ಟೆಸ್ಟ್ ಕ್ರಿಕೆಟ್‌ನಲ್ಲಿ ೭೦೦ ವಿಕೆಟ್ ಕಬಳಿಸಿದ ಜೇಮ್ಸ್
ವಿಶ್ವದ ಮೊದಲ ವೇಗದ ಬೌಲರ್
ಧರ್ಮಶಾಲಾ,ಮಾ.೯: ಭಾರತದ ವಿರುದ್ಧ ನಡೆಯುತ್ತಿರುವ ಅಂತಿಮ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ವೇಗದ ಬೌಲರ್ ಜೇಮ್ಸ್ ಆಂಡರ್‌ಸನ್ ೭೦೦ ವಿಕೆಟ್ ಗಳಿಸಿ ಹೊಸ ವಿಶ್ವ ದಾಖಲೆ ನಿರ್ಮಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಈ ಅಭೂತಪೂರ್ವ ಸಾಧನೆ ಮಾಡಿದ ೩ನೇ ಬೌಲರ್ ಆಗಿದ್ದಾರೆ.೫ನೇ ಟೆಸ್ಟ್ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ೨ ವಿಕೆಟ್ ಪಡೆದು ಈ ದಾಖಲೆ ನಿರ್ಮಿಸಿದ್ದಾರೆ.೪೧ ವರ್ಷದ ಆಂಡರ್‌ಸನ್ ೧೮೭ ಟೆಸ್ಟ್ ಪಂದ್ಯಗಳನ್ನಾಡಿದ್ದು, ೭೦೦ ವಿಕೆಟ್‌ಗಳ ಅದ್ವಿತಿಯ ಸಾಧನೆ ಮಾಡಿದ್ದಾರೆ. ಈ ಸಾಧನೆ ಮಾಡಿದ ವಿಶ್ವದ ಮೊದಲ ವೇಗದ ಬೌಲರ್ ಎನಿಸಿದ್ದಾರೆ.೨೦೦೩ರಲ್ಲಿ ಜಿಂಬಾಬ್ವೆ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಅವರು, ಇದುವರೆಗೆ ೩೯,೮೭೩ ಎಸೆತಗಳನ್ನು ಎಸೆದು ೧೮,೫೬೮ ರನ್ ನೀಡಿ ಒಟ್ಟು ೭೦೦ ವಿಕೆಟ್‌ಗಳನ್ನು ಪಡೆದಿದ್ದಾರೆ. ೩೨ ಬಾರಿ ೫ ವಿಕೆಟ್ ಗಳಿಸಿದರೆ, ಮೂರು ಬಾರಿ ೧೦ ವಿಕೆಟ್‌ಗಳ ಸಾಧನೆ ಮಾಡಿದ್ದಾರೆ.
ಈ ಮೊದಲು ಶ್ರೀಲಂಕಾದ ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್ ಹಾಗೂ ಆಸ್ಟ್ರೇಲಿಯಾದ ಶೇನ್‌ವಾರ್ನ್ ೭೦೦ ಪ್ಲಸ್ ವಿಕೆಟ್‌ಗಳನ್ನು ಪಡೆದಿರುವುದನ್ನು ಇಲ್ಲಿ ಉಲ್ಲೇಖಿಸಬಹುದು.