ಲಾಡ್ಲೆ ಮಶಾಕ್ ದರ್ಗಾದಲ್ಲಿ ಮಹಾಶಿವರಾತ್ರಿ ಪೂಜೆ ಸಲ್ಲಿಸಲು ಹಿಂದೂಗಳಿಗೆ ಉಚ್ಛ ನ್ಯಾಯಾಲಯ ಅನುಮತಿ
ಕಲಬುರಗಿ:ಮಾ.06:ಜಿಲ್ಲೆಯ ಆಳಂದ್ ಪಟ್ಟಣದದಲ್ಲಿನ ವಿವಾದಿತ ಲಾಡ್ಲೆ ಮಶಾಕ್ ದರ್ಗಾದಲ್ಲಿ ಮಹಾಶಿವರಾತ್ರಿಯಂದು ಮಾರ್ಚ್ 8ರಂದು ಹಿಂದೂಗಳಿಗೆ ಪೂಜೆ ಸಲ್ಲಿಸಲು ಇಲ್ಲಿನ ಉಚ್ಛ ನ್ಯಾಯಾಲಯವು ಶರತ್ತುಬದ್ಧ ಅನುಮತಿ ನೀಡಿ ಆದೇಶ ಹೊರಡಿಸಿದೆ.
ಈ ಕುರಿತು ಶುಕ್ರವಾರ ಆದೇಶ ಹೊರಡಿಸಿದ್ದು, ಲಾಡ್ಲೆ ಮಶಾಕ್ ದರ್ಗಾದಲ್ಲಿ ಮಹಾಶಿವರಾತ್ರಿಯ ದಿನವಾದ ಶುಕ್ರವಾರದಂದು ಮಧ್ಯಾಹ್ನದ ನಂತರ ಪೂಜೆಗೆ 15ಜನ ಹಿಂದೂಗಳಿಗೆ ಅವಕಾಶ ಕೊಟ್ಟಿದೆ. ಪೂಜೆ ಸಲ್ಲಿಸುವವರ 15 ಜನರ ಪಟ್ಟಿಯನ್ನು ಸಲ್ಲಿಸುವಂತೆ ನ್ಯಾಯಾಲಯವು ಸೂಚಿಸಿದೆ. ಇಲ್ಲದಿದ್ದರೆ ಅನುಮತಿ ನೀಡಲಾಗುವುದಿಲ್ಲ ಎಂದು ಸೂಚಿಸಿದೆ.
ಮುಸ್ಲಿಂ ಸಮುದಾಯದವರೂ ಸಹ ಮಹಾಶಿವರಾತ್ರಿಯ ದಿನದಂದು ಶುಕ್ರವಾರ ಇರುವುದರಿಂದ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಲು ಹದಿನೈದು ಜನರಿಗೆ ಮಾತ್ರ ಉಚ್ಛ ನ್ಯಾಯಾಲಯವು ಅವಕಾಶ ಕೊಟ್ಟಿದೆ.
ಕಳೆದ ಬಾರಿಯೂ ಸಹ ಇದೇ ರೀತಿಯಲ್ಲಿ ಉಚ್ಛ ನ್ಯಾಯಾಲಯವು ಅನುಮತಿ ಕೊಟ್ಟಿದ್ದು, ಆದಾಗ್ಯೂ, ಪೂಜೆಯ ನಂತರದಲ್ಲಿ ಹಿಂಸಾತ್ಮಕ ಘಟನೆಗಳು ಸಂಭವಿಸಿದ್ದವು. ಕೇಂದ್ರ ಸಚಿವ ಭಗವಂತ್ ಖೂಬಾ, ಶಾಸಕರಾಗಿದ್ದ ಬಸವರಾಜ್ ಮತ್ತಿಮೂಡ್, ಜಿಲ್ಲಾಧಿಕಾರಿ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳ ಕಾರುಗಳ ಮೇಲೆ ಕಲ್ಲು ತೂರಾಟ ಮಾಡಿದ್ದರು. ಈ ಬಾರಿ ಹಿಂದಿನ ಹಿಂಸಾತ್ಮಕ ಘಟನೆಗಳು ಸಂಭವಿಸದಂತೆ ಸೂಕ್ತ ಬಂದೋಬಸ್ತ್ ಕಲ್ಪಿಸಬೇಕು ಎಂದು ನ್ಯಾಯಾಲಯವು ಜಿಲ್ಲಾಡಳಿತಕ್ಕೆ ಸೂಚಿಸಿದೆ.
ಈಗಾಗಲೇ ವಕ್ಫ್ ನ್ಯಾಯ ಮಂಡಳಿಯು ಲಾಡ್ಲೆ ಮಶಾಕ್ ದರ್ಗಾದಲ್ಲಿ ಮಹಾಶಿವರಾತ್ರಿಯಂದು ಹಿಂದೂಗಳು ರಾಘವಚೈತನ್ಯರ ಲಿಂಗಕ್ಕೆ ಪೂಜೆ ಸಲ್ಲಿಸುವುದಕ್ಕೆ ಅನುಮತಿ ನಿರಾಕರಿಸಿತ್ತು. ಈಗ ಉಚ್ಛ ನ್ಯಾಯಾಲಯದ ತೀರ್ಪಿನಿಂದಾಗಿ ವಕ್ಫ್ ನ್ಯಾಯ ಮಂಡಳಿಯ ತೀರ್ಪಿಗೆ ತೀವ್ರ ಹಿನ್ನಡೆಯಾಗಿದೆ.
ಇಲ್ಲಿನ ಉಚ್ಛ ನ್ಯಾಯಾಲಯಕ್ಕೆ ರಾಘವಚೈತನ್ಯ ಮಂದಿರದ ಜೀರ್ಣೋದ್ಧಾರ ಸಮಿತಿಯು ಸಹ ಅರ್ಜಿಯನ್ನು ಸಲ್ಲಿಸಿ, ಮಹಾಶಿವರಾತ್ರಿಯಂದು ಲಾಡ್ಲೆ ಮಶಾಕ್ ದರ್ಗಾ ಆವರಣದಲ್ಲಿರುವ ರಾಘವಚೈತನ್ಯರ ಶಿವಲಿಂಗಕ್ಕೆ ಸುಮಾರು 100 ಜನ ಹಿಂದೂಗಳಿಗೆ ಪೂಜೆ ಸಲ್ಲಿಸಲು ಅನುಮತಿ ನೀಡುವಂತೆ ಕೋರಿತ್ತು. ಸಮಿತಿಯಲ್ಲಿ ಮಾಜಿ ಶಾಸಕ ಸುಭಾಷ್ ಆರ್. ಗುತ್ತೇದಾರ್ ಅವರ ಪುತ್ರ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಹರ್ಷಾನಂದ್ ಗುತ್ತೇದಾರ್, ಸಮಿತಿ ಅಧ್ಯಕ್ಷ ನ್ಯಾಯವಾದಿ ಎಸ್.ಎ. ಪಾಟೀಲ್ ಮುಂತಾದವರು ಅರ್ಜಿ ಸಲ್ಲಿಸಿದ್ದರು.
ಅದೇ ರೀತಿ ಶ್ರೀರಾಮ್ ಸೇನೆಯ ರಾಜ್ಯಾಧ್ಯಕ್ಷ ಸಿದ್ದಲಿಂಗ ಮಹಾಸ್ವಾಮೀಜಿ ಅವರು ಸಹ ಪ್ರತ್ಯೇಕ ಅರ್ಜಿ ಸಲ್ಲಿಸಿ, ಮಹಾಶಿವರಾತ್ರಿಯಂದು ರಾಘವಚೈತನ್ಯರ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು 500 ಜನ ಹಿಂದೂಗಳಿಗೆ ಅನುಮತಿ ಕೊಡಲು ಕೋರಿದ್ದರು. ಹಿಂದೂಗಳ ಪರವಾಗಿ ನ್ಯಾಯವಾದಿ ಜಯನಂದನ್ ಸ್ವಾಮಿ ಅವರು ವಾದ ಮಂಡಿಸಿದರು. ಉಚ್ಛ ನ್ಯಾಯಾಲಯವು ಮಹಾಶಿವರಾತ್ರಿಯಂದು ಮಧ್ಯಾಹ್ನದ ವೇಳೆಗೆ ಆಂದೋಲಾದ ಸಿದ್ಧಲಿಂಗ್ ಮಹಾಸ್ವಾಮೀಜಿ ಸೇರಿ ಹದಿನೈದು ಜನ ಹಿಂದೂಗಳಿಗೆ ಪೂಜೆ ಸಲ್ಲಿಸಲು ಹಾಗೂ ಅಂದು ಶುಕ್ರವಾರ ಇರುವುದರಿಂದ ಮುಸ್ಲಿಂ ಸಮುದಾಯದ ಹದಿನೈದು ಜನರಿಗೆ ಅಂದು ಬೆಳಿಗ್ಗೆ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಿದೆ.
ಈಗಾಗಲೇ ರಾಘವಚೈತನ್ಯರ ರಥಯಾತ್ರೆಯು ಆಳಂದ್ ತಾಲ್ಲೂಕಿನಲ್ಲಿ ಸಂಚರಿಸಿದ್ದು, ಈಗ ಪೂಜೆಯ ಅಂತಿಮ ಘಟಕ್ಕೆ ಬಂದು ನಿಂತಿದೆ. ರಾಘವಚೈತನ್ಯರ ಕೃಪೆಯಿಂದ ಯಾವುದೇ ರೀತಿಯಲ್ಲಿ ಗಲಭೆ, ಅಹಿತಕರ ಘಟನೆಗಳು ಸಂಭವಿಸುವುದಿಲ್ಲ ಎಂದು ಬಿಜೆಪಿಯ ಮುಖಂಡ ಹಾಗೂ ಪ್ರಖರ ಹಿಂದೂತ್ವವಾದಿ ಹರ್ಷಾನಂದ್ ಗುತ್ತೇದಾರ್ ಅವರು ಹೇಳಿದ್ದಾರೆ.
ಕಳೆದ ಬಾರಿ ಪೂಜೆಯ ನಂತರ ಹಲವರು ಹಿಂದೂ ಸಮುದಾಯದವರ ಮೇಲೆ ಕಲ್ಲು ತೂರಾಟ ಮಾಡಿದರೂ ಸಹ ಯಾರೊಬ್ಬರಿಗೂ ಸಹ ಗಾಯಗಳು ಆಗಲಿಲ್ಲ. ಅದೇ ರೀತಿ ಮುಸ್ಲಿಂ ಸಮುದಾಯದವರಿಗೂ ಸಹ ಯಾರಿಗೂ ಯಾವುದೇ ರೀತಿಯಲ್ಲಿ ಅಹಿತಕರ ಘಟನೆ ಆಗಿಲ್ಲ. ರಾಘವಚೈತನ್ಯರ ಸ್ಥಳವು ಶಾಂತಿ, ಸೌಹಾರ್ದತೆಗೆ ಸಾಕ್ಷಿಯಾಗಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.