ಉಚಿತ ಕೊಳವೆ ಬಾವಿ ಕೊರೆಸಿ ನೀರು ಪೂರೈಕೆ
ಬೆಂಗಳೂರು, ಮಾ. ೬- ವಿಜಯನಗರ ವಿಧಾನಸಭಾ ಕ್ಷೇತ್ರದ ದೀಪಾಂಜಲಿ ನಗರ ವಾರ್ಡ್ ವ್ಯಾಪ್ತಿಯ ಅವಲಳ್ಳಿಯಲ್ಲಿ ಮಾಜಿ ಮಹಾನಗರ ಪಾಲಿಕೆ ಉಪ ಮಹಾಪೌರರು, ಕಾಂಗ್ರೆಸ್ ಮುಖಂಡರಾದ ಎಂ ಲಕ್ಷ್ಮೀನಾರಾಯಣ ಹಾಗೂ ಅವರ ಮಗಳ ಎಲ್.ಪವಿತ್ರ ಜನುಮದಿನದ ಒಂದೇ ದಿನ ಇದ್ದುದರಿಂದ ಬರಗಾಲದ ನಿಮಿತ್ತ ಅದ್ದೂರಿಯಾಗಿ ಆಚರಿಸಿಕೊಳ್ಳದೆ ಸಾರ್ವಜನಿಕರಿಗೆ ಅನುಕೂಲವಾಗಲೆಂದು ಉಚಿತವಾಗಿ ಕೊಳವೆ ಬಾವಿಯನ್ನು ಕೊರೆಸುವ ಮೂಲಕ ಕುಡಿಯುವ ನೀರಿನ ವ್ಯವಸ್ಥೆಗೆ ಅನುಕೂಲ ಮಾಡಿಕೊಡಲಾಯಿತು.
ನಂತರ ಮಾತನಾಡಿದ ಲಕ್ಷ್ಮೀನಾರಾಯಣ್ ರವರು ಹಿತೈಷಿಗಳು, ಮುಖಂಡರು, ಅಭಿಮಾನಿಗಳೆಲ್ಲ ಸೇರಿ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂಬ ಉದ್ದೇಶದಿಂದ ಕೊಳವೆ ಬಾವಿಯನ್ನು ಕೊರೆಸಿದ್ದು ನೀರು ಕೂಡ ಸಾಕಷ್ಟು ಬಂದಿದ್ದು ಅದರಿಂದ ಅವಲಳ್ಳಿಯ ಸುತ್ತಮುತ್ತಲ ೫೦೦ ಮನೆಗಳಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು.
ಬರಗಾಲದಲ್ಲಿ ಎಲ್ಲೆಡೆ ನೀರಿನ ಸಮಸ್ಯೆ ತಾಂಡವಾಡುತ್ತಿರುವುದರಿಂದ ಸಾರ್ವಜನಿಕರಿಗೆ ನೀರು ಪೂರೈಸುವುದು ಒಳ್ಳೆಯ ಕೆಲಸವಾಗಿದ್ದು ಮುಂದಿನ ದಿನಗಳಲ್ಲಿ ಭಗವಂತ ಮತ್ತಷ್ಟು ಶಕ್ತಿ ನೀಡಿದರೆ ಸಾರ್ವಜನಿಕವಾಗಿ ಇನ್ನಷ್ಟು ಸೇವೆ ಮಾಡಲು ಮುಂದಾಗುತ್ತೇವೆ ಎಂದರು.ಮುಖಂಡರಾದ ಗಿರೀಶ್, ರಮೇಶ್, ಹೇಮಂತ್, ಹನುಮಂತಪ್ಪ, ಚಂದ್ರಪ್ಪ ಅವಲಳ್ಳಿ ಗ್ರಾಮಸ್ಥರು ಉಪಸ್ಥಿತರಿದ್ದರು.
