ಕುಖ್ಯಾತ ರೌಡಿ ಸೈಕಲ್ ಗಿರಿಗೆ ಗುಂಡಿಕ್ಕಿ ಬಂಧನ
ಬೆಂಗಳೂರು,ಮಾ.೭-ಪೇದೆಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ ಕುಖ್ಯಾತ ರೌಡಿ ಸೈಕಲ್ ಗಿರಿಗೆ ಕಗ್ಗಲಿಪುರ ಪೊಲೀಸರು ಗುಂಡು ಹೊಡೆದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪೊಲೀಸರ ಗುಂಡು ಕಾಲಿಗೆ ಗಂಭೀರವಾಗಿ ಗಾಯಗೊಂಡಿರುವ ಕೋಣನಕುಂಟೆ ಕ್ರಾಸ್ ನ ಗಣಪತಿಪುರದ ಗಿರೀಶ್ ಅಲಿಯಾಸ್ ಸೈಕಲ್ ಗಿರಿ(೨೭) ಘಟನೆಯಲ್ಲಿ ಕೈಗೆ ಗಾಯವಾಗಿರುವ ಪೇದೆ ಬರ್ಲಿಂಗಪ್ಪ ಅವರನ್ನೂ ರಾಜ ರಾಜೇಶ್ವರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಗ್ಗಲಿಪುರದ ಚೂಡಹಳ್ಳಿಯ ಶಿವಮಾದ ನಾಯ್ಕ ಅವರ ತೋಟದ ಮನೆಯಲ್ಲಿ ಸ್ನೇಹಿತ ರಾದ ವಿಶ್ವೇಶ್ವರ್, ಅಭಿಷೇಕ್, ರಾಹುಲ್ ಹಾಗೂ ವರುಣ್ ಮಾರ್ಚ್ ೧ರಂದು ರಾತ್ರಿ ಊಟಕ್ಕೆ ಸೇರಿದ್ದರು.
ಮಧ್ಯರಾತ್ರಿ ೧೨ರ ಸುಮಾರಿಗೆ ಸೈಕಲ್ ಗಿರಿ ಸೇರಿದಂತೆ ಏಳೆಂಟು ರೌಡಿಗಳು ತೋಟದ ಮನೆಗೆ ನುಗ್ಗಿ, ಚಾಕುವಿನಿಂದ ಬೆದರಿಸಿ ಎಲ್ಲರ ಮೊಬೈಲ್ ಕಸಿದಿದ್ದರು.
ಈ ವೇಳೆ ವಿಶ್ವೇಶ್ವರ್ ತಲೆಗೆ ರೌಡಿಗಳು ಬಿಯರ್ ಬಾಟಲಿಯಿಂದ ಹೊಡೆದು, ಹಲ್ಲೆ ನಡೆಸಿದ್ದರು. ಬಿಡಿಸಲು ಬಂದವರನ್ನು ಹೆದರಿಸಿದ್ದರು. ಅಭಿಷೇಕ್ ಅವರ ಪರ್ಸ್ ಮತ್ತು ೪೦ ಸಾವಿರ ಮೌಲ್ಯದ ವಾಚ್ ಕಿತ್ತುಕೊಂಡಿದ್ದರು. ರಾಹುಲ್ ಬಳಿ ಇದ್ದ ೩,೫೦೦ ಹಣ ದೋಚಿದ್ದರು. ಹಲ್ಲೆ ನಡೆಸಿದವರಲ್ಲಿ ಇಬ್ಬರು, ’ನಾವು ಸೈಕಲ್ ಗಿರಿ ಮತ್ತು ಕಿಶೋರ್. ನಮಗೆ ೨ ಲಕ್ಷ ಹಣ ಕೊಡದಿದ್ದರೆ ಚಾಕುವಿನಿಂದ ಚುಚ್ಚುತ್ತೇವೆ’ ಎಂದು ಬೆದರಿಸಿದ್ದರು.
ಕೂಗಾಟ ಕೇಳಿ ತೋಟದ ಕಾರ್ಮಿಕರು ಸ್ಥಳಕ್ಕೆ ಬರುತ್ತಿದ್ದಂತೆ, ರೌಡಿಗಳು ಹಣ ಮತ್ತು ಇತರ ವಸ್ತುಗಳನ್ನು ಅಲ್ಲೆಯೇ ಬಿಟ್ಟು ಪರಾರಿಯಾಗಿದ್ದರು. ಘಟನೆಗೆ ಸಂಬಂಧ ಮರುದಿನ ಡಕಾಯಿತಿ ಮತ್ತು ಹಲ್ಲೆ ಪ್ರಕರಣ ಪ್ರಕರಣ ದಾಖಲಾಗಿತ್ತು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕಾರ್ಯಾಚರಣೆ ಕೈಗೊಂಡ ಕಗ್ಗಲಿಪುರ ಪೊಲೀಸರು ಆರೋಪಿಗಳ ಪೈಕಿ ಸೈಕಲ್ ಗಿರಿಯನ್ನು ಬಂಧಿಸಿದ್ದರು.
ಬಂಧಿತ ಆರೋಪಿ ಗಿರಿಯನ್ನು ಕೃತ್ಯ ನಡೆದ ಸ್ಥಳ ಮಹಜರು ನಡೆಸಲು ಕರೆದುಕೊಂಡು ಹೋಗಿದ್ದು ಈ ವೇಳೆ ತಪ್ಪಿಸಿಕೊಳ್ಳಲು ಪೇದೆ ಬರ್ಲಿಂಗಪ್ಪ ಅವರ ಕೈಗೆ ಹಲ್ಲೆ ಮಾಡಿದ್ದಾನೆ.
ಕೂಡಲೇ ಪೊಲೀಸರು ಹಲ್ಲೆ ನಿಲ್ಲಿಸಿ ಶರಣಾಗುವಂತೆ ಸೂಚಿಸಿದರೂ ಮತ್ತೆ ಹಲ್ಲೆಗೆ ಯತ್ನಿಸಿದಾಗ ಸ್ವಯಂರಕ್ಷಣೆಗೆ ಗುಂಡುಹಾರಿಸಿದ್ದು,ಅದು ಕಾಲಿಗೆ ತಗುಲಿ ಸ್ಥಳದಲ್ಲೇ ಕುಸಿದುಬಿದ್ದಿದ್ದು ಕೂಡಲೇ ಆತನನ್ನು ಬಂಧಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಿರಿ ವಿರುದ್ಧ ೮ ಪ್ರಕರಣ:
ಗುಂಡೇಟು ತಿಂದಿರುವ ಗಿರೀಶ್ ಎನ್. ಅಲಿಯಾಸ್ ಸೈಕಲ್ ಗಿರಿ ಕೋಣನ ಕುಂಟೆ ಕ್ರಾಸ್‌ನ ಗಣಪತಿಪುರದಲ್ಲಿ ಆಟೋ ಚಾಲಕನಾಗಿದ್ದು, ಅಪರಾಧವನ್ನೇ ವೃತ್ತಿ ಮಾಡಿ ಕೊಂಡಿದ್ದಾನೆ. ಗಿರಿ ವಿರುದ್ಧ ಕಗ್ಗಲಿಪುರ ಮತ್ತು ಸುಬ್ರ ಮಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೂರು ಕೊಲೆ ಯತ್ನ, ದರೋಡೆ, ಡಕಾಯಿತಿ ಹಾಗೂ ಅಪಹರಣ ಪ್ರಕರಣ ದಾಖಲಾಗಿದೆ.