ಎಐ ತಂತ್ರಜ್ಞಾನದಿಂದ ಮಾನವಕುಲ ನಾಶ
ವಾಷಿಂಗ್ಟನ್, ಮಾ.೧೩- ಸದ್ಯ ಜಾಗತಿಕ ಮಟ್ಟದಲ್ಲಿ ಕೃತಕ ಬುದ್ಧಿಮತ್ತೆ (ಎಐ)ಯ ಪ್ರಯೋಗ ಎಲ್ಲೆಡೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಎಐ ಕುರಿತಾದ ಸಮಗ್ರ ವರದಿಯನ್ನು ಸಲ್ಲಿಸಲು ಅಮೆರಿಕಾ ನಿಯೋಜಿಸಿದ್ದ ಸಂಸ್ಥೆ ಇದೀಗ ತನ್ನ ವರದಿಯನ್ನು ಒಪ್ಪಿಸಿದೆ. ಅತ್ಯಂತ ಮುಂದುವರಿದ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ (ಎಐ)ವು ಅಣ್ವಸ್ತ್ರಗಳಿಗೆ ಸರಿಸಮಾನವಾಗಿ ಜಾಗತಿಕ ಭದ್ರತೆಯನ್ನು ಅಸ್ಥಿರಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಗ್ಲ್ಯಾಡ್ಸ್ಟೋನ್ ಎಐ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.೨೦೨೨ರಲ್ಲಿ ಎಐ ಕುರಿತಾದ ಸಮಗ್ರ ವರದಿ ಸಲ್ಲಿಸುವಂತೆ ಅಮೆರಿಕಾ ಸರ್ಕಾರವು ಗ್ಲ್ಯಾಡ್ಸ್ಟೋನ್ ಸಂಸ್ಥೆಗೆ ಸೂಚಿಸಿತ್ತು.
ಸದ್ಯ ಎರಡು ವರ್ಷಗಳ ಅಧ್ಯಯನದ ಬಳಿಕ ಸಂಸ್ಥೆ ತನ್ನ ವರದಿಯನ್ನು ಬಿಡುಗಡೆ ಮಾಡಿದೆ. ಮುಂದಿನ ಐದು ವರ್ಷಗಳಲ್ಲಿ ಅಥವಾ ಅದಕ್ಕಿಂತ ಶೀಘ್ರದಲ್ಲೇ ಕೃತಕ ಬುದ್ದಿಮತ್ತೆಯು ಮಾನವನಿಗೆ ಸರಿಸಮವಾಗಿ ಇಲ್ಲವೇ ಆತನನ್ನು ಮೀರಿಸುವಂತಹ ಕೆಲಸಗಳನ್ನು ಮಾಡುವ ಸಾಮರ್ಥ್ಯವನ್ನು ಪಡೆಯಲಿದೆ. ಎಐ ತಂತ್ರಜ್ಞಾನವು ಮಾನವಕುಲವನ್ನೇ ನಾಶಪಡಿಸಬಲ್ಲದು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ರಾಷ್ಟ್ರೀಯ ಭದ್ರತೆಗೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದಿಂದ ಹೆಚ್ಚುತ್ತಿರುವ ಅಪಾಯವನ್ನು ತಡೆಗಟ್ಟಲು ಕ್ಷಿಪ್ರ ಹಾಗೂ ನಿರ್ಣಾಯಕ ಕ್ರಮವನ್ನು ಕೈಗೊಳ್ಳುವಂತೆಯೂ ವರದಿಯು ಅಮೆರಿಕ ಸರಕಾರವನ್ನು ಆಗ್ರಹಿಸಿದೆ. ಎಐ ತಂತ್ರಜ್ಞಾನದ ಮಾದರಿಗಳನ್ನು ಬಹಿರಂಗಪಡಿಸುವುದಕ್ಕೆ ಸಂಬಂಧಿಸಿದ ಕಾನೂನು ಉಲ್ಲಂಘನೆಗಳಿಗೆ ಜೈಲು ಶಿಕ್ಷೆ ಸೇರಿದಂತೆ ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸುವಂತೆಯೂ ವರದಿ ಶಿಫಾರಸು ಮಾಡಿದೆ. ಕೃತಕ ಬುದ್ಧಿಮತ್ತೆ ಕ್ಷೇತ್ರದ ಮೂವರು ಸಂಶೋಧಕರು ಈ ವರದಿಯನ್ನು ಸಿದ್ಧಪಡಿಸಿದ್ದು, ಸರಕಾರಿ ಅಧಿಕಾರಿಗಳು ಸೇರಿದಂತೆ ೨೦೦ಕ್ಕೂ ಅಧಿಕ ಮಂದಿ ತಜ್ಞರು, ಓಪನ್ ಎಐ, ಗೂಗಲ್ ಡೀಪ್ ಮೈಂಡ್, ಆಂಥ್ರೊಪಿಕ್ ಹಾಗೂ ಮೆಟಾದಂಥ ಪ್ರಮುಖ ಕೃತಕ ಬುದ್ಧಿಮತ್ತೆ ಕಂಪೆನಿಗಳ ಉದ್ಯೋಗಿಗಳ ಅಭಿಪ್ರಾಯಗಳನ್ನು ಸಂಗ್ರಹಿಸಿದ್ದರು.