ಕೈ ತೊರೆದು ಬಿಜೆಪಿಗೆ ಸೇರಿದ ಮಾಜಿ ಸಚಿವ ಪಚೌರಿ
ಭೋಪಾಲ್, ಮಾ.೯- ಲೋಕಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಂತೆ ಪಕ್ಷಾಂತರ ಆರಂಭವಾಗಿದ್ದು ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ಕೇಂದ್ರ ಸಚಿವ ಸುರೇಶ್ ಪಚೌರಿ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಭೋಪಾಲ್‌ನಲ್ಲಿಂದು ಬಿಜೆಪಿಗೆ ಸೇರ್ಪಡೆಗೊಂಡರು.
ರಾಜ್ಯ ಬಿಜೆಪಿ ಮುಖ್ಯಸ್ಥ ವಿ.ಡಿ.ಶರ್ಮಾ , ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹ್ಹಾಣ್ ಸೇರಿದಂತ ಪ್ರಮುಖ ನಾಯಕರ ಸಮ್ಮುಖದಲ್ಲಿ ಹಲವು ಕಾಂಗ್ರೆಸ್ ನಾಯಕರು ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಪಕ್ಷಕ್ಕೆ ಸೇರ್ಪಡೆಯಾದ ನಂತರ ಮಾತನಾಡಿದ ಮಾಜಿ ಕೇಂದ್ರ ಸಚಿವ ಸುರೇಶ್ ಪಚೌರಿ, ಸ್ವಚ್ಛ ರಾಜಕಾರಣ ಮಾಡುವವರು, ಮಧ್ಯಪ್ರದೇಶದ ರಾಜಕೀಯದಲ್ಲಿ ‘ಸಂತ’ ಎಂದು ಪರಿಗಣಿಸಲ್ಪಟ್ಟಿದ್ದಾರೆ. ಯಾವುದೇ ಷರತ್ತುಗಳಿಲ್ಲದೆ ದೇಶಕ್ಕಾಗಿ ಕೆಲಸ ಮಾಡಲು ಬಿಜೆಪಿ ಸೇರಿದ್ದೇನೆ ಎಂದಿದ್ದಾರೆ.
ರಾಮ ಮಂದಿರದ ಪ್ರಾಣ ಪ್ರತಿಷ್ಠೆಯ ಆಹ್ವಾನವನ್ನು ನಿರಾಕರಿಸಿದ ಕಾಂಗ್ರೆಸ್ ಕ್ರಮವನ್ನು ಖಂಡಿಸಿ ಬಿಜೆಪಿ ಸೇರ್ಪಡೆಯಾಗಿದ್ದೇನೆ, ಮುಂದಿನ ದಿನಗಳಲ್ಲಿ ಇನ್ನಷ್ಟು ಮಂದಿ ಕಾಂಗ್ರೆಸ್‌ನಿಂದ ಬಿಜೆಪಿಗೆ ಬರಲಿದ್ದಾರೆ ಎಂದಿದ್ದಾರೆ.
ಕಾಂಗ್ರೆಸ್ ತನಗೆ ತಿಳಿದಿರುವ ತತ್ವಗಳು ಮತ್ತು ನೀತಿಗಳಿಂದ ದೂರವಾಗಿದೆ. ಅದು ಸಾರ್ವಜನಿಕರಿಂದ ದೂರವಾಗಿದೆ ಮತ್ತು ಸಂಬಂಧವನ್ನು ಸ್ಥಾಪಿಸಲು ಸಾಧ್ಯವಾಗುತ್ತಿಲ್ಲ ಹೀಗಾಗಿ ಬಿಜೆಪಿ ಸೇರಿದ್ದೇನೆ. ರಾಜಕೀಯಕ್ಕೆ ಬಂದಾಗ ಸಮಾಜ ಮತ್ತು ದೇಶಕ್ಕಾಗಿ ಸೇವೆ ಸಲ್ಲಿಸಲು ನಿರ್ಧರಿಸಿದ್ದೆ … ವರ್ಗರಹಿತ ಸಮಾಜವನ್ನು ಸ್ಥಾಪಿಸಲು ಕಾಂಗ್ರೆಸ್ ಬಯಸಿತ್ತು, ಆದರೆ ಇಂದು ಅದನ್ನು ಬದಿಗೊತ್ತಲಾಗಿದೆ ಎಂದು ದೂರಿದ್ದಾರೆ.
ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮಾತನಾಡಿ ಕಾಂಗ್ರೆಸ್‌ನ ಅನೇಕ ನಾಯಕರು ಬಿಜೆಪಿ ಸೇರಲಿದ್ದಾರೆ.
ಯಾವುದೇ ಷರತ್ತುಗಳಿಲ್ಲ, ಪ್ರಧಾನಿ ನಾಯಕತ್ವದಲ್ಲಿ ದೇಶಕ್ಕೆ ಸೇವೆ ಸಲ್ಲಿಸಲು ಬರುತ್ತಿದ್ದಾರೆ. ಅವರನ್ನೆಲ್ಲಾ ಸ್ವಾಗತ ಮಾಡುವುದಾಗಿ ತಿಳಿಸಿದ್ದಾರೆ.