ಪೆಂಗ್ವಿನ್‌ಗಳಿಗೂ ತಟ್ಟಿದ ಹಕ್ಕಿಜ್ವರ
ಜಾರ್ಜಿಯಾ, ಮಾ.೧೨- ವಿಶ್ವದ ಶ್ರೇಷ್ಠ ವನ್ಯಜೀವಿಗಳ ಸ್ವರ್ಗಗಳಲ್ಲಿ ಒಂದೆಂದು ಗುರುತಿಸಿಕೊಂಡಿರುವ ದಕ್ಷಿಣ ಜಾರ್ಜಿಯಾದ ೧೦ ಪೆಂಗ್ವಿನ್‌ಗಳಲ್ಲಿ ಹಕ್ಕಿ ಜ್ವರ ದೃಢಪಟ್ಟಿರುವುದು ಆತಂಕ ಮೂಡಿಸಿದೆ.
ಏವಿಯನ್ ಇನ್ಫ್ಲುಯೆನ್ಸ (ಹೆಚ್‌ಪಿಎಐ) ಎಂಬ ಸೋಂಕು ಈಗಾಗಲೇ ಬ್ರಿಟಿಷ್ ಸಾಗರೋತ್ತರ ಪ್ರದೇಶದ ಇತರ ಕಡಲ ಹಕ್ಕಿಗಳು ಮತ್ತು ಸಸ್ತನಿಗಳಲ್ಲಿ ಕಾಣಿಸಿಕೊಂಡಿತ್ತು. ಆದರೆ ಇದೀಗ ಆಘಾತಕಾರಿ ಎಂಬಂತೆ ಜೆಂಟೂ ಮತ್ತು ಕಿಂಗ್ ಪೆಂಗ್ವಿನ್‌ಗಳು ಕೂಡ ಇದಕ್ಕೆ ತುತ್ತಾಗಿವೆ ಎಂದು ವಿಜ್ಞಾನಿಗಳು ಆಘಾತಕಾರಿ ವರದಿ ಮಾಡಿದ್ದಾರೆ. ಆದರೆ ಸಮಾಧಾನಕರ ಸಂಗತಿ ಎಂದರೆ ಉಪ ಅಂಟಾರ್ಟಿಕ್ ದ್ವೀಪದಲ್ಲಿ ಸದ್ಯ ಸಂತಾನೋತ್ಪತ್ತಿ ಅವಧಿ ಅಂತ್ಯಗೊಂಡಿದ್ದು, ಹಾಗಾಗಿ ತಕ್ಷಣದ ಪರಿಣಾಮವು ಸೀಮಿತವಾಗಿದೆ ಎನ್ನಲಾಗಿದೆ. ಆದರೆ ಮುಂದಿನ ಋತುವಿನಲ್ಲಿ ಪೆಂಗ್ವಿನ್‌ಗಳು ಮತ್ತೆ ಸಾಮೂಹಿಕವಾಗಿ ಒಟ್ಟುಗೂಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಆತಂಕ ಮೂಡಿಸಿದೆ. ಈಗಾಗಲೇ ದಕ್ಷಿಣ ಜಾರ್ಜಿಯಾದ ಕಡಲತೀರಗಳು ಪೆಂಗ್ವಿನ್‌ಗಳ ಒಟ್ಟುಗೂಡಿಸುವಿಕೆಗೆ ಹೆಸರುವಾಸಿಯಾಗಿದೆ. ೧೦ ಲಕ್ಷಕ್ಕಿಂತಲೂ ಹೆಚ್ಚಿನ ಪೆಂಗ್ವಿನ್‌ಗಳು ಇಲ್ಲಿ ಒಟ್ಟಾಗಿ ಕಾಣಿಸಿಕೊಳ್ಳುವುದು ಸಾಮಾನ್ಯ ಸಂಗತಿಯಾಗಿದೆ. ಅಲ್ಲದೆ ಸಂತಾನೋತ್ಪತ್ತಿಯಲ್ಲಿ ತೊಡಗಿಸುವ ಹಿನ್ನೆಲೆಯಲ್ಲಿ ಮುಂದಿನ ಋತುವಿನಲ್ಲಿ ಸೋಂಕು ಮತ್ತಷ್ಟು ಹರಡುವ ಭೀತಿ ಮೂಡಿಸಿದೆ. ಅನೇಕ ಜಾತಿಯ ಪೆಂಗ್ವಿನ್‌ಗಳು, ಕಡಲುಕೋಳಿಗಳು, ಸೀಲುನಾಯಿಗಳು ಇಲ್ಲಿ ಕಾಣಿಸಿಕೊಳ್ಳುತ್ತಿದ್ದು, ಒಂದು ವೇಳೆ ಸಾಮೂಹಿಕ ರೀತಿಯಲ್ಲಿ ಸೋಂಕು ಹರಡಿದರೆ ಭಾರೀ ವಿನಾಶ ಮೂಡಿಸಲಿದೆ ಎನ್ನಲಾಗಿದೆ. ಹೈ ಪ್ಯಾಥೋಜೆನಿಸಿಟಿ ಏವಿಯನ್ ಇನ್ಫ್ಲುಯೆನ್ಸ (ಹೆಚ್‌ಪಿಎಐ) ಸೋಂಕು ಕಳೆದ ಹಲವು ವರ್ಷಗಳಿಂದ ಅಸ್ತಿತ್ವದಲ್ಲಿದೆ. ಆದರೆ ಇದೇ ಸೋಂಕಿನ ನೂತನ ತಳಿಯಾಗಿರುವ ಹೆಚ್೫ಎನ್೧ ಸೋಂಕು ಸದ್ಯ ಅಸಂಖ್ಯಾತ ಕಾಡು ಮತ್ತು ಸಾಕುಪ್ರಾಣಿಗಳ ಸಾವಿಗೆ ಕಾರಣವಾಗುತ್ತಿದೆ. ಅಂಟಾರ್ಕ್ಟಿಕಾ ಮತ್ತು ಅದರ ಹೊರಗಿನ ದ್ವೀಪಗಳು ತಮ್ಮ ದೂರದ ಕಾರಣದಿಂದಾಗಿ ಸೋಂಕಿನ ಜ್ವಾಲೆಯಿಂದ ಪಾರಾಗಿತ್ತು. ಆದರೆ ಇದೀಗ ಈ ಸೋಂಕು ಈ ಪ್ರದೇಶದಲ್ಲೂ ಕಾಣಿಸಿಕೊಂಡಿರುವುದು ಆಘಾತ ಮೂಡಿಸಿದೆ. ಕಳೆದ ವರ್ಷದ ಅಕ್ಟೋಬರ್ ತಿಂಗಳಲ್ಲಿ ದಕ್ಷಿಣ ಜಾರ್ಜಿಯಾದಲ್ಲಿ ಬರ್ಡ್ ಫ್ಲೂ ಅನ್ನು ಮೊದಲು ಗುರುತಿಸಲಾಯಿತು. ಇದು ಅಂಟಾರ್ಕ್ಟಿಕ್ ಟರ್ನ್‌ಗಳು ಮತ್ತು ಕಡಲುಕೋಳಿಗಳಿಗೂ ಹರಡಿದೆ. ಇದೀಗ ಪೆಂಗ್ವಿನ್‌ಗಳು ಕೂಡ ಇದಕ್ಕೆ ತುತ್ತಾಗಿರುವುದು ಜಾಗತಿಕ ಮಟ್ಟದಲ್ಲಿ ಆಘಾತಕ್ಕೆ ಕಾರಣವಾಗಿದೆ.
ಹಕ್ಕಿಜ್ವರವು ಒಂದು ಬಾರಿ ಇಲ್ಲಿ ಪ್ರಬಲತೆ ಸಾಧಿಸಿದರೆ ಅಲ್ಲದೆ ದ್ವೀಪದಾದ್ಯಂತ ಹೆಚ್ಚಿನ ಸಾವಿನ ಪ್ರಕರಣವನ್ನು ಉಂಟುಮಾಡಿದರೆ ಅದು ಜಾಗತಿಕವಾಗಿ ಸಂರಕ್ಷಣೆಯ ವಿಚಾರದಲ್ಲಿ ಆತಂಕಕಾರಿಯಾಗಿದೆ. ಆದರೆ ಪ್ರಸಕ್ತ ಸನ್ನಿವೇಶದಲ್ಲಿ ಅದು ಹರಡುವ ರೀತಿಯಲ್ಲಿ ಸ್ವಲ್ಪಮಟ್ಟಿಗೆ ಸೀಮಿತವಾಗಿದೆ ಎಂದು ತೋರುತ್ತದೆ.
-ಡಾ ನಾರ್ಮನ್ ರಾಟ್‌ಕ್ಲಿಫ್, ಬ್ರಿಟಿಷ್
ಅಂಟಾರ್ಕ್ಟಿಕ್ ಸಮೀಕ್ಷೆಯ ಪಕ್ಷಿ ಪರಿಸರಶಾಸ್ತ್ರಜ್ಞ