ಆಸಿಡ್ ಮಾರಾಟ ನಿಷೇಧಕ್ಕೆ ಚಿಂತನೆ
ಬೆಂಗಳೂರು, ಮಾ.೭- ದಕ್ಷಿಣ ಕನ್ನಡ ಜಿಲ್ಲೆಯ ಕಡಬದಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಮೂವರು ಪಿಯು ವಿದ್ಯಾರ್ಥಿನಿಯರ ಮೇಲೆ ಆಸಿಡ್ ದಾಳಿಯನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರವು ರಾಜ್ಯದಲ್ಲಿ ಆಸಿಡ್ ಮಾರಾಟ ನಿಷೇಧಿಸುವ ಚಿಂತನೆ ನಡೆಸಿದೆ.
ಆಸಿಡ್ ಸುಲಭವಾಗಿ ದೊರೆಯುವುದರಿಂದ ದುಷ್ಕರ್ಮಿಗಳು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ, ಲಭ್ಯತೆ ಮತ್ತು ಖರೀದಿಯ ಸಂಬಂಧ ನಿರ್ಬಂಧಗಳನ್ನು ಹಾಕುವುದು ಅನಿವಾರ್ಯವಾಗಿರುವುದರಿಂದ ಆಸಿಡ್ ಮಾರಾಟ ನಿಷೇಧಿಸಲು ಚಿಂತನೆ ನಡೆಸಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ನಗರದ ಪೊಲೀಸ್ ಕಮೀಷನರ್ ಕಚೇರಿಯಲ್ಲಿ ನಡೆದ ‘ಮಹಿಳೆಯರ ಮೇಲಿನ ದೌರ್ಜನ್ಯ ಕುರಿತ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ವಿವಿಧ ಮಹಿಳಾ ಸಂಘಟನೆಗಳು ಹಾಗೂ ಸರ್ಕಾರೇತರ ಸಂಸ್ಥೆಗಳ ಸಲಹೆಗಳನ್ನು ಆಲಿಸಿ ಮಾತನಾಡಿದ ಸಚಿವರು, ರಾಜ್ಯದಲ್ಲಿ ಮಹಿಳಾ ಮತ್ತು ಮಕ್ಕಳ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು, ಅವರ ಮೇಲೆ ದೌರ್ಜನ್ಯ ನಡೆದರೆ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಮಹಿಳೆಯರು ಮತ್ತು ಮಕ್ಕಳು ತಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗದಿದ್ದರೆ, ವಿಧಾನಸೌಧದ ಕಾರ್ಯಾಲಯ ಅಥವಾ ಗೃಹ ಕಚೇರಿಗೆ ಆಗಮಿಸಿ ನನ್ನನ್ನು ಭೇಟಿಯಾಗಿ ಸಮಸ್ಯೆಯನ್ನು ಹೇಳಿಕೊಳ್ಳಬಹುದು ಎಂದರು.
ಕಡಬದಲ್ಲಿ ಆಸಿಡ್ ದಾಳಿಗೆ ಒಳಗಾದ ಸಂತ್ರಸ್ತರಿಗೆ ಸರ್ಕಾರ ಈಗಾಗಲೇ ೪ ಲಕ್ಷ ರೂ. ಪರಿಹಾರ ಘೋಷಿಸಿದೆ. ಅವರಿಗೆ ಪ್ಲಾಸ್ಟಿಕ್ ಸರ್ಜರಿ ಅವಶ್ಯವಿದ್ದರೆ ೨೦ ಲಕ್ಷದವರೆಗೂ ಖರ್ಚನ್ನು ಭರಿಸಲು ಮುಂದಾಗಿದೆ. ಜೊತೆಗೆ ಸಂತ್ರಸ್ತರಿಗೆ ನಿವೇಶನವನ್ನು ಕೂಡಾ ನೀಡಲಾಗುವುದು ಎಂದು ಗೃಹ ಸಚಿವರು ಹೇಳಿದ್ದಾರೆ.
ಮಹಿಳೆಯರಿಗೆ ಗೌರವ:
ಪೊಲೀಸರು ಕೂಡಾ ಮಹಿಳೆಯರ ಸಮಸ್ಯೆ ಗಳ ವಿಚಾರದಲ್ಲಿ ಹೆಚ್ಚು ಕಾಳಜಿಯಿಂದ ಕ್ರಮ ವಹಿಸಬೇಕು,ಪೊಲೀಸರು ಜನಸ್ನೇಹಿಯಾಗಿ ಕೆಲಸ ಮಾಡಬೇಕು. ಮಹಿಳೆಯರು ತಮ್ಮ ಸಮಸ್ಯೆಗಳ ಕುರಿತು ದೂರು ನೀಡಲು ಠಾಣೆಗೆ ಬಂದರೆ ಕೂಡಲೆ ಸಮಸ್ಯೆಗಳನ್ನು ಆಲಿಸಿ ನಮ್ಮ ಬೆನ್ನಿಗೆ ಪೊಲೀಸರು ಇದ್ದಾರೆ ಎಂಬ ಧೈರ್ಯ ಅವರಲ್ಲಿ ಮೂಡಬೇಕು ಎಂದರು.
ಮಹಿಳೆಯರು ಧೈರ್ಯವಾಗಿದ್ದರೆ ಒಳ್ಳೆ ಆಡಳಿತ, ಜನಸ್ನೇಹಿ ಪೊಲೀಸ್ ಎನಿಸಿಕೊಳ್ಳಲು ಸಾಧ್ಯ.ಈ ಹಿಂದೆ ಪೊಲೀಸ್ ಸಹಾಯವಾಣಿ ಮೂಲಕ ಬಂದ ದೂರುಗಳನ್ನು ಆಧರಿಸಿ, ಹೋಯ್ಸಳ ಸಿಬ್ಬಂದಿ ಸ್ಥಳಕ್ಕೆ ಹೋಗಲು ೨೦ ನಿಮಿಷ ತೆಗೆದುಕೊಳ್ಳುತ್ತಿದ್ದರು. ಪ್ರಸ್ತುತ ೭ ನಿಮಿಷದೊಳಗೆ ಸ್ಥಳದಲ್ಲಿ ಹಾಜರಿರುತ್ತಾರೆ. ನಗರದಲ್ಲಿ ೭,೫೦೦ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಪೊಲೀಸರು ನಿರಂತರ ಕಣ್ಗಾವಲು ಇಟ್ಟಿರುತ್ತಾರೆ ಎಂದು ಹೇಳಿದರು.
ಮಹಿಳಾ ಸಿಬ್ಬಂದಿ ಹೆಚ್ಚಳ:
ಪೊಲೀಸ್ ಠಾಣೆಯಲ್ಲಿ ಮಹಿಳಾ ಸಿಬ್ಬಂದಿ ಪ್ರಮಾಣ ಹೆಚ್ಚಬೇಕು,ಈಗಿರುವ ಪೊಲೀಸ್ ಸಿಬ್ಬಂದಿಗಳಲ್ಲಿ ಶೇ.೮ರಷ್ಟು ಮಹಿಳೆಯರಿದ್ದಾರೆ. ಶೇ.೨೫ರಷ್ಟಾಗಬೇಕು ಎಂಬ ಗುರಿ ಹೊಂದಲಾಗಿದೆ. ಮಹಿಳಾ ಪೊಲೀಸ್ ಠಾಣೆಗಳಲ್ಲಿ ಮಹಿಳಾ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ನೇಮಿಸಲು ಕ್ರಮ ಕೈಗೊಳ್ಳುವುದಾಗಿ ಜಿ. ಪರಮೇಶ್ವರ್ ತಿಳಿಸಿದರು.
ಮಹಿಳಾ ಸಬಲೀಕರಣದ ನಿಟ್ಟಿನಲ್ಲಿ ನಮ್ಮ ಸರ್ಕಾರವು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಗ್ರಾಮೀಣ ಭಾಗದ ಮಹಿಳೆಯರ ಆರ್ಥಿಕ ಶಕ್ತಿ ಹೆಚ್ಚಿಸಬೇಕು ಎಂಬುದು ನಮ್ಮ ಸರ್ಕಾರದ ಉದ್ದೇಶ. ಮಹಿಳೆಯರ ಬಗ್ಗೆ ಅವಹೇಳನ ಮಾಡುವುದು, ಅವಾಚ್ಯ ಮಾತುಗಳನ್ನು ಹಾಗೂ ತಿರುಚಿದ ವೀಡಿಯೋಗಳನ್ನು ಪ್ರಕಟಿಸುವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.