ಬೆಂಗಳೂರಿನಲ್ಲಿ ಬಾಂಬ್ ಸ್ಫೋಟ ಬಾಂಬರ್ ಸುಳಿವು ನೀಡಿದವರಿಗೆ 10 ಲಕ್ಷ ಬಹುಮಾನ
ಬೆಂಗಳೂರು,ಮಾ.6- ವೈಟ್‌ ಫೀಲ್ಡ್‌ನ ಬ್ರೂಕ್‌ ಫೀಲ್ಡ್‌ನಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಸ್ಫೋಟ ನಡೆಸಿದ ಟೋಪಿವಾಲಾ ಬಾಂಬರ್‌ನ ಸುಳಿವು ನೀಡಿದವರಿಗೆ ರಾಷ್ಟ್ರೀಯ ತನಿಖಾ ದಳ (ಎನ್ ಐಎ)ದ ಅಧಿಕಾರಿಗಳು 10 ಲಕ್ಷ ರೂ. ಬಹುಮಾನ ಘೋಷಣೆ ಮಾಡಿದ್ದಾರೆ.
ಘಟನೆ ನಡೆದು ಆರು ದಿನಗಳೇ ಕಳೆದರೂ ಇನ್ನೂ ಪ್ರಮುಖ ಆರೋಪಿ ಬಾಂಬರ್‌ ಮತ್ತು ಆತನಿಗೆ ಸಹಾಯ ಮಾಡಿದ ಯಾರ ಸುಳಿವೂ ಸಿಗದ ಹಿನ್ನೆಲೆಯಲ್ಲಿ ಎನ್‌ಐಎ ಅಧಿಕಾರಿಗಳು‌ ಪ್ರಕಟಣೆಯನ್ನು ಹೊರಡಿಸಿ ಸಾರ್ವಜನಿಕರ ನೆರವು ಕೋರಿ ಬಾಂಬ್‌ ಸ್ಫೋಟದ ದುಷ್ಕರ್ಮಿಗಳ ಸುಳಿದು ನೀಡಿದವರಿಗೆ 10 ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.
ಆರೋಪಿ ಸುಳಿವು ನೀಡುವವರು ಎನ್ಐಎ ನ ಈ ನಂಬರ್ ಗೆ ಸಂಪರ್ಕಿಸಬಹುದು ಎಂದು 080289510999-89042441100 ನಂಬರನ್ನು ನೀಡಿದೆ. ಮಾಹಿತಿ ನೀಡಿದ ಬಾತ್ಮೀದಾರರ ಮಾಹಿತಿ ಗೌಪ್ಯತೆ ಕಾಪಾಡಲಾಗುವುದು ಎಂದು ಭರವಸೆ ನೀಡಿದ್ದಾರೆ.
ಕಳೆದ ಮಾ.1ರಂದು ಮಧ್ಯಾಹ್ನ 12.55ಕ್ಕೆ ರಾಮೇಶ್ವರಂ ಕೆಫೆಯಲ್ಲಿ ಕೇವಲ 10 ಸೆಕೆಂಡ್‌ಗಳ ಅಂತರದಲ್ಲಿ ಎರಡು ಬಾಂಬ್‌ ಗಳು ಸ್ಫೋಟಿಸಿದ್ದವು. ಕಸದ ಡಬ್ಬಿಯ ಸಮೀಪ ಇಟ್ಟಿದ್ದ ಬಾಂಬ್‌ಗಳು ಸ್ಫೋಟಿಸಿ 9 ಮಂದಿ ಗಾಯಗೊಂಡಿದ್ದರು.
ಆರಂಭದಲ್ಲಿ ಇದೊಂದು ಸಾಮಾನ್ಯ ಸ್ಫೋಟ ಎಂಬ ಎಣಿಕೆ ಇತ್ತಾದರೂ ಮುಂದೆ ಭಯೋತ್ಪಾದಕ ಕೃತ್ಯವೆನ್ನುವುದು ಸ್ಪಷ್ಟವಾಯಿತು. ಇದೀಗ ಈ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಲಾಗಿದೆ. ಆದರೂ ಈ ಪ್ರಕರಣದ ರೂವಾರಿ ಟೋಪಿವಾಲಾನ ಜಾಡನ್ನು ಪತ್ತೆ ಹಚ್ಚಲು ಸಾಧ್ಯವಾಗಲಿಲ್ಲ.
ಮಾರ್ಚ್‌ 1ರಂದು ಹೋಟೆಲ್‌ಗೆ ಬಂದು ಬಾಂಬ್‌ ಇಟ್ಟು ಹೋದ ದುಷ್ಕರ್ಮಿ ಆರು ದಿನವಾದರೂ ಪತ್ತೆಯಾಗಿಲ್ಲ. ಅಂದು ಬೆಳಗ್ಗೆ 11.34ಕ್ಕೆ ಟೋಪಿ ಹಾಕಿಕೊಂಡು ಹೋಟೆಲ್‌ ಪ್ರವೇಶಿಸಿದ್ದ ದುಷ್ಕರ್ಮಿ ರವಾ ಇಡ್ಲಿ ಖರೀದಿಸಿ ಅದನ್ನು ತಿಂದು ಬಾಂಬ್‌ನ್ನು ಇಟ್ಟು 11.43ಕ್ಕೆ ಹೋಟೆಲ್‌ನಿಂದ ಹೊರಬಿದ್ದಿದ್ದ. ಬಳಿಕ ಆತ ಎಲ್ಲಿ ಹೋಗಿದ್ದಾನೆ ಎಂಬ ಬಗ್ಗೆ ಎಲ್ಲೂ ದಾಖಲೆಗಳು ಇದುವರೆಗೆ ಸಿಕ್ಕಿಲ್ಲ ಎನ್ನಲಾಗಿದೆ.