ಕೆಫೆ ಸ್ಫೋಟ:ಶಂಕಿತ ವಶಕ್ಕೆ
ಬೆಂಗಳೂರು,ಮಾ.೧೩-ವೈಟ್ ಫೀಲ್ಡ್ ನ ಬ್ರೂಕ್ ಫೀಲ್ಡ್‌ನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ರಾಷ್ಟ್ರೀಯ ತನಿಖಾ ದಳ(ಎನ್ ಐಎ) ಅಧಿಕಾರಿಗಳು ಇಂದು ಮುಂಜಾನೆ ಬಳ್ಳಾರಿಯಲ್ಲಿ ಶಂಕಿತನೊಬ್ಬನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಳ್ಳಾರಿಯ ಟ್ಯಾಂಕ್ ಬಂಡ್ ರೋಡ್ ಗಲ್ಲಿಯ ಮೋತಿ ಸಮೀಪದ ಹೊಸ ಬಸ್ ನಿಲ್ದಾಣದ ಬಳಿ ವಾಸಿಸುತ್ತಿದ್ದ ತೋರಣಗಲ್ ನ ಜಿಂದಾಲ್ ಕಂಪನಿಯ ಎಲೆಕ್ಟ್ರಿಕಲ್ ವೃತ್ತಿಯ ಶಬ್ಬೀರ್ ಬಂಧಿತ ಶಂಕಿತ ಆರೋಪಿಯಾಗಿದ್ದು, ಈತನಿಗೂ ಸ್ಪೋಟಕ್ಕೂ ಅತ್ಯಂತ ನಿಕಟವಾದ ಸಂಬಂಧ ಇರುವುದು ತನಿಖೆಯಲ್ಲಿ ಪತ್ತೆಯಾಗಿದೆ.
ಬಾಂಬ್ ಸ್ಫೋಟದ ಸಂಬಂಧ ಕೆಲ ದಿನಗಳ ಹಿಂದಷ್ಟೇ ಆರೋಪಿಯೊಬ್ಬನನ್ನು ಬಂಧಿಸಿ ವಿಚಾರಣೆ ನಡೆಸಿದ್ದು,ಆತ ನೀಡಿದ ಮಾಹಿತಿಯನ್ನು ಆಧರಿಸಿ ಕಾರ್ಯಾಚರಣೆ ಕೈಗೊಂಡು ಮೋತಿ ಸಮೀಪದ ಹೊಸ ಬಸ್ ನಿಲ್ದಾಣದ ದಾರಿಯಲ್ಲಿರುವ ಮನೆಯಿಂದ ಬೆಳಗಿನ ಜಾವ ೪ ಗಂಟೆ ಸುಮಾರಿಗೆ ಶಬ್ಬೀರ್ ನನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ.ಶಂಕಿತ ಶಬ್ಬೀರ್ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ನಡೆಸಿದವನಿಗೆ ಕರೆ ಮಾಡಿರುವುದು ಎನ್ ಐಎ ಅಧಿಕಾರಿಗಳ ತನಿಖೆಯಲ್ಲಿ ಪತ್ತೆಯಾಗಿದೆ.
ಕಳೆದ ಮಾರ್ಚ್ ೧ರಂದು ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟ ಉಗ್ರ ಬೆಂಗಳೂರಿನಿಂದ ತಪ್ಪಿಸಿಕೊಂಡು ತುಮಕೂರು ಮೂಲಕ ಬಳ್ಳಾರಿಗೆ ಹೋಗಿದ್ದ ಎಂದು ಹೇಳಲಾಗಿದೆ. ಆ ಸಂದರ್ಭದಲ್ಲಿ ಕೌಲ್ ಬಜಾರ್ ಬಂಧಿತ ಶಬ್ಬೀರ್‌ನನ್ನು ಭೇಟಿ ಮಾಡಿದ್ದ ಎಂದು ಹೇಳಲಾಗಿದೆ.ಶಂಕಿತ ಉಗ್ರ ಬಳ್ಳಾರಿಗೆ ಬಂದಿದ್ದಾಗ ಆತನಿಗೆ ಹೈದರಾಬಾದ್‌ಗೆ ಹೋಗಲು ಶಬ್ಬೀರ್ ಸಹಾಯ ಮಾಡಿದ್ದು ಶಂಕಿತ ಉಗ್ರ ಹೈದರಾಬಾದ್‌ನಲ್ಲಿ ತಲೆಮರೆಸಿಕೊಂಡಿರುವ ಶಂಕೆ ವ್ಯಕ್ತವಾಗಿದೆ.ಬಂಧಿತ ಶಬ್ಬೀರ್ ಸ್ಪೋಟ ನಡೆಸಿ ಶಂಕಿತ ಉಗ್ರನೊಂದಿಗೆ ಸಂಪರ್ಕ ಹೊಂದಿರವ ಮಾಹಿತಿ ಲಭ್ಯವಾಗಿದ್ದು ಪ್ರಾಥಮಿಕ ವಿಚಾರಣೆಯ ಬಳಿಕ ನಗರಕ್ಕೆ ಕರೆತಂದಿರುವ ಎನ್ ಐ ಎ ಅಧಿಕಾರಿಗಳು ರಹಸ್ಯ ಸ್ಥಳದಲ್ಲಿ ವಿಚಾರಣೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.ಬಾಂಬರ್ ಕಳೆದ ಮಾರ್ಚ್ ೧ರಂದು ಬಾಂಬ್ ಸ್ಫೋಟದ ಬಳಿಕ ಬಳ್ಳಾರಿಯತ್ತ ಪ್ರಯಾಣ ಬೆಳೆಸಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಮಾ.೧ರಂದು ಮಧ್ಯಾಹ್ನ ೧೧.೫೫ಕ್ಕೆ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಫಿಕ್ಸ್ ಮಾಡಿದ್ದ, ಬಳಿಕ ೧೨.೫೫ಕ್ಕೆ ಬಾಂಬ್ ಸ್ಫೋಟ ಆಗುವಷ್ಟರಲ್ಲಿ ಮಾರತ್ ಹಳ್ಳಿ-ಸಿಲ್ಕ್ ಬೋರ್ಡ್- ಗೋರಗುಂಟೆಪಾಳ್ಯ ಮಾರ್ಗದಲ್ಲಿ ಪ್ರಯಾಣಿಸಿದ್ದ. ಮಧ್ಯಾಹ್ನ ೧.೩೦ ಸುಮಾರಿಗೆ ಗೊರಗುಂಟೇಪಾಳ್ಯದಲ್ಲಿ ಹುಮ್ನಾಬಾದ್ ಬಸ್ ಹತ್ತಿದ್ದ. ಸಂಜೆ ನಾಲ್ಕು ಗಂಟೆಯಷ್ಟರಲ್ಲಿ ಕಳ್ಳಂಬೆಳ್ಳ ಟೋಲ್ ಮೂಲಕ ಸಾಗಿ, ರಾತ್ರಿ ೯ ಗಂಟೆ ಸುಮಾರಿಗೆ ಬಳ್ಳಾರಿ ಬಸ್ ನಿಲ್ದಾಣದಲ್ಲಿ ಆರೋಪಿ ಕಾಣಿಸಿಕೊಂಡಿದ್ದ. ಹೀಗಾಗಿ ಆರೋಪಿಯ ಬೆನ್ನತ್ತಿ ಸಿಸಿಬಿ, ಎನ್‌ಐಎ ತಂಡಗಳು ಬಳ್ಳಾರಿಗೆ ತೆರಳಿದ್ದವು.
ಬಳ್ಳಾರಿ ಮಾಡಲ್ ಮಾದರಿಯಲ್ಲಿ ರಾಮೇಶ್ವರಂ ಕೆಫೆ ಸ್ಫೋಟ ನಡೆದಿದೆ ಎಂಬ ಮಾಹಿತಿಯ ಆಧಾರದಲ್ಲಿ ಎನ್‌ಐಎ ತಂಡ ಬಳ್ಳಾರಿಯಲ್ಲಿ ಶಂಕಿತರ ಮನೆಗಳಲ್ಲಿ ಎನ್‌ಐಎ ತೀವ್ರ ಶೋಧ ನಡೆಸಿತ್ತು. ಈ ನಡುವೆ ಶಂಕಿತ ಉಗ್ರ ಮತ್ತು ಶಬ್ಬೀರ್ ನಡುವಿನ ಭೇಟಿಯ ಒಂದು ಸಣ್ಣ ಸಾಕ್ಷಿ ಸಿಕ್ಕಿತ್ತು. ಅದನ್ನು ಬೆನ್ನಟ್ಟಿ ಈಗ ಆತನನ್ನು ವಶಕ್ಕೆ ಪಡೆದಿದೆ.
ನಾಲ್ವರು ಶಂಕಿತರಿಗೆ ಡ್ರಿಲ್:
ಬಳ್ಳಾರಿಯಲ್ಲಿ ಹಳೆ ಕೇಸ್‌ಗಳಲ್ಲಿ ಬಂಧನವಾಗಿರುವ ಶಂಕಿತರನ್ನು ಈಗಾಗಲೇ ವಶಕ್ಕೆ ಪಡೆದು ಎನ್‌ಐಎ ವಿಚಾರಣೆ ನಡೆಸುತ್ತಿದೆ. ಜತೆಗೆ ನಾಪತ್ತೆಯಾಗಿರುವ ಆರೋಪಿಗಳ ಕುಟುಂಬಸ್ಥರನ್ನೂ ವಿಚಾರಣೆ ಮಾಡಲಾಗುತ್ತಿದೆ. ಬಳ್ಳಾರಿಯ ಶಂಕಿತ ಉಗ್ರ ಮಿನಾಜ್ ಅಲಿಯಸ್ ಸುಲೈಮಾನ್, ಸೈಯದ್ ಸಮೀರ್, ಮುಂಬೈನ ಅನಾಸ್ ಇಕ್ಬಾಲ್ ಶೇಖ್, ದೆಹಲಿಯ ಶಯಾನ್ ರೆಹಮಾನ್ ಅಲಿಯಾಸ್ ಹುಸೈನ್‌ನನ್ನು ನ್ಯಾಯಾಲಯದ ಆದೇಶದ ಮೇರೆಗೆ ವಶಕ್ಕೆ ಪಡೆದು, ಎನ್‌ಐಎ ವಿಚಾರಣೆ ಮಾಡುತ್ತಿದೆ.
ಬಳ್ಳಾರಿಯಲ್ಲೇ ಮೊಕ್ಕಾಂ:
ಬಳ್ಳಾರಿ ಮೂಲದ ಶಂಕಿತ ಉಗ್ರ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಮಿನಾಜ್ ಅಲಿಯಾಸ್ ಸುಲೈಮಾನ್ ಬಾಂಬ್ ಸ್ಫೋಟದ ರೂವಾರಿ ಇರಬಹುದು ಎನ್ನುವ ಶಂಕೆಯಿದ್ದ ಎನ್‌ಐಎ ಅಧಿಕಾರಿಗಳು ಬಳ್ಳಾರಿಯಲ್ಲೇ ಬೀಡು ಬಿಟ್ಟು ಶಬ್ಬೀರ್ ನನ್ನು ಬಂಧಿಸಿದ್ದಾರೆ.
ಬಾಂಬ್ ಸ್ಫೋಟ ನಡೆಸಿದ ಬಾಂಬರ್ ಬೆಂಗಳೂರಿನಿಂದ ಬಸ್ಸು ಹತ್ತಿ ಬಳ್ಳಾರಿಗೆ ಹೋಗಿರುವುದು ಸ್ಪಷ್ಟವಾಗಿದೆ. ಆದರೆ ಅಲ್ಲಿಂದ ಬೇರೆಲ್ಲಿಗೂ ಹೋದ ಬಗ್ಗೆ ಯಾವುದೇ ಸುಳಿವು ದೊರೆತಿಲ್ಲ. ಅಂದು ರಾತ್ರಿ ೯ ಗಂಟೆ ಸುಮಾರಿಗೆ ಬಸ್ ನಿಲ್ದಾಣದ ಬಳಿ ಈತ ಕಾಣಿಸಿಕೊಂಡಿದ್ದ. ಆ ಬಳಿಕ ಎಲ್ಲಿಯೂ ಆರೋಪಿಯ ಚಲನವಲನದ ಬಗ್ಗೆ ಸುಳಿವು ಇಲ್ಲದಿರುವುದರಿಂದ, ಆತ ಬಳ್ಳಾರಿಯಲ್ಲೇ ಅಡಗಿಕೊಂಡಿರಬಹುದು ಎಂದು ಶಂಕಿಸಲಾಗಿತ್ತು.
ಐಎಸ್‌ಐಎಸ್ ಉಗ್ರ:
ಬಳ್ಳಾರಿ ಮೂಲದ ಮಿನಾಜ್ ಅಲಿಯಾಸ್ ಸುಲೈಮಾನ್ ಗ್ಯಾಂಗ್‌ನಿಂದಲೇ ಕೃತ್ಯ ನಡೆದಿರಬಹುದು ಎಂಬ ದಟ್ಟ ಅನುಮಾನ ಮೂಡಿದೆ. ಆತ ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದು, ಆತನನ್ನು ವಿಚಾರಣೆ ನಡೆಸಲಾಗಿದೆ.