ದೇಶದ್ರೋಹಿಗಳ ಬಂಧಿಸುವಲ್ಲಿ ವಿಫಲ
ಕೆಂಗೇರಿ,ಮಾ.೪:ಕರ್ನಾಟಕದ ಪ್ರಜಾಪ್ರಭುತ್ವ ವ್ಯವಸ್ಥೆಯ ಪವಿತ್ರ ದೇಗುಲ ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ ದೇಶದ್ರೋಹಿಗಳನ್ನು ಬಂಧಿಸಲಾಗದ ಅಸಹಾಯಕ ಕಾಂಗ್ರೆಸ್ ಸರ್ಕಾರವಿದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಕಾಂಗ್ರೆಸ್ ಸರ್ಕಾರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಬಿಬಿಎಂಪಿ ಲಕ್ಷ್ಮೀದೇವಿ ನಗರ,ಎಚ್. ಎಮ್. ಟಿ. ವಾರ್ಡ್ ಹಾಗೂ ಲಗ್ಗೆರೆ ವಾರ್ಡ್ ನಾಗರಿಕರ ಕುಂದು ಕೊರತೆಯ ನಿವಾರಣೆ ಸಲುವಾಗಿ ನಂದಿನಿ ಬಡಾವಣೆ ಎರಡನೇ ಬ್ಲಾಕ್ ನಲ್ಲಿ ನೂತನವಾಗಿ ನಿರ್ಮಾಣ ಮಾಡಲಾಗಿರುವ ಶಾಸಕ ಕಚೇರಿ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವ ಪರಿಣಾಮದಿಂದಾಗಿ ತೀವ್ರ ಬರಗಾಲ ಎದುರಾಗಿದೆ ಎಂದು ವ್ಯಂಗ್ಯವಾಡಿದರು. ಕ್ಷೇತ್ರ ವ್ಯಾಪ್ತಿಯ ನಾಗರೀಕರಿಗೆ ಸಮರ್ಪಕ ಕುಡಿಯುವ ನೀರು ಸರಬರಾಜು ಮಾಡುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು. ಸದೃಢ ಭಾರತ ನಿರ್ಮಾಣ ಮಾಡಲು ಮತ್ತೊಮ್ಮೆ ನರೇಂದ್ರ ಮೋದಿ ಯವರು ಪ್ರಧಾನಮಂತ್ರಿಯಾಗಬೇಕಾಗಿದೆ ಎಂದರು.ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ಶಾಸಕ ಮುನಿರತ್ನ ಮಾತನಾಡಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಆಡಳಿತವನ್ನು ಮೆಚ್ಚಿ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರು ರಾಷ್ಟ್ರದ ಹಿತಕ್ಕಾಗಿ ಬಿಜೆಪಿ ಪಕ್ಷ ದೊಂದಿಗೆ ಮಿತ್ರ ಪಕ್ಷವಾಗಿ ಕಾರ್ಯನಿರ್ವಹಿಸಲು ಸಜ್ಜಾಗಿದ್ದಾರೆ,ಇಂತಹ ಸಂದರ್ಭದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಕಾರ್ಯಕರ್ತರು ಕಚೇರಿಗೆ ಆಗಮಿಸಿ ನಾಗರೀಕರ ಕುಂದು ಕೊರತೆಗಳನ್ನು ನಿವಾರಿಸಲು ಪ್ರಾಮಾಣಿಕ ಪ್ರಯತ್ನ ನಡೆಸಬೇಕೆಂದು ಕರೆ ನೀಡಿದರು.ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರ ಶಾಸಕ ಸುರೇಶ್ ಗೌಡ, ಆರ್. ಆರ್. ನಗರ ವಿಧಾನಸಭಾ ಕ್ಷೇತ್ರ ಭಾಜಪ ಪ್ರಧಾನ ಕಾರ್ಯದರ್ಶಿ ವಸಂತ್ ಕುಮಾರ್ ಗೌಡ, ಮುಖಂಡರಾದ ಕೇಶವ ಸುರೇಶ್ ಮತ್ತಿತರರು ಉಪಸ್ಥಿತರಿದ್ದರು. ಇದೇ ವೇಳೆ ಅಲ್ಪಸಂಖ್ಯಾತ ಸಮುದಾಯದ ನಿಗಮದಿಂದ ೨೫ ಜನರಿಗೆ ಮಂಜೂರಾದ ಸಾಲ ಸೌಲಭ್ಯದ ಪತ್ರ ವಿತರಿಸಿದರು. ಹಲವಾರು ಮುಖಂಡರು ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿ ಪಕ್ಷವನ್ನು ಸೇರ್ಪಡೆಯಾದರು.ಚಿತ್ರ: ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ನಾಗರಿಕರ ಕುಂದು ಕೊರತೆಯ ನಿವಾರಣೆ ಸಲುವಾಗಿ ನಂದಿನಿ ಬಡಾವಣೆ ಎರಡನೇ ಬ್ಲಾಕ್ ನಲ್ಲಿ ನೂತನವಾಗಿ ನಿರ್ಮಾಣ ಮಾಡಲಾಗಿರುವ ಶಾಸಕರ ಕಚೇರಿಯನ್ನು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಪೂಜೆ ಸಲ್ಲಿಸುವ ಮೂಲಕ ಉದ್ಘಾಟನೆ ನೆರವೇರಿಸಿದರು. ಶಾಸಕರಾದ ಮುನಿರತ್ನ ಹಾಗೂ ಹಲವಾರು ಮುಖಂಡರು ಉಪಸ್ಥಿತರಿದ್ದರು.