ಕಾಂಗ್ರೆಸ್‌ನ ಮೊದಲ ಪಟ್ಟಿ ಅಖೈರು ಶೀಘ್ರ ಬಿಡುಗಡೆ
ನವದೆಹಲಿ, ಮಾ.೮- ಲೋಕಸಭೆ ಚುನಾವಣೆಗೆ ಕೆಲವೇ ದಿನಗಳಲ್ಲಿ ಮುಹೂರ್ತ ನಿಗಧಿಯಾಗಲಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ , ೪೦ಕ್ಕೂ ಅಧಿಕ ಅಭ್ಯರ್ಥಿಗಳ ಮೊದಲ ಪಟ್ಟಿ ಅಖೈರು ಮಾಡಿದೆ. ವಯನಾಡಿನಿಂದ ರಾಹುಲ್ ಗಾಂದಿ ಸ್ಪರ್ದೆ ಮಾಡುವುದು ಖಚಿತವಾಗಿದ್ದು ಇಂದು ಸಂಜೆ ಇಲ್ಲವೆ ನಾಳೆಯೊಳಗೆ ಮೊದಲ ಪಟ್ಟಿ ಪ್ರಕಟವಾಗುವ ಸಾಧ್ಯತೆ ಇದೆ.
ಕರ್ನಾಟಕ,ಕೇರಳ,ಛತ್ತೀಸ್ ಗಡ , ದೆಹಲಿ, ಲಕ್ಷದೀಪ ಸೇರಿದಂತೆ ಹಲವು ರಾಜ್ಯಗಳ ಕಾಂಗ್ರೆಸ್ ಅಭ್ಯರ್ಥಿ ಗಳ ಬಗ್ಗೆ ಕೇಂದ್ರ ಚುನಾವಣಾ ಸಮಿತಿ ಅಳೆದು ತೂಗಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಈ ಬಾರಿಯೂ ಕೇರಳದ ವಯನಾಡ್ ಕ್ಷೇತ್ರದಿಂದಲೇ ಸ್ಪರ್ಧಿಸಲಿದ್ದಾರೆ ಜೊತೆಗೆ ಉತ್ತರ ಪ್ರದೇಶದ ಅಮೇಥಿಯಿಂದಲೂ ಸ್ಪರ್ಧೆ ಮಾಡಲಿದ್ದು ಕಳೆದ ಬಾರಿ ಸೋತ ಕ್ಷೇತ್ರದಲ್ಲಿ ಮತ್ತೆ ಗೆಲುವು ಸಾಧಿಸುವ ಛಲ ಹೊಂದಿದ್ದಾರೆ ಎನ್ನಲಾಗಿದೆ.
ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ಚುನಾವಣಾ ಸಮಿತಿಯ ಹಲವು ನಾಯಕರು, ಉಸ್ತುವಾರಿಗಳು ಮತ್ತು ಆಯಾ ರಾಜ್ಯಗಳ ಹಿರಿಯ ನಾಯಕರು ನಿನ್ನೆ ಸುದೀರ್ಘ ಸಮಾಲೋಚನೆ ನಡೆಸಿ ಅಭ್ಯರ್ಥಿಗಳನ್ನು ಅಂತಿಮ ಮಾಡಲಾಗಿದೆ
ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ೧೧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಒಟ್ಟು ೬೦ ಲೋಕಸಭಾ ಸ್ಥಾನಗಳ ಕುರಿತು ಚರ್ಚೆ ನಡೆಸಲಾಯಿತು. ಈ ಸಭೆಯಲ್ಲಿ, ವಿವಿಧ ಸ್ಕ್ರೀನಿಂಗ್ ಸಮಿತಿಗಳು ಕಳುಹಿಸಿದ ಹೆಸರುಗಳ ಪೈಕಿ ಅಭ್ಯರ್ಥಿಗಳ ಹೆಸರನ್ನು ಅನುಮೋದಿಸಲಾಗಿದೆ ಎನ್ನಲಾಗಿದೆ.
ಕರ್ನಾಟಕದ ಗುಲ್ಬರ್ಗ ಸೇರಿದಂತೆ ಹಲವು ಪ್ರಮುಖ ಕ್ಷೇತ್ರಗಳ ಬಗ್ಗೆ ಸಮಾಲೋಚನೆ ನಡೆಸಲಾಗಿದ್ದು ಅಭ್ಯರ್ಥಿಗಳ ಆಯ್ಕೆಗೆ ಸಮಾಲೋಚನೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.
ಗುಲ್ಬರ್ಗ ಕ್ಷೇತ್ರದಿಂದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಳಿಯ ರಾಧಾಕೃಷ್ಣ ಅವರ ಹೆಸರೂ ಕೇಳಿ ಬಂದಿದೆ. ಇದೇ ರೀತಿ ವಿವಿದ ರಾಜ್ಯಗಳಲ್ಲಿ ಅಭ್ಯರ್ಥಿ ಆಯ್ಕೆಗೆ ಚುನಾವಣಾ ಸಮಿತಿ ಸುಧೀರ್ಘ ಸಮಾಲೋಚನೆ ನಡೆಸಿದೆ
ಪ್ರಿಯಾಂಕಾ ಗಾಂಧಿ ಸ್ಪರ್ಧೆ
ಉತ್ತರ ಪ್ರದೇಶದ ರಾಯ್ ಬರೇಲಿಯಿಂದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಸ್ಪರ್ಧೆ ಮಾಡಲಿದ್ದಾರೆ. ಇದಕ್ಕೆ ಪೂರಕ ಎನ್ನುವಂತೆ ಕಳೆದ ಐದು ಬಾರಿಯಿಂದ ಸ್ಪರ್ಧೆ ಮಾಡಿದ್ದ ಸೋನಿಯಾ ಗಾಂಧಿ ಅವರು ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಹೀಗಾಗಿ ಪ್ರಿಯಾಂಕಾ ಗಾಂಧಿ ರಾಯ್ ಬರೇಲಿಯಿಂದ ಸ್ಪರ್ದೆ ಮಾಡುವುದು ಖಚಿತ ಎನ್ನಲಾಗಿದೆ.
ಇದರ ಜೊತೆಗೆ ಛತ್ತೀಸ್ ಗಡದಿಂದ ಮಾಜಿ ಮುಖ್ಯಮಂತ್ರಿ ಭೂಪೃಶ್ ಬಘೇಲ್ ಸೇರಿದಂತೆ ಹಲವು ಪ್ರಮುಖ ನಾಯಕರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಹೈಮಾಂಡ್ ನಿರ್ಧರಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ
ಪಟ್ಟಿ ಅಂತಿಮ
ಕೇರಳ, ಕರ್ನಾಟಕ, ತೆಲಂಗಾಣ, ಛತ್ತೀಸ್‌ಗಢ, ದೆಹಲಿ ಮತ್ತು ಲಕ್ಷದ್ವೀಪದ ಲೋಕಸಭಾ ಕ್ಷೇತ್ರಕ್ಕೆ ಸೀಟುಗಳನ್ನು ಅಂತಿಮಗೊಳಿಸಿದ್ದೇವೆ ಇನ್ನೂ ಕೆಲವು ಕ್ಷೇತ್ರಗಳಲ್ಲಿ ಪ್ರಕ್ರಿಯೆ ನಡೆಯುತ್ತಿದೆ, ಔಪಚಾರಿಕ ಘೋಷಣೆಯನ್ನು ಶೀಘ್ರದಲ್ಲೇ ಮಾಡಲಾಗುವುದು” ಎಂದು ಪ್ರಧಾನಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ತಿಳಿಸಿದ್ದಾರೆ.
ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕೇರಳದ ವಯನಾಡ್‌ನಿಂದ, ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಛತ್ತೀಸ್‌ಗಢದ ರಾಜನಂದಗಾಂವ್‌ನಿಂದ ಮತ್ತು ಜ್ಯೋತ್ಸ್ನಾ ಮಹಂತ್ ಕೊರ್ಬಾದಿಂದ ಮತ್ತೆ ಸ್ಪರ್ಧಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಛತ್ತೀಸ್‌ಗಢದಿಂದ ಎಲ್ಲ ಪ್ರಮುಖ ನಾಯಕರು ಕಣದಲ್ಲಿದ್ದಾರೆ ಎಂದು ಹೇಳಿದ್ದಾರೆ