ಆಕ್ರಮಿತ ಉಕ್ರೇನ್ ಪ್ರದೇಶಗಳಲ್ಲಿರಷ್ಯಾ ಮತದಾನ ಪ್ರಕ್ರಿಯೆ ಆರಂಭ
ಮಾಸ್ಕೋ (ರಷ್ಯಾ), ಮಾ.೧೩- ಮಾರ್ಚ್ ೧೫ ಹಾಗೂ ೧೭ರ ನಡುವೆ ರಷ್ಯಾದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ರಷ್ಯಾ ಆಕ್ರಮಿಸಿಕೊಂಡಿರುವ ಉಕ್ರೇನ್ ಪ್ರದೇಶಗಳಲ್ಲಿ ಕೂಡ ಅಧಿಕಾರಿಗಳು ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಈಗಾಗಲೇ ಆರಂಭಿಸಿದ್ದಾರೆ.
ಇದೇ ಮೊದಲ ಬಾರಿಗೆ ರಷ್ಯಾದಲ್ಲಿ ಮೂರು ದಿನಗಳ ಕಾಲ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಆದರೆ ಉಕ್ರೇನ್‌ನಿಂದ ವಶಪಡಿಸಿಕೊಂಡಿರುವ ಝಪೊರಿಝಿಯಾ, ಖೆರ್ಸನ್, ಡೊನೆಟ್ಸ್ಕ್ ಮತ್ತು ಲುಹಾನ್ಸ್ಕ್ ಪ್ರಾಂತ್ಯಗಳಲ್ಲಿ ಈಗಾಗಲೇ ಹೆಚ್ಚುವರಿ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಈ ನಡುವೆ ಅಧಿಕಾರಿಗಳು ಶಸ್ತ್ರಸಜ್ಜಿತ ಸೈನಿಕರೊಂದಿಗೆ ಮತಪೆಟ್ಟಿಗೆಗಳನ್ನು ಹಿಡಿದುಕೊಂಡು ಮತದಾರರ ಹುಡುಕಾಟದಲ್ಲಿ ತೆರಳುತ್ತಿದ್ದಾರೆ ಎಂದು ಹಲವರು ದೂರಿಕೊಂಡಿದ್ದಾರೆ.
ಇನ್ನು ಅಧ್ಯಕ್ಷೀಯ ಚುನಾವಣೆಯಲ್ಲಿ ವ್ಲಾದಿಮಿರ್ ಪುಟಿನ್ ಮತ್ತೊಮ್ಮೆ ಗೆಲುವು ಸಾಧಿಸುವುದು ಬಹುತೇಕ ಖಚಿತವಾಗಿದ್ದರೂ ಹೆಚ್ಚಿನ ಮತದಾನ ನಡೆಯುವಂತೆ ಅಲ್ಲಿನ ಅಧಿಕಾರಿಗಳು ನೋಡಿಕೊಳ್ಳುತ್ತಿದ್ದಾರೆ.
ಈ ಮೂಲಕ ಪುಟಿನ್ ಆಡಳಿತವನ್ನು ಕಾನೂನುಬದ್ಧಗೊಳಿಸಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಅದೂ ಅಲ್ಲದೆ ಉಕ್ರೇನ್ ಮೇಲೆ ರಷ್ಯಾದ ಆಕ್ರಮಣವನ್ನು ಸಮರ್ಥಿಸಲು ಕೂಡ ಇದನ್ನು ಬಳಸಲಾಗುತ್ತಿದೆ.ಪುಟಿನ್ ಸೇರಿದಂತೆ ಒಟ್ಟು ನಾಲ್ವರು ಅಧ್ಯಕ್ಷೀಯ ಚುನಾವಣೆಯಲ್ಲಿ ಭಾಗವಹಿಸುತ್ತಿದ್ದಾರೆ. ಆದರೆ ಉಳಿದ ಮೂವರು ಕೂಡ ಯಾವುದೇ ರೀತಿಯಲ್ಲಿ ಪುಟಿನ್‌ಗೆ ಸವಾಲೆಸೆಯಲು ಸಾಧ್ಯವಿಲ್ಲ ಎನ್ನಲಾಗಿದೆ.ವಶಪಡಿಸಿಕೊಂಡಿರುವ ಪ್ರಾಂತ್ಯಗಳಲ್ಲಿ ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದರೂ ಅಧಿಕಾರಿಗಳು ಮತಪೆಟ್ಟಿಗೆ ಹಿಡಿದುಕೊಂಡು ಮನೆ ಮನೆಗೆ ಹೋಗುತ್ತಿದ್ದಾರೆ.
ಹಾಗಾಗಿ ಮತದಾನ ನಡೆಸಲು ಮತದಾನ ಕೇಂದ್ರಗಳಿಗೆ ಹೋಗುವ ಅಗತ್ಯವಿಲ್ಲ. ಆತ್ಮೀಯ ಮತದಾರರೇ, ನಿಮ್ಮ ಸುರಕ್ಷತೆಯ ಬಗ್ಗೆ ನಾವು ಚಿಂತಿಸುತ್ತೇವೆ. ನೀವು ಮತ ಚಲಾಯಿಸಲು ಎಲ್ಲಿಯೂ ಹೋಗಬೇಕಾಗಿಲ್ಲ. ನಾವು ಮತಪತ್ರಗಳು ಮತ್ತು ಪೆಟ್ಟಿಗೆಗಳೊಂದಿಗೆ ನಿಮ್ಮ ಮನೆಗೆ ಬರುತ್ತೇವೆ ಎಂದು ಝಪೋರಿಝಿಯಾ ಪ್ರದೇಶದಲ್ಲಿ ರಷ್ಯಾ ಸ್ಥಾಪಿಸಿದ ಚುನಾವಣಾ ಆಯೋಗವು ಸಾಮಾಜಿಕ ಮಾಧ್ಯಮದಲ್ಲಿ ಹೇಳಿದೆ.