ಪ್ರಧಾನಿ ಹುದ್ದೆಯಿಂದ ಏರಿಯಲ್ ಕೆಳಗಿಳಿಯದಿದ್ದರೆ ಅಂತರ್ಯುದ್ದ?
ಪೋರ್ಟ್ ಔ ಪ್ರಿನ್ಸ್ (ಹೈಟಿ), ಮಾ.೭- ಇತ್ತೀಚಿಗಿನ ವರ್ಷಗಳಲ್ಲಿ ಹೈಟಿಯ ರಾಜಧಾನಿಯಲ್ಲಿ ತೀವ್ರ ರೀತಿಯಲ್ಲಿ ಹಿಂಸಾಚಾರ ನಡೆಸುತ್ತಿರುವ ಜಿಮ್ಮಿ “ಬಾರ್ಬೆಕ್ಯೂ ಚೆರಿಜಿಯರ್ ಗ್ಯಾಂಗ್ ಇದೀಗ ಪ್ರಧಾನಿ ಏರಿಯಲ್ ಹೆನ್ರಿಗೆ ಮತ್ತೊಂದು ಎಚ್ಚರಿಕೆ ಸಂದೇಶ ರವಾನಿಸಿದೆ. ಒಂದು ವೇಳೆ ಪ್ರಧಾನಿ ಹುದ್ದೆಯಿಂದ ಏರಿಯಲ್ ಕೆಳಗಿಳಿಯದಿದ್ದರೆ ದೇಶದಲ್ಲಿ ಅಂತರ್ಯುದ್ಧ ನಡೆಯಲಿದೆ ಎಂದು ಚೆರಿಜಿಯರ್ ಎಚ್ಚರಿಕೆ ಸಂದೇಶ ರವಾನಿಸಿದ್ದಾನೆ.
ವಿದೇಶಿ ಪ್ರವಾಸದಲ್ಲಿದ್ದ ಪ್ರಧಾನಿ ಹೆನ್ರಿ ಅವರು ಇದೀಗ ರಾಜಧಾನಿಯಲ್ಲಿನ ವಿಮಾನ ನಿಲ್ದಾಣಕ್ಕೆ ಆಗಮಿಸಿದ ವೇಳೆ ಜಿಮ್ಮಿ “ಬಾರ್ಬೆಕ್ಯೂ ಚೆರಿಜಿಯರ್ ಗ್ಯಾಂಗ್‌ನ ಸದಸ್ಯರು ನಿಲ್ದಾಣವನ್ನು ತಮ್ಮ ವಶಕ್ಕೆ ಪಡೆಯಲು ಯತ್ನಿಸಿದ್ದರು. ಆದರೆ ಭಾರೀ ಶಸ್ತ್ರಸಜ್ಜಿತ ಪೊಲೀಸರು ಸ್ಯಾನ್ ಜುವಾನ್‌ನಲ್ಲಿರುವ ಲೂಯಿಸ್ ಮುನೋಜ್ ಮರಿನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರತೆಯಲ್ಲಿ ನಿಯೋಜಿಸಲಾಗಿದ್ದ ಹಿನ್ನೆಲೆಯಲ್ಲಿ ಗ್ಯಾಂಗ್ ಸದಸ್ಯರ ಕೃತ್ಯ ಸಫಲವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಸದ್ಯ ಗ್ಯಾಂಗ್‌ನ ಸದಸ್ಯರು ಮುಂದೆ ರಾಜಧಾನಿಯಲ್ಲಿ ಮತ್ತೆ ಹಿಂಸಾಚಾರದಲ್ಲಿ ತೊಡಗಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ?ಸದ್ಯ ಇಲ್ಲಿನ ಪರಿಸ್ಥಿತಿ ಅಸಹನೀಯವಾಗಿದೆ. ಗ್ಯಾಂಗ್ ಹಿಂಸಾಚಾರದಿಂದ ೧,೧೯೩ ಜನರು ಸಾವನ್ನಪ್ಪಿದ್ದಾರೆ ಮತ್ತು ೬೯೨ ಇತರರು ಗಾಯಗೊಂಡಿದ್ದಾರೆ ಎಂದು ಯುಎನ್ (ವಿಶ್ವಸಂಸ್ಥೆ)ನ ಮಾನವ ಹಕ್ಕುಗಳ ಹೈ ಕಮಿಷನರ್ ವೋಲ್ಕರ್ ಟರ್ಕ್ ಅವರು ಹೇಳಿದರು. ಹೈಟಿ ಮತ್ತಷ್ಟು ಅವ್ಯವಸ್ಥೆಗೆ ಇಳಿಯುವುದನ್ನು ತಡೆಯಲು ಹಾಗೂ ತ್ವರಿತ ಮತ್ತು ನಿರ್ಣಾಯಕವಾಗಿ ಕಾರ್ಯನಿರ್ವಹಿಸಲು ಅಂತಾರಾಷ್ಟ್ರೀಯ ಸಮುದಾಯ ಮುಂದೆ ಬರಬೇಕಿದೆ ಎಂದು ಅವರು ತಿಳಿಸಿದ್ದಾರೆ. ಇತ್ತೀಚಿಗಿನ ದಿನಗಳಲ್ಲಿ ಸಾವಿರಾರು ಹೈಟಿ ನಾಗರಿಕರು ಪಲಾಯನ ಮಾಡಬೇಕಾಯಿತು. ಚಿಕ್ಕ ಮಕ್ಕಳು ಸೇರಿದಂತೆ ಸುಮಾರು ೧೫,೦೦೦ ಜನರು ತಮ್ಮ ಮನೆಗಳಿಂದ ಸ್ಥಳಾಂತರಗೊಂಡಿದ್ದಾರೆ ಎಂದು ಸಹಾಯ ಗುಂಪುಗಳು ಹೇಳಿವೆ.