ಗಿಲ್-ರೋಹಿತ್ ಶತಕ ಬೃಹತ್ ಮೊತ್ತದತ್ತ ಭಾರತ
ಧರ್ಮಶಾಲಾ, ಮಾ.೮- ಆಂಗ್ಲ ತಂಡವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕಿದ್ದ ಭಾರತ ಇದೀಗ ಐದು ಹಾಗೂ ಅಂತಿಮ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಬೃಹತ್ ಮುನ್ನಡೆಯತ್ತ ಸಾಗಿದೆ. ರೋಹಿತ್ ಶರ್ಮಾ ಹಾಗೂ ಶುಭ್‌ಮನ್ ಗಿಲ್ ದಾಖಲಿಸಿದ ಆಕರ್ಷಕ ಅಜೇಯ ಶತಕದ ನೆರವಿನಿಂದ ಭಾರತ ಬೃಹತ್ ಮೊತ್ತದತ್ತ ದಾಪುಗಾಲು ಹಾಕಿದೆ.
ಕುಲ್‌ದೀಪ್ ಹಾಗೂ ಆರ್ ಅಶ್ವಿನ್ ಸ್ಪಿನ್ ಮೋಡಿಗೆ ಸಿಲುಕಿದ ಆಂಗ್ಲಪಡೆ ತನ್ನ ಪ್ರಥಮ ಇನ್ನಿಂಗ್ಸ್‌ನಲ್ಲಿ ೨೧೮ ರನ್‌ಗಳಿಗೆ ಆಲೌಟಾಗಿತ್ತು.
ಪ್ರತಿಯಾಗಿ ಬ್ಯಾಟಿಂಗ್ ಆರಂಭಿಸಿದ ಭಾರತ ಮೊದಲ ದಿನದಂತ್ಯದ ವೇಳೆಗೆ ಒಂದು ವಿಕೆಟ್ ನಷ್ಟಕ್ಕೆ ೧೩೫ ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿತ್ತು. ಆಕರ್ಷಕ ಅರ್ಧಶತಕ ಗಳಿಸಿದ್ದ ಜೈಸ್ವಾಲ್ ೬೭ ರನ್ ಗಳಿಸುವ ವೇಳೆಗೆ ಔಟಾಗಿದ್ದರು.
ಇನ್ನು ಬ್ಯಾಟಿಂಗ್ ಕಾಯ್ದುಕೊಂಡಿದ್ದ ರೋಹಿತ್ ಹಾಗೂ ಗಿಲ್ ದ್ವಿತೀಯ ದಿನದಲ್ಲೂ ತಮ್ಮ ಅಬ್ಬರದ ಬ್ಯಾಟಿಂಗ್ ಮುಂದುವರೆಸಿದ್ದಾರೆ.
ಸಿಕ್ಸರ್-ಬೌಂಡರಿಗಳ ಮೂಲಕ ಎದುರಾಳಿ ಬೌಲರ್ಸ್‌ಗಳ ಬೆವರಿಳಿಸಿದ ಜೋಡಿ, ಅಮೋಘ ಬ್ಯಾಟಿಂಗ್ ಮೂಲಕ ಭಾರತಕ್ಕೆ ಬೃಹತ್ ಮೊತ್ತದ ಕನಸು ಮೂಡಿಸಿದ್ದಾರೆ.
ಅದರಂತೆ ಆಕರ್ಷಕ ಬ್ಯಾಟಿಂಗ್ ನಡೆಸಿದ ಜೋಡಿ ಶತಕದ ಮೂಲಕ ಸಂಭ್ರಮಿಸಿದರು. ರೋಹಿತ್ (೧೦೨) ಹಾಗೂ ಗಿಲ್ (೧೦೧) ಜೋಡಿ ದ್ವಿತೀಯ ವಿಕೆಟ್‌ಗೆ ಅಜೇಯ ೧೬೦ ರನ್‌ಗಳ ಜೊತೆಯಾಟ ನಡೆಸಿದ್ದು, ಬ್ಯಾಟಿಂಗ್ ಮುಂದುವರೆಸಿದ್ದಾರೆ.
ಇನ್ನು ದ್ವಿತೀಯ ದಿನದ ಭೋಜನಾ ವಿರಾಮದ ವೇಳೆಗೆ ಭಾರತ ಒಂದು ವಿಕೆಟ್ ನಷ್ಟಕ್ಕೆ ೨೬೪ ರನ್ ಗಳಿಸಿದ್ದು, ಒಟ್ಟು ೪೬ ರನ್‌ಗಳ ಮುನ್ನಡೆ ಸಾಧಿಸಿದೆ.
ರೋಹಿತ್ ತನ್ನ ಇನ್ನಿಂಗ್ಸ್‌ನಲ್ಲಿ ೧೩ ಬೌಂಡರಿ ಹಾಗೂ ಮೂರು ಸಿಕ್ಸರ್ ಸಿಡಿಸಿದ್ದರೆ ಗಿಲ್ ೧೦ ಬೌಂಡರಿ ಹಾಗೂ ಐದು ಸಿಕ್ಸರ್ ಮೂಲಕ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದಾರೆ.