ಮದುವೆ ದಿನವೇ ತಂದೆಯಿಂದ ಪುತ್ರನ ಹತ್ಯೆ
ನವದೆಹಲಿ,ಮಾ.೮-ದಕ್ಷಿಣ ದೆಹಲಿಯ ಡಿಯೋಲಿ ಎಕ್ಸ್‌ಟೆನ್ಶನ್ ಪ್ರದೇಶದಲ್ಲಿ ಮದುವೆಗೆ ಒಂದು ದಿನ ಮೊದಲು ೨೯ ವರ್ಷದ ಜಿಮ್ ತರಬೇತುದಾರನನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.
ಕೊಲೆ ಮಾಡಿದ್ದು ಯಾವುದೇ ಶತ್ರುವಲ್ಲ, ಜನ್ಮ ನೀಡಿದ ತಂದೆಯಿಂದಲೇ ಮಗ ಹತ್ಯೆಗೀಡಾಗಿದ್ದಾನೆ.
ಕೊಲೆಯಾದ ವ್ಯಕ್ತಿಯನ್ನು ೨೯ ವರ್ಷದ ಗೌರವ್ ಸಿಂಘಾಲ್ ಎಂದು ಗುರುತಿಸಲಾಗಿದೆ.
ಜಿಮ್ ಮಾಲೀಕ ೨೯ ವರ್ಷದ ಗೌರವ್ ಸಿಂಘಾಲ್ ಅವರನ್ನು ಅವರ ಮನೆಯಲ್ಲಿ ಹರಿತವಾದ ಆಯುಧದಿಂದ ಹತ್ಯೆ ಮಾಡಲಾಗಿದೆ. ಮದುವೆಗೆ ಕೆಲವು ಗಂಟೆಗಳ ಮೊದಲು ಅವರು ಕೊಲೆಯಾಗಿದ್ದಾರೆ.
ಈ ಕೊಲೆ ಪ್ರಕರಣದಲ್ಲಿ ಮೃತನ ತಂದೆಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಪೊಲೀಸ್ ವಿಚಾರಣೆ ವೇಳೆ ಮೃತ ಗೌರವ್ ಸಿಂಘಾಲ್ ತಂದೆ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ದೆಹಲಿ ಪೊಲೀಸರ ಪ್ರಕಾರ, ಸಿಂಘಾಲ್‌ನನ್ನು ಕೊಲೆ ಮಾಡಿದ್ದು ತಂದೆಯೇ. ೧೫ ಬಾರಿ ಚಾಕುವಿನಿಂದ ಇರಿದಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಕೊಲೆಯ ನಂತರ ತಂದೆ ನಾಪತ್ತೆಯಾಗಿದ್ದ ಎನ್ನಲಾಗಿದೆ. ತನಿಖೆ ವೇಳೆ ತಂದೆ-ಮಗನ ನಡುವೆ ಸೌಹಾರ್ದ ಸಂಬಂಧ ಇರಲಿಲ್ಲ ಎಂಬುದು ಬೆಳಕಿಗೆ ಬಂದಿದೆ. ಗೌರವ ಸಿಂಘಾಲ್ ಗುರುವಾರ ಮಾರ್ಚ್ ೭ ರಂದು ಮದುವೆಯಾಗಲಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.ತನ್ನ ಮಗನನ್ನು ಕೊಂದಿದ್ದಕ್ಕೆ ತನಗೆ ಯಾವುದೇ ಪಶ್ಚಾತ್ತಾಪವಿಲ್ಲ ಎಂದು ಆರೋಪಿ ಪೊಲೀಸರಿಗೆ ತಿಳಿಸಿದ್ದಾನೆ.
ಜಿಮ್ ತರಬೇತುದಾರನ ಮೇಲೆ ಹಲ್ಲೆ ನಡೆಸಿದ ನಂತರ, ಸಿಂಘಾಲ್ ಅವರ ಕುಟುಂಬ ಸದಸ್ಯರು ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ವೈದ್ಯರು ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು.ಕೊಲೆಯ ಹಿಂದಿನ ಉದ್ದೇಶ ಇನ್ನೂ ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ಸಿಂಘಾಲ್ ಅವರ ಮದುವೆ ನಡೆಯಬೇಕಿತ್ತು. ದೆಹಲಿ ಪೊಲೀಸರು ಮೃತನ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಏಮ್ಸ್ ಶವಾಗಾರದಲ್ಲಿ ಇರಿಸಿದ್ದಾರೆ. ಈ ವಿಷಯದಲ್ಲಿ ಹೆಚ್ಚಿನ ತನಿಖೆ ಇನ್ನೂ ನಡೆಯುತ್ತಿದೆ. ಸದ್ಯ ಪೊಲೀಸರು ಮೃತನ ತಂದೆಯ ವಿಚಾರಣೆ ನಡೆಸುತ್ತಿದ್ದಾರೆ. ಈ ಪ್ರಕರಣದಲ್ಲಿ ಮೃತ ಗೌರವ್ ಸಿಂಘಾಲ್ ಅವರ ಕಿರಿಯ ಸಹೋದರ ಮತ್ತು ಸಂಬಂಧಿಯನ್ನು ಪೊಲೀಸರು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ.
ಈ ಕೊಲೆ ಪ್ರಕರಣದಲ್ಲಿ ತಂದೆಯನ್ನು ಕಸ್ಟಡಿಗೆ ತೆಗೆದುಕೊಂಡ ನಂತರ, ಈ ಘಟನೆಯ ಹಿಂದಿನ ನಿಜವಾದ ಕಾರಣವನ್ನು ಕಂಡುಹಿಡಿಯಲು ತಮ್ಮ ಸ್ಥಳೀಯ ಮೂಲಗಳನ್ನು ಸಕ್ರಿಯಗೊಳಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ನಾವು ಎಲ್ಲಾ ಆಯಾಮಗಳಿಂದಲೂ ಪ್ರಕರಣದ ತನಿಖೆ ನಡೆಸುತ್ತಿದ್ದೇವೆ. ಐದಕ್ಕೂ ಹೆಚ್ಚು ತಂಡಗಳು ವಿವಿಧ ಅಂಶಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಆ ಪ್ರದೇಶದಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನೂ ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.