ಉಕ್ರೇನ್ ಹೋರಾಟಕ್ಕೆ ಟ್ರಂಪ್ ನಯಾಪೈಸೆ ನೀಡಲ್ಲ
ನ್ಯೂಯಾರ್ಕ್, ಮಾ.೧೨- ಡೊನಾಲ್ಡ್ ಟ್ರಂಪ್ ಅವರು ಮತ್ತೊಮ್ಮೆ ಯುಎಸ್ ಅಧ್ಯಕ್ಷರಾಗಿ ಆಯ್ಕೆಯಾದರೆ ರಷ್ಯಾದ ಆಕ್ರಮಣದ ವಿರುದ್ಧ ಉಕ್ರೇನ್ ಹೋರಾಟಕ್ಕೆ ಧನಸಹಾಯ ನೀಡುವುದಿಲ್ಲ. ರಷ್ಯಾ-ಉಕ್ರೇನ್ ಯುದ್ಧವನ್ನು ಹೇಗೆ ಕೊನೆಗೊಳಿಸಬೇಕು ಎಂಬುದರ ಕುರಿತು ಟ್ರಂಪ್ ಅವರು ಸಮಗ್ರ ವಿವರವಾದ ಯೋಜನೆಗಳನ್ನು ಹೊಂದಿದ್ದಾರೆ ಎಂದು ಹಂಗೇರಿಯ ಪ್ರಧಾನಿ ವಿಕ್ಟರ್ ಓರ್ಬನ್ ಹೇಳಿದ್ದಾರೆ. ಟ್ರಂಪ್ ಹಾಗೂ ಓರ್ಬನ್ ನಿಕಟ ಮಿತ್ರರಾಗಿದ್ದಾರೆ. ಅಲ್ಲದೆ ೨೦೨೪ರಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್‌ಗೆ ಓರ್ಬನ್ ಬೆಂಬಲ ನೀಡಿದ್ದಾರೆ.
ಫ್ಲೋರಿಡಾದಲ್ಲಿ ಮಾಜಿ ಅಮೆರಿಕಾ ಅಧ್ಯಕ್ಷ ಟ್ರಂಪ್ ಅವರನ್ನು ಭೇಟಿಯಾದ ಬಳಿಕ ಓರ್ಬನ್ ಈ ಹೇಳಿಕೆ ನೀಡಿದ್ದಾರೆ. ಟ್ರಂಪ್ ಅವರು ಉಕ್ರೇನ್-ರಷ್ಯಾ ಯುದ್ಧದಲ್ಲಿ ಒಂದು ಪೈಸೆಯನ್ನೂ ನೀಡುವುದಿಲ್ಲ. ಹಾಗಾಗಿಯೇ ರಷ್ಯಾ-ಉಕ್ರೇನ್ ನಡುವಿನ ಯುದ್ದವು ಅಂತ್ಯಗೊಳ್ಳುತ್ತದೆ. ಉಕ್ರೇನ್‌ಗೆ ತನ್ನ ಸ್ವಂತ ಕಾಲಿನ ಮೇಲೆ ನಿಲ್ಲಲು ಸಾಧ್ಯವಿಲ್ಲ ಎಂಬುದು ಸ್ಪಷ್ಟವಾಗಿದೆ. ಒಂದು ವೇಳೆ ಯುರೋಪಿಯನ್ನರ ಜೊತೆಗೂಡಿ ಅಮೆರಿಕಾವು ಉಕ್ರೇನ್‌ಗೆ ಹಣ ಹಾಗೂ ಶಸ್ತ್ರಾಸ್ತ್ರ ನೀಡುವುದನ್ನು ನಿಲ್ಲಿಸಿದರೆ ಯುದ್ದವು ಕೊನೆಗೊಳ್ಳಲಿದೆ. ಇನ್ನು ಅಮೆರಿಕನ್ನರು ಆರ್ಥಿಕ ಸಹಾಯ ನೀಡದಿದ್ದರೆ, ಯುರೋಪಿಯನ್ನರು ಮಾತ್ರ ಈ ಯುದ್ಧಕ್ಕೆ ಹಣಕಾಸು ಒದಗಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ಯುದ್ದ ಅಂತ್ಯಗೊಳ್ಳಲಿದೆ. ರಷ್ಯಾ-ಉಕ್ರೇನ್ ಯುದ್ಧವನ್ನು ಹೇಗೆ ಕೊನೆಗೊಳಿಸಬೇಕು ಎಂಬುದರ ಕುರಿತು ಟ್ರಂಪ್ ಅವರು ಸಮಗ್ರ ವಿವರವಾದ ಯೋಜನೆಗಳನ್ನು ಹೊಂದಿದ್ದಾರೆ ಎಂದು ಓರ್ಬನ್ ತಿಳಿಸಿದ್ದಾರೆ. ಇದಕ್ಕೂ ಯುಎಸ್ ಅಧ್ಯಕ್ಷನಾಗಿ ಚುನಾಯಿತರಾದರೆ ೨೪ ಗಂಟೆಗಳ ಒಳಗಾಗಿ ರಷ್ಯಾ-ಉಕ್ರೇನ್ ಯುದ್ಧವನ್ನು ಕೊನೆಗೊಳಿಸುವುದಾಗಿ ಟ್ರಂಪ್ ಅವರು ಈ ಹಿಂದೆ ಭರವಸೆ ನೀಡಿದ್ದರು. ಆದರೆ ಯುದ್ದವನ್ನು ಯಾವ ರೀತಿ ಅಂತ್ಯಗೊಳಿಸುತ್ತಾರೆ ಎಂಬುದರ ಕುರಿತು ಯಾವುದೇ ವಿವರಗಳನ್ನು ಟ್ರಂಪ್ ನೀಡಿಲ್ಲ. ಇನ್ನು ಟ್ರಂಪ್ ಅವರ ಮಾರ್ ಎ ಲಾಗೋ ನಿವಾಸಕ್ಕೆ ಭೇಟಿದ ನೀಡಿದ ಓರ್ಬನ್ ಅವರನ್ನು ಟ್ರಂಪ್ ಮುಕ್ತಕಂಠದಿಂದ ಪ್ರಶಂಸಿಸಿದ್ದಾರೆ. ವಿಕ್ಟರ್ ಓರ್ಬನ್‌ಗಿಂತ ಉತ್ತಮ, ಬುದ್ಧಿವಂತ ಅಥವಾ ಉತ್ತಮ ನಾಯಕ ಯಾರೂ ಇಲ್ಲ ಎಂದು ಟ್ರಂಪ್ ತಿಳಿಸಿದ್ದಾರೆ. ಆದರೆ ಓರ್ಬನ್ ಅವರು ಅಮೆರಿಕಾ ಅಧ್ಯಕ್ಷ ಜೋ ಬೈಡೆನ್‌ರನ್ನು ಭೇಟಿ ಮಾಡದೇ ಇರುವುದು ಅಚ್ಚರಿಗೆ ಕಾರಣವಾಗಿದೆ.