ಮಾ.೬ರಿಂದ ದೆಹಲಿ ಚಲೋ ಪುನಾರಂಭ
ಬಳ್ಳೋ/ನವದೆಹಲಿ,ಮಾ.೪- ಕನಿಷ್ಠ ಬೆಂಬಲ ಬೆಲೆಗೆ ಕಾನೂನಿನ ಮಾನ್ಯತೆ ನೀಡುವುದು, ಡಾ. ಸ್ವಾಮಿನಾಥನ್ ವರದಿ ಜಾರಿ ಮಾಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರೈತರು ಕೈಗೊಂಡಿದ್ದ “ದೆಹಲಿ ಚಲೋ” ರೈತನ ಸಾವಿನ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿತ್ತು ಇದೀಗ ಮಾರ್ಚ್.೬ ರಿಂದ ಮತ್ತೆ ಪುನರ್ ಆರಂಭವಾಗಲಿದೆ.
” ದೆಹಲಿ ಚಲೋ’ ೨.೦ ಪ್ರತಿಭಟನೆಯ ನೇತೃತ್ವ ವಹಿಸಿರುವ ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ದೇಶಾದ್ಯಂತ ರೈತರು ಟ್ರ್ಯಾಕ್ಟರ್‌ಗಳನ್ನು ಹೊರತುಪಡಿಸಿ ಯಾವುದೇ ಸಾರಿಗೆ ವಿಧಾನದ ಮೂಲಕ ಮಾರ್ಚ್ ೬ ರಂದು ದೆಹಲಿಗೆ ಬರುವಂತೆ ಕರೆ ನೀಡಿದೆ.
ಜೊತೆಗೆ ಮಾರ್ಚ್ ೧೦ ರಂದು ಮಧ್ಯಾಹ್ನ ೧೨ ರಿಂದ ಸಂಜೆ ೪ ರವರೆಗೆ ನಾಲ್ಕು ಗಂಟೆಗಳ ಕಾಲ ದೇಶಾದ್ಯಂತ ರೈಲು ಸಂಚಾರ ತಡೆಯುವಂತೆ ಕರೆ ಕೊಟ್ಟಿದೆ. ಈ ನಡುವೆ ಪಂಜಾಬ್‌ನ ರೈತರು ಪಂಜಾಬ್-ಹರಿಯಾಣ ಗಡಿಯಲ್ಲಿ ಬಿಡಾರ ಹೂಡುವುದನ್ನು ಮುಂದುವರಿಸಲಿದ್ದಾರೆ ಎಂದು ರೈತ ನಾಯಕರು ತಿಳಿಸಿದ್ದಾರೆ
ಫೆಬ್ರವರಿ ೨೧ ರಂದು ಹರಿಯಾಣ ಪೊಲೀಸರೊಂದಿಗೆ ನಡೆದ ಘರ್ಷಣೆಯಲ್ಲಿ ಖಾನೌರಿ ಗಡಿಯಲ್ಲಿ ರೈತ ಶುಭಕರನ್ ಸಿಂಗ್ ಸಾವಿನ ಹಿನ್ನೆಲೆಯಲ್ಲಿ ಹೋರಾಟ ಸ್ಥಗಿತಗೊಂಡಿತ್ತು. ರೈತ ನಾಯಕರು ಸಭೆ ಸೇರಿ ಬುಧವಾರದಿಂದ ಹೋರಾಟ ಮುಂದುವರಿಸಲು ನಿರ್ಧಾರ ಕೈಗೊಂಡಿದ್ದಾರೆ.
ಕೆಎಂಎಂ ಸಂಚಾಲಕ ಸರ್ವನ್ ಸಿಂಗ್ ಪಂಧರ್ ಮಾತನಾಡಿ, ಪಂಜಾಬ್-ಹರಿಯಾಣ ಗಡಿ ತಾಣಗಳಲ್ಲಿ (ಖನೌರಿ ಮತ್ತು ಶಂಭು) ಪ್ರತಿಭಟನೆಗಳು ಮುಂದುವರಿಯಲಿವೆ, ಆದರೆ ಎಸ್‌ಕೆಎಂ (ಎನ್‌ಪಿ) ಮತ್ತು ಕೆಎಂಎಂ ಭಾಗವಾಗಿರುವ ಸಂಘಟನೆಗಳು ಮಾರ್ಚ್ ೬ ರಂದು ಟ್ರ್ಯಾಕ್ಟರ್ ಹೊರತುಪಡಿಸಿ ಇತರ ವಾಹನಗಳಲ್ಲಿ ದೆಹಲಿಯ ಜಂತರ್ ಮಂತರ್ ತಲುಪಲಿವೆ ಎಂದು ಹೇಳಿದ್ದಾರೆ
