ಉತ್ತರ ಕೊರಿಯಾದಲ್ಲಿ ಜೈಲಿನ ಪರಿಸ್ಥಿತಿ ನಿರ್ಮಾಣ!
ಪ್ಯೊಂಗ್ಯಾಂಗ್ (ಉತ್ತರ ಕೊರಿಯಾ), ಮಾ.೮- ಉತ್ತಮ ಸಂಬಂಧದ ಹೊರತಾಗಿಯೂ ಉತ್ತರ ಕೊರಿಯಾವು ಇದೀಗ ಚೀನಾದೊಂದಿಗಿನ ತನ್ನ ಗಡಿ ಪ್ರದೇಶವನ್ನು ಮುಚ್ಚುತ್ತಿರುವ ಸಂಗತಿಯನ್ನು ಇದೀಗ ಪ್ರಮುಖ ಮಾನವ ಹಕ್ಕುಗಳ ಗುಂಪು (ಎಚ್‌ಆರ್‌ಡಬ್ಲ್ಯು) ಬಹಿರಂಗಪಡಿಸಿದೆ. ಅಲ್ಲದೆ ಇದಕ್ಕೆ ಸಂಬಂಧಿಸಿದಂತೆ ಉಪಗ್ರಹ ಆಧಾರಿತ ಚಿತ್ರಗಳು ಕೂಡ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಬಹುತೇಕ ಎಲ್ಲರಿಗೂ ತಿಳಿದಿರುವಂತೆ ಉತ್ತರ ಕೊರಿಯಾದಿಂದ ಇತರೆ ದೇಶಗಳತ್ತ ತೆರಳುವವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ. ಹಾಗಾಗಿ ಸಂಪೂರ್ಣ ಉತ್ತರ ಕೊರಿಯಾವು ಸದ್ಯ ಜೈಲಾಗಿ ಪರಿವರ್ತಿತವಾಗಿದೆ. ಸದ್ಯ ಉತ್ತರ ಕೊರಿಯಾವು ತನ್ನ ಗಡಿ ಪ್ರದೇಶವನ್ನು ಮತ್ತಷ್ಟು ಭದ್ರಪಡಿಸಿಕೊಳ್ಳುತ್ತಿದ್ದು, ಮಾನವ ಹಕ್ಕುಗಳ ಗುಂಪುಗಳ ಆತಂಕ ವ್ಯಕ್ತಪಡಿಸಿದೆ. ಮೂರು ವರ್ಷಗಳ ಹಿಂದೆ ಚೀನಾದಲ್ಲಿ ಕೋವಿಡ್ ಮಹಾಮಾರಿ ಉಗ್ರ ರೂಪಕ್ಕೆ ಹೋಗುತ್ತಿದ್ದಂತೆ ಉತ್ತರ ಕೊರಿಯಾವು ಚೀನಾದೊಂದಿಗಿನ ತನ್ನ ಗಡಿ ಪ್ರದೇಶವನ್ನು ಮುಚ್ಚಲು ಆರಂಭಿಸಿದೆ. ಈ ಕ್ರಮದಿಂದ ಎರಡೂ ದೇಶಗಳ ನಡುವಿನ ವ್ಯಾಪಾರ ಹಾಗೂ ಚಲನ-ವಲನೆ ಕಡಿಮೆಗೊಂಡಿದೆ. ಕೋವಿಡ್‌ಗೂ ಮುನ್ನವೇ ಉತ್ತರ ಕೊರಿಯಾದ ಕಿಮ್ ಜೊಂಗ್ ಉನ್, ತನ್ನ ನಾಗರಿಕರು ಇತರೆ ದೇಶಗಳತ್ತ ಪ್ರಯಾಣಿಸುವವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುತ್ತಾ ಬಂದಿದ್ದು, ಇದರಿಂದ ಪ್ರತ್ಯೇಕತೆ ಮತ್ತು ಮಾನವೀಯ ಬಿಕ್ಕಟ್ಟಿನ ಪರಿಸ್ಥಿತಿ ಉಲ್ಬಣಗೊಂಡಿದೆ. ಇದರ ಹೊರತಾಗಿಯೂ ಉತ್ತರ ಕೊರಿಯಾದಿಂದ ಇತರೆ ದೇಶಗಳತ್ತ ಪರಾರಿಯಾಗುವ ಜನರ ಸಂಖ್ಯೆ ಮುಂದುವರೆದಿದೆ. ಅದರಲ್ಲೂ ಕೋವಿಡ್‌ನ ತೀವ್ರ ಪರಿಸ್ಥಿತಿಯನ್ನು ಕಿಂಗ್ ಜೊಂಗ್ ಉನ್ ತನ್ನ ಲಾಭಕ್ಕೆ ಬಳಸಿಕೊಂಡಿದ್ದು, ಗಡಿ ಪ್ರದೇಶವನ್ನು ಮತ್ತಷ್ಟು ಭದ್ರಪಡಿಸಿರುವ ಸಂಗತಿ ಇದೀಗ ಬಹಿರಂಗವಾಗಿದೆ. ಕೋವಿಡ್ ಸಮಯದಲ್ಲಿ ಚೀನಾದೊಂದಿಗಿನ ಗಡಿ ಪ್ರದೇಶವನ್ನು ಮುಚ್ಚಿದ್ದ ಉತ್ತರ ಕೊರಿಯಾ ಕಳೆದ ತಿಂಗಳಷ್ಟೇ ವ್ಯಾಪಾರ ಸುಗಮದ ದೃಷ್ಟಿಯಿಂದ ಮಾತ್ರ ಮುಕ್ತಗೊಳಿಸಿತ್ತು. ಆದರೂ ನಾಗರಿಕರ ಚಲನ-ವಲನಗಳ ಮೇಲೆ ಕಠಿಣ ನಿಗಾ ಇರಿಸಲಾಗಿದೆ. ಸದ್ಯ ಉತ್ತರ ಕೊರಿಯಾ-ಚೀನಾ ಗಡಿ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಬೇಲಿಯ ಉಪಗ್ರಹ ಚಿತ್ರಗಳು ಎಲ್ಲೆಡೆ ಹರಿದಾಡುತ್ತಿದೆ.
ಉತ್ತರ ಕೊರಿಯಾದಲ್ಲಿ ಅಧಿಕಾರಿಗಳು ತನಿಖೆ ನಡೆಸಿದ ಪ್ರದೇಶಗಳಲ್ಲಿ ೪೮೨ ಕಿ.ಮೀ.ನ ಹೊಸ ಗಡಿ ಪ್ರದೇಶವನ್ನು ನಿರ್ಮಿಸಿರುವುದು ಕಂಡುಬಂದಿದೆ. ಅಲ್ಲದೆ ಹೆಚ್ಚುವರಿಯಾಗಿ ೨೬೦ ಕಿ.ಮೀ.ಗಳ ಗಡಿ ಪ್ರದೇಶ ನಿರ್ಮಿಸಲಾಗುತ್ತಿದೆ. ಇದನ್ನು ೨೦೧೯ ಮತ್ತು ೨೦೨೩ ರ ನಡುವೆ ತೆಗೆದುಕೊಳ್ಳಲಾಗಿದೆ ಮತ್ತು ಅದರ ಉತ್ತರದ ಗಡಿಯ ಸುಮಾರು ಕಾಲು ಭಾಗವನ್ನು ಒಳಗೊಂಡಿದೆ. ಇನ್ನು ಚಿತ್ರಗಳು ಹೊಸ ಗಾರ್ಡ್ ಪೋಸ್ಟ್‌ಗಳು ಮತ್ತು ಬಫರ್ ಝೋನ್‌ಗಳ ರಚನೆಯಂತಹ ವಿಷಯಗಳನ್ನು ಸಹ ಬಹಿರಂಗಪಡಿಸಿದೆ. ಎಚ್‌ಆರ್‌ಡಬ್ಲ್ಯು ಮೂಲಗಳ ಪ್ರಕಾರ ಗಡಿ ಪ್ರದೇಶದಲ್ಲಿ ಭದ್ರತಾ ಸಿಬ್ಬಂದಿ ಸಂಖ್ಯೆಯಲ್ಲಿ ಕೂಡ ೨೦ ಪ್ರತಿಶತಕ ಹೆಚ್ಚಾಗಿರುವುದು ಕಂಡುಬಂದಿದೆ. ಆರಂಭದಲ್ಲಿ ಸುಮಾರು ೩೮ರಷ್ಟಿದ್ದ ಪೋಸ್ಟ್‌ಗಳು ಇದೀಗ ೬,೫೦೦ಕ್ಕೆ ಏರಿಕೆಯಾಗಿರುವುದು ಕಂಡುಬಂದಿದೆ.
ಉತ್ತರ ಕೊರಿಯಾದ ನಾಯಕ ಕಿಮ್ ಜೊಂಗ್ ಉನ್ ಅವರು ಉತ್ತರ ಕೊರಿಯಾವನ್ನು ದೈತ್ಯ ಸೆರೆಮನೆಯನ್ನಾಗಿ ಮಾಡುವ ನೀತಿಗಳನ್ನು ಕೊನೆಗೊಳಿಸಬೇಕು. ವ್ಯಾಪಾರಕ್ಕಾಗಿ ಅದರ ಗಡಿಗಳನ್ನು ಪುನಹ ತೆರೆಯಬೇಕು, ಆಂತರಿಕ ಪ್ರಯಾಣ ನಿರ್ಬಂಧಗಳನ್ನು ಸಡಿಲಗೊಳಿಸಬೇಕು ಮತ್ತು ಮೇಲ್ವಿಚಾರಣೆ ಮಾಡುವ ಅಂತಾರಾಷ್ಟ್ರೀಯ ತುರ್ತು ಸಹಾಯವನ್ನು ಅನುಮತಿಸಬೇಕು.
-ಎಚ್‌ಆರ್‌ಡಬ್ಲ್ಯುನ ಹಿರಿಯ ಕೊರಿಯಾ
ಸಂಶೋಧಕಿ ಲೀನಾ ಯೂನ್