ಮೂರು ವರ್ಷದಲ್ಲಿ 3000 ಪಬ್ಲಿಕ್ ಸ್ಕೂಲ್ :ಮಧು ಬಂಗಾರಪ್ಪ
ಕಲಬುರಗಿ,ಮಾ.8: ರಾಜ್ಯದಲ್ಲಿ ಶಿಕ್ಷಣದ ಗುಣಮಟ್ಟ ಸುಧಾರಣೆ ಭಾಗವಾಗಿ ಬರುವ ಮೂರು ವರ್ಷದಲ್ಲಿ ಹಂತಹಂತವಾಗಿ 3000 ಸರ್ಕಾರಿ ಶಾಲೆಗಳನ್ನು ಪಬ್ಲಿಕ್ ಸ್ಕೂಲ್‍ಗಳಾಗಿ ಮಾರ್ಪಡಿಸುವುದಾಗಿ ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆ ಸಚಿವ ಮಧು ಬಂಗಾರಪ್ಪ ಹೇಳಿದರು.
ಇಲ್ಲಿನ ಕೆಕೆಆರ್‍ಡಿಬಿ ಕಚೇರಿಯ ಸಭಾಂಗಣದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಪ್ರಸ್ತುತ ರಾಜ್ಯದಲ್ಲಿ ಕೇವಲ 297 ಪಬ್ಲಿಕ್ ಸ್ಕೂಲ್ ಇದ್ದು, ಪೋಷಕರಿಂದ ಮತ್ತಷ್ಟು ಹೆಚ್ಚಿನ ಕೆಪಿಎಸ್ ಶಾಲೆಗಳನ್ನು ತೆರೆಯುವಂತೆ ಒತ್ತಾಯ ಬರುತ್ತಿರುವ ಹಿನ್ನೆಲೆಯಲ್ಲಿ ಬರುವ ಶೈಕ್ಷಣಿಕ ವರ್ಷದಲ್ಲಿ 500 ಶಾಲೆಗಳನ್ನು ಆರಂಭಿಸಲಾಗುವುದು. ಮುಂದೆ ಹಂತಹಂತವಾಗಿ ಮೂರು ವರ್ಷಗಳಲ್ಲಿ ಒಟ್ಟು 3000 ಕೆಪಿಎಸ್ ಶಾಲೆಗಳನ್ನು ಆರಂಭಿಸಲಾಗುವುದು. ಅದೇರೀತಿ ಬರುವ ಶೈಕ್ಷಣಿಕ ವರ್ಷದಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ 137 ಕೆಪಿಎಸ್ ಶಾಲೆಗಳನ್ನು ಆರಂಭಿಸಲಾಗುವುದು. ಬರುವ ದಿನಗಳಲ್ಲಿ ಈ ಸಂಖ್ಯೆ ಹೆಚ್ಚಾದರೂ ಆಗಬಹುದು ಎಂದು ಸುಳಿವು ನೀಡಿದರು.
ಪ್ರತಿ ಎರಡು ಗ್ರಾಮ ಪಂಚಾಯಿತಿಗೆ ಒಂದರಂತೆ ಕೆಪಿಎಸ್ ಶಾಲೆಗಳನ್ನು ತೆರೆಯಲಾಗುತ್ತಿದ್ದು, ಈ ಶಾಲೆಗಳಲ್ಲಿ ಇಂಗ್ಲಿಷ್ ಮತ್ತು ಕನ್ನಡ ಎರಡೂ ಮಾಧ್ಯಮಗಳಲ್ಲಿ ಬೋಧನೆ ಇರಲಿದೆ ಎಂದು ನುಡಿದರು.
ಆದರ್ಶ ಶಾಲೆಗಳಲ್ಲಿ ಪಿಯು ಬೋಧನೆ:
ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಇನ್ನು ಮುಂದೆ ಆದರ್ಶ ಶಾಲೆಗಳಲ್ಲಿ ಪ್ರಥಮ ಮತ್ತು ದ್ವಿತೀಯ ಪಿಯುಸಿ ಬೋಧನೆಗೆ ಕ್ರಮ ಕೈಗೊಳ್ಳಲಾಗುವುದು. ಪ್ರಸ್ತುತ ಈ ಶಾಲೆಗಳಲ್ಲಿ 6ರಿಂದ 10ನೇ ತರಗತಿವರೆಗೆ ಮಾತ್ರ ಬೋಧನೆಗೆ ಅವಕಾಶವಿದೆ. ಪಿಯುಸಿ ಹಂತದ ಬೋಧನೆ ಆರಂಭದಿಂದ ಡ್ರಾಪ್ ಔಟ್ ಪ್ರಮಾಣ ಕಡಿಮೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬರುವ ಐದು ವರ್ಷಗಳಲ್ಲಿ ರಾಜ್ಯದ ಎಲ್ಲ ಪ್ರಾಥಮಿಕ ಮತ್ತು ಪ್ರೌಢಶಾಲೆಗಳನ್ನು ಹಂತಹಂತವಾಗಿ ಮೇಲ್ದರ್ಜೆಗೆ ಏರಿಸಲಾಗುವುದು. ಇದಕ್ಕೆ ಪೂರಕವಾಗಿ ಈಗಾಗಲೇ 1ರಿಂದ 8ನೇ ತರಗತಿವರೆಗೆ ಮಾತ್ರ ನೀಡುತ್ತಿದ್ದ ಮೊಟ್ಟೆ 9 ಹಾಗೂ 10ನೇ ತರಗತಿ ವಿದ್ಯಾರ್ಥಿಗಳಿಗೂ ನೀಡಲಾಗುತ್ತಿದೆ. ಮುಖ್ಯಮಂತ್ರಿಗಳ ನಿರ್ದೇಶನದ ಮೇರೆಗೆ ಈಗ ವಾರಕ್ಕೆ ಎರಡು ಬಾರಿ ವಿದ್ಯಾರ್ಥಿಗಳಿಗೆ ಮೊಟ್ಟೆ ನೀಡಲಾಗುತ್ತಿದೆ. ಇದರ ಜೊತೆಗೆ, ವಾರದಲ್ಲಿ ಮೂರು ದಿನ ರಾಗಿ ಮಾಲ್ಟ್ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಸ್ಪೆಷಲ್ ಕ್ಲಾಸ್ ನಡೆಸಲು ಸೂಚನೆ:
ಸರಕಾರಿ ಶಾಲೆಗಳಿಗೆ ಉಚಿತವಾಗಿ ವಿದ್ಯುತ್ ಪೂರೈಕೆ ಮಾಡಬೇಕೆಂಬ ನಿಯಮ ಈಗಾಗಲೇ ಜಾರಿಗೊಳಿಸಲಾಗಿದೆ. ಇದರಿಂದ ಶಾಲಾ ಅವಧಿ ಬಳಿಕ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ತೆಗೆದುಕೊಳ್ಳಲು ಅನುಕೂಲ ಆಗಲಿದೆ. ಶಿಕ್ಷಕರು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು. ಈಗಾಗಲೇ ಮಲೆನಾಡು ಭಾಗದ ಶಾಲೆಗಳಲ್ಲಿ ವಿಶೇಷ ತರಗತಿಗಳು ನಡೆಯುತ್ತಿವೆ ಎಂದರು.
ವರ್ಷಕ್ಕೆ ಮೂರು ಬೋರ್ಡ್ ಪರೀಕ್ಷೆ ನಡೆಸುವುದರ ಹಿಂದೆ ವಿದ್ಯಾರ್ಥಿಗಳ ಆತ್ಮಬಲ ಹೆಚ್ಚಿಸುವ ಇರಾದೆಯಿದೆಯೇ ಹೊರತು ಬೇರೆ ಯಾವುದೇ ಉದ್ದೇಶವಿಲ್ಲ ಎಂದ ಅವರು, ಫೇಲ್ ಎನ್ನುವ ಪದ ವಿದ್ಯಾರ್ಥಿ ಜೀವನದಲ್ಲಿ ಬರಬಾರದು ಎಂಬ ಉದ್ದೇಶದಿಂದ ಈ ವ್ಯವಸ್ಥೆ ಜಾರಿಗೊಳಿಸಲಾಗಿದೆ ಎಂದು ಸಚಿವ ಮಧು ಬಂಗಾರಪ್ಪ ಸಮಜಾಯಿಷಿ ನೀಡಿದರು.
ಸರಕಾರಿ ಶಾಲಾ ಶಿಕ್ಷಕರಿಗೆ ಉನ್ನತ ಮಟ್ಟದ ತರಬೇತಿ ನೀಡುವ ನಿಟ್ಟಿನಲ್ಲಿ ಅಜೀಂ ಪ್ರೇಮ್‍ಜಿ ಫೌಂಡೇಷನ್, ಟೊಯೊಟಾ ಸಂಸ್ಥೆ ಸೇರಿದಂತೆ ವಿವಿಧ ಸಂಸ್ಥೆಗಳಿಂದ ಸಿಎಸ್‍ಆರ್ ಫಂಡ್ ಬಳಸಿಕೊಂಡು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಹ ಹೇಳಿದರು.ಶಾಸಕ ಎಂ.ವೈ.ಪಾಟೀಲ್, ಕೆ.ಕೆ.ಆರ್.ಡಿ.ಬಿ ಕಾರ್ಯದರ್ಶಿ ಸುಂದರೇಶ್ ಬಾಬು, ಜಿಲ್ಲಾ ಪಂಚಾಯಿತಿ ಸಿಇಒ ಭವರ್‍ಸಿಂಗ್ ಮೀನಾ, ಶಿಕ್ಷಣ ಇಲಾಖೆಯ ಅಪರ ಆಯುಕ್ತ ಆಕಾಶ್ ಇದ್ದರು.
ಶೈಕ್ಷಣಿಕ ವರ್ಷ ಘೋಷಣೆ
ಕೆಕೆಆರ್‍ಡಿಬಿ ವತಿಯಿಂದ 2023-24 ಹಾಗೂ 2024-25ನೇ ಸಾಲನ್ನು ಶೈಕ್ಷಣಿಕ ವರ್ಷ ಎಂದು ಘೋಷಿಸಲಾಗಿದೆ. ಇದರಡಿ ಕಲ್ಯಾಣ ಕರ್ನಾಟಕ ಭಾಗದ 9249 ಸರ್ಕಾರಿ ಶಾಲೆಗಳ ಬಲವರ್ಧನೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕೆಕೆಆರ್‍ಡಿಬಿ ಅಧ್ಯಕ್ಷ ಡಾ.ಅಜಯಸಿಂಗ್ ಹೇಳಿದರು.
ಇದಕ್ಕಾಗಿ ಕಳೆದ ಆರ್ಥಿಕ ಸಾಲಿನ ರೂ. 2610 ಕೋಟಿ ಅನುದಾನದಲ್ಲಿ ರೂ.652 ಕೋಟಿ ಅನುದಾನವನ್ನು ಶಿಕ್ಷಣ ಕ್ಷೇತ್ರಕ್ಕಾಗಿ ಖರ್ಚು ಮಾಡಲು ನಿರ್ಧರಿಸಲಾಗಿದೆ. ಇದರ ಭಾಗವಾಗಿ ಈಗಾಗಲೇ ಅಕ್ಷರ ಆವಿಷ್ಕಾರ ಯೋಜನೆ ಅಡಿ 2618 ಶಿಕ್ಷಕರನ್ನು ಮಂಡಳಿ ವತಿಯಿಂದ ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.
ಯತ್ನಾಳ್ ಅವರಿಗೆ ಮಾಡೋದಕ್ಕೆ ಕೆಲಸ ಇಲ್ಲ
ಮಾಜಿ ಕೇಂದ್ರ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಮಾಡೋದಕ್ಕೆ ಕೆಲಸ ಇಲ್ಲ. ಹೀಗಾಗಿ, ಯಾವುದಾದರೂ ದೇವಸ್ಥಾನದ ಎದುರು ಕುಳಿತು ಭವಿಷ್ಯ ಹೇಳುವ ಕೆಲಸ ಮಾಡಲಿ ಎಂದು ಸಚಿವ ಮಧು ಬಂಗಾರಪ್ಪ ಲೇವಡಿ ಮಾಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದ ಪತನದ ಕುರಿತು ಬಸನಗೌಡ ಪಾಟೀಲ್ ಯತ್ನಾಳ್ ಮೇಲಿಂದ ಮೇಲೆ ಹೇಳಿಕೆ ನೀಡುತ್ತಿರುತ್ತಾರಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅವರಿಗೆ ಮಾಡೋದಕ್ಕೆ ಬೇರೇನೂ ಕೆಲಸ ಇಲ್ಲ ಎಂದರು.
ಬಿಜೆಪಿಯವರು ಅಯೋಧ್ಯೆಯ ರಾಮನನ್ನು ಬೀದಿಗೆ ತಂದು ನಿಲ್ಲಿಸಿದ್ದಾರೆ. ಅವರಿಗೆ ನಾಚಿಕೆಯಾಗಬೇಕು. ರಸ್ತೆಗಳಲ್ಲಿ ಶ್ರೀರಾಮನ ದೊಡ್ಡ ದೊಡ್ಡ ಕಟೌಟ್ ಮಾಡಿ ನಿಲ್ಲಿಸಲಾಗಿದೆ. ಆ ಕಟೌಟ್ ನೆಲಕ್ಕೆ ಬಿದ್ದು ಕಸದ ಬುಟ್ಟಿಗೆ ಸೇರುತ್ತದೆ. ಇದರಿಂದ ರಾಮನಿಗೆ ಅವಮಾನ ಮಾಡಿದಂತೆ ಆಗುವುದಿಲ್ಲವೇ ಎಂದು ಅವರು ಪ್ರಶ್ನಿಸಿದರು.
ಇಂತಹ ಅಚಾತುರ್ಯಗಳು ಆಗಬಾರದು ಎನ್ನುವ ಕಾರಣಕ್ಕಾಗಿ ಈ ಹಿಂದೆ ಬಂಗಾರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಆರಾಧನಾ ಯೋಜನೆ ಜಾರಿಗೆ ತಂದು ಎಲ್ಲ ದೇವರುಗಳಿಗೆ ದೇವಾಲಯದಲ್ಲಿಯೇ ಸಮರ್ಪಕವಾಗಿ ಪೂಜೆ ನೆರವೇರಿಸಲು ಅಗತ್ಯ ಅನುದಾನ ನೀಡುತ್ತಿದ್ದರು ಎಂದರು.