ಉಕ್ರೇನ್‌ನ ೩೮ ಡ್ರೋನ್ ಧ್ವಂಸ
ಮಾಸ್ಕೋ, ಮಾ.೪- ೨೦೧೪ರಲ್ಲಿ ಉಕ್ರೇನ್‌ನಿಂದ ರಷ್ಯಾ ವಶಪಡಿಸಿಕೊಂಡಿದ್ದ ಕ್ರೈಮಿಯಾದಲ್ಲಿ ಭೀಕರ ಕಾಳಗ ನಡೆಯುತ್ತಿದೆ. ಆಗ್ನೇಯ ನಗರವಾದ ಫಿಯೋಡೋಸಿಯಾದಲ್ಲಿನ ಇಂಧನ ಡಿಪೋ ಬಳಿ ಸ್ಫೋಟ ನಡೆದ ವಿಡಿಯೋಗಳು ಸದ್ಯ ಹರಿದಾಡುತ್ತಿದೆ. ಈ ನಡುವೆ ಉಕ್ರೇನ್‌ನ ಸುಮಾರು ೩೮ ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ ಎಂದು ರಷ್ಯಾದ ಅಧಿಕಾರಿಗಳು ತಿಳಿಸಿದ್ದಾರೆ.
ಈ ಪ್ರದೇಶದಲ್ಲಿ ಭೀಕರ ಕಾಳಗ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕ್ರೈಮಿಯಾದಿಂದ ರಷ್ಯಾಗೆ ಸಂಪರ್ಕ ಕಲ್ಪಿಸುವ ಕೆರ್ಚ್ ಸೇತುವೆಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಒಂದೆಡೆ ಹಲವು ರೀತಿಯ ಶಸ್ತ್ರಾಸ್ತ್ರಗಳನ್ನು ಪೂರೈಸುವಂತೆ ಹಲವು ಮಿತ್ರರಾಷ್ಟ್ರಗಳಿಗೆ ಉಕ್ರೇನ್ ಮನವಿ ಸಲ್ಲಿಸುತ್ತಿರುವ ನಡುವೆ ಈ ಬೆಳವಣಿಗೆ ನಡೆದಿದೆ. ಪಾಶ್ಚಿಮಾತ್ಯ ನಿರ್ಮಿತ ಶಸ್ತ್ರಾಸ್ತ್ರಗಳೊಂದಿಗೆ ಉಕ್ರೇನ್ ತನ್ನ ಪಡೆಗಳನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿರುವಾಗ ರಷ್ಯಾದ ಪಡೆಗಳು ಇತ್ತೀಚೆಗೆ ಉಕ್ರೇನ್‌ನಲ್ಲಿ ಹೆಚ್ಚಿನ ಮುನ್ನಡೆ ಸಾಧಿಸಿದೆ ಎನ್ನಲಾಗಿದೆ. ಪ್ರಮುಖ ಪೂರ್ವ ಪಟ್ಟಣವಾದ ಅವ್ದಿವ್ಕಾವನ್ನು ಮಾಸ್ಕೋ ಕಳೆದ ತಿಂಗಳು ನಿಯಂತ್ರಣಕ್ಕೆ ತೆಗೆದುಕೊಂಡಿದ್ದು, ಇದಕ್ಕೆ ಸಾಕ್ಷಿಯಾಗಿದೆ. ಆದರೆ ಅತ್ತ ಬ್ರಿಟನ್ ಮಿಲಿಟರಿ ಗುಪ್ತಚರ ಪ್ರಕಾರ, ಅವ್ದಿವ್ಕಾದ ನಡೆಯು ರಷ್ಯಾಗೆ ಹೆಚ್ಚಿನ ನಷ್ಟ ತರಿಸಿದೆ ಎನ್ನಲಾಗಿದೆ. ಫೆಬ್ರವರಿ ೨೪, ೨೦೨೨ ರಂದು ಪೂರ್ಣ ಪ್ರಮಾಣದ ಆಕ್ರಮಣ ಪ್ರಾರಂಭದಿಂದಲೂ ಕಳೆದ ಫೆಬ್ರವರಿ ರಷ್ಯನ್ ಪಡೆಗಳಿಗೆ ಹೆಚ್ಚಿನ ಮಾರಕವಾಗಿದೆ ಎಂದು ಅದು ತಿಳಿಸಿದೆ. ಈ ಅವಧಿಯಲ್ಲಿ ರಷ್ಯಾ ದಿನಕ್ಕೆ ೯೮೩ ನಾಗರಿಕರನ್ನು ಕಳಕೊಂಡಿದ್ದು, ಹಲವರು ಗಾಯಗೊಂಡಿದ್ದಾರೆ ಎನ್ನಲಾಗಿದೆ. ಇನ್ನು ಶನಿವಾರ ಉಕ್ರೇನ್ ನ ದಕ್ಷಿಣ ಬಂದರು ನಗರ ಒಡೆಸಾದ ಅಪಾರ್ಟ್ಮೆಂಟ್ ಮೇಲೆ ರಷ್ಯಾ ನಡೆಸಿದ ಡ್ರೋನ್ ದಾಳಿಯಲ್ಲಿ ೪ ತಿಂಗಳ ಶಿಶು ಮತ್ತು ಎರಡು ವರ್ಷದ ಮಗು ಸೇರಿದಂತೆ ೮ ಮಂದಿ ಮೃತಪಟ್ಟಿದ್ದು ೩ ವರ್ಷದ ಮಗುವಿನ ಸಹಿತ ೯ ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ. ಇರಾನ್ ನಿರ್ಮಿತ ಶಾಹಿದ್ ಡ್ರೋನ್ ಬಳಸಿ ರಷ್ಯಾ ನಡೆಸಿದ ದಾಳಿಯಲ್ಲಿ ಒಂದು ಅಪಾರ್ಟ್ಮೆಂಟ್ ಬ್ಲಾಕ್ ನ ೧೮ ಅಪಾರ್ಟ್ಮೆಂಟ್‌ಗಳು ನಾಶಗೊಂಡಿವೆ. ರಕ್ಷಣಾ ತಂಡದವರು ಕಟ್ಟಡದ ಅವಶೇಷಗಳಡಿಯಿಂದ ೮ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಮಗುವಿನ ಸಹಿತ ೫ ಮಂದಿಯನ್ನು ರಕ್ಷಿಸಲಾಗಿದೆ. ಅವಶೇಷಗಳಡಿ ಇನ್ನೂ ಹಲವರು ಸಿಲುಕಿರುವ ಸಾಧ್ಯತೆಯಿದ್ದು ಸಾವು-ನೋವಿನ ಪ್ರಮಾಣ ಹೆಚ್ಚುವ ಸಾಧ್ಯತೆಯಿದೆ ಎಂದು ಒಡೆಸಾ ಪ್ರಾಂತದ ಗವರ್ನರ್ ಒಲೆಹ್ ಕಿಪರ್ ಹೇಳಿದ್ದಾರೆ.