ಏರ್‌ಡ್ರಾಪ್ ವೇಳೆ ಐವರು ಸಾವು
ಗಾಝಾ, ಮಾ.೯- ಗಾಝಾದಲ್ಲಿ ನೆರವಿನ ಪೂರೈಕೆಯಲ್ಲಿ ಇದೀಗ ಹಲವು ದೇಶಗಳು ತೊಡಗಿಕೊಂಡಿದ್ದು, ಈ ನಡುವೆ ಏರ್‌ಡ್ರಾಪ್ (ವಾಯುಮಾರ್ಗದ ಮೂಲಕ ನೆರವು)ವೇಳೆ ಐವರು ಮೃತಪಟ್ಟು ಹಲವರು ಗಂಭೀರ ರೀತಿಯಲ್ಲಿ ಗಾಯಗೊಂಡ ಘಟನೆ ನಡೆದಿದೆ.
ಗಾಝಾದಲ್ಲಿ ಏರ್‌ಡ್ರಾಪ್ ಮೂಲಕ ನೆರವು ನೀಡುವುದು ಅಪಾಯಕಾರಿ ಪರಿಸ್ಥಿತಿ ಉಂಟು ಮಾಡಿದೆ. ಪ್ಯಾರಾಚೂಟ್‌ಗಳ ಮೂಲಕ ನೆರವು ನೀಡುವ ವೇಳೆ ಐವರು ಮೃತಪಟ್ಟು, ೧೦ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ನಡೆದಿದೆ. ಗಾಯಾಳುಗಳನ್ನು ಗಾಜಾ ನಗರದ ಅಲ್-ಶಿಫಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತುರ್ತು ಚಿಕಿತ್ಸಾ ವಿಭಾಗದ ಮುಖ್ಯ ನರ್ಸ್ ಮೊಹಮ್ಮದ್ ಅಲ್-ಶೇಖ್ ಎಎಫ್‌ಪಿಗೆ ತಿಳಿಸಿದ್ದಾರೆ. ಕರಾವಳಿಯ ಅಲ್-ಶಾತಿ ನಿರಾಶ್ರಿತರ ಶಿಬಿರದ ಉತ್ತರಕ್ಕೆ ಮಾರಣಾಂತಿಕ ಏರ್‌ಡ್ರಾಪ್ ವೇಳೆ ಅವಘಡ ಸಂಭವಿಸಿದೆ ಎಂದು ಶೇಖ್ ಹೇಳಿದ್ದಾರೆ. ಏರ್‌ಡ್ರಾಪ್ ವೇಲೆ ಅಸಮರ್ಪಕ ಲ್ಯಾಂಡಿಂಗ್ ವೇಳೆ ಈ ಅವಘಡ ಸಂಭವಿಸಿದೆ. ಲ್ಯಾಂಡಿಂಗ್ ವೇಳೆ ಕೆಲವೊಂದು ಬಾರಿ ಪ್ಯಾರಾಚೂಟ್ ಸರಿಯಾಗಿ ತೆರೆದುಕೊಳ್ಳದೆ ಹಾಗೂ ಕೆಲವೊಮ್ಮೆ ಧ್ವಂಸಗೊಂಡ ಕಟ್ಟಡಗಳ ಮೇಲೆ ಲ್ಯಾಂಡಿಂಗ್‌ನಿಂದ ಅವಘಡ ಸಂಭವಿಸಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಹಲವು ರಾಷ್ಟ್ರಗಳ ವಾಯುಮಾರ್ಗಕ್ಕಿಂತ ಕಡಲ ತೀರದ ಮಾರ್ಗದ ಮೂಲಕವೇ ನೆರವು ನೀಡಲು ಇದೀಗ ಮನಸ್ಸು ಮಾಡಿದೆ. ಉತ್ತರ ಗಾಝಾದಲ್ಲಿ ಏರ್‌ಡ್ರಾಪ್‌ಗಳನ್ನು ನಡೆಸಿದ ದೇಶಗಳಲ್ಲಿ ಯುನೈಟೆಡ್ ಸ್ಟೇಟ್ಸ್ ಮತ್ತು ಜೋರ್ಡಾನ್ ಸೇರಿವೆ. ಅಲ್ಲದೆ ಅಲ್ಲಿ ನೂರಾರು ಸಾವಿರಾರು ಜನರು ಐದು ತಿಂಗಳಿಗಿಂತ ಹೆಚ್ಚು ಯುದ್ಧದ ನಂತರ ಭೀಕರ ಪರಿಸ್ಥಿತಿಗಳನ್ನು ಎದುರಿಸುತ್ತಿದ್ದಾರೆ.