಡ್ಡಾ ಟ್ರೈ ಫ್ಲಿಕ್ಕ್ಸ್ ಎಕ್ಸ್ ಪ್ರೈಮ್ ನಿಯಾನ್ ಎಕ್ಸ್ ವಿಐಪಿ ಮೂಡ್‌ಎಕ್ಸ್ ಬೆಶರಾಮ್ಸ್ ಹಂಟರ್ಸ್ ರ್ಯಾಬಿಟ್ ಎಕ್ಸ್‌ಟ್ರಾಮೂಡ್ ನ್ಯೂಫ್ಲಿಕ್ಸ್ ಮೊಜ್‌ಫ್ಲಿಕ್ಸ್ ಹಾಟ್ ಶಾಟ್ಸ್ ವಿಐಪಿ ಫ್ಯೂಗಿ ಚಿಕೂಫ್ಲಿಕ್ಸ್ ಪ್ರೈಮ್ ಪ್ಲೇ ಇದರಲ್ಲಿ ಸೇರಿವೆ.
ಅಶ್ಲೀಲ ವಿಷಯಗಳ ಪ್ರಸಾರವೇ ಇದಕ್ಕೆ ಕಾರಣ ಎನ್ನಲಾಗಿದೆ .ಐಟಿ ಕಾಯ್ದೆ, ಭಾರತೀಯ ದಂಡ ಸಂಹಿತೆ ಮತ್ತು ಮಹಿಳೆಯರ ಅಸಭ್ಯ ಪ್ರಾತಿನಿಧ್ಯ (ನಿಷೇಧ) ಕಾಯ್ದೆಯ ಆಧಾರದ ಮೇಲೆ ಕ್ರಮ ಕೈಗೊಂಡಿದೆ ಎಂದು ತಿಳಿಸಲಾಗಿದೆ.