೨೦೦ ಸ್ವತ್ತುಗಳಿಗೆ ಎ ಖಾತಾದಿಂದ ಪಾಲಿಕೆಗೆ ೫ಕೋಟಿ ನಷ್ಟ
ಬೆಂಗಳೂರು, ಮಾ.೪-ಇಲ್ಲಿನ ಹೆಮ್ಮಿಗೆಪುರ ವಾರ್ಡ್ ವ್ಯಾಪ್ತಿಯಲ್ಲಿ ಒಟ್ಟು ೨೦೦ ಸ್ವತ್ತುಗಳ ಖಾತಾಗಳಿಗೆ ಸಂಬಂಧಿಸಿದಂತೆ ನಕಲಿ ‘ಎ’ ಖಾತಾಗಳನ್ನು ಮಾಡಿಕೊಡುವ ಮೂಲಕ ಐದು ಕೋಟಿ ರೂಪಾಯಿಗಳಿಗೂ ಹೆಚ್ಚು ಮೊತ್ತ ಪಾಲಿಕೆಗೆ ನಷ್ಟ ಉಂಟು ಮಾಡಿರುವ ಆರೋಪದಡಿ ತಪ್ಪಿತಸ್ಥ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಆಗ್ರಹಿಸಿದ್ದಾರೆ.ನಗರದಲ್ಲಿಂದು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ದಾಖಲೆ ಬಿಡುಗಡೆಗೊಳಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇವಲ ಒಂದೇ ತಿಂಗಳ ಅವಧಿಯಲ್ಲಿ ನೂರಾರು ಸ್ವತ್ತುಗಳಿಗೆ ನಕಲಿ ಖಾತೆಗಳನ್ನು ಮಾಡುವ ಮೂಲಕ ಐದು ಕೋಟಿ ರೂಪಾಯಿಗಳಷ್ಟು ಹಣವನ್ನು ಪಾಲಿಕೆಗೆ ವಂಚಿಸಿರುವ ಅಧಿಕಾರಿಗಳು ಮತ್ತು ಸಂಸ್ಥೆಯೊಂದರ ವಿರುದ್ಧ ಕಾನೂನು ರೀತ್ಯಾ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಮನವಿ ಮಾಡಿದರು.ಯಶವಂತಪುರ ವಿಧಾನಸಭಾ ಕ್ಷೇತ್ರದ ಕೆಂಗೇರಿ ಉಪ ವಿಭಾಗದ ವ್ಯಾಪ್ತಿಯಲ್ಲಿ ಒಟ್ಟು ೨೦೦ ಸ್ವತ್ತುಗಳ ಖಾತಾಗಳಿಗೆ ಸಂಬಂಧಿಸಿದಂತೆ ನಕಲಿ ‘ಎ’ ಖಾತಾಗಳನ್ನು ಮಾಡಿಕೊಡುವ ಮೂಲಕ ಸುಮಾರು ಐದು ಕೋಟಿ ರೂಪಾಯಿಗಳಿಗೂ ಹೆಚ್ಚು ಮೊತ್ತವನ್ನು ಪಾಲಿಕೆಗೆ ನಷ್ಟ ಉಂಟು ಮಾಡಿರುವ ಮತ್ತು ಅಪಾರ ಪ್ರಮಾಣದ ಭ್ರಷ್ಟಾಚಾರ ನಡೆಸಿರುವ ಕಾನೂನು ಬಾಹಿರ ಕಾರ್ಯವೊಂದು ನಡೆದಿದೆ.ಈ ಪ್ರಕರಣದಲ್ಲಿ ಕೆಂಗೇರಿ ವಿಭಾಗದ ಕಂದಾಯ ಅಧಿಕಾರಿ ಡಾ.ಬಸವರಾಜ ಮಗ್ಗಿ, ಕೆಂಗೇರಿ ಉಪ ವಿಭಾಗದ ಸಹಾಯಕ ಕಂದಾಯ ಅಧಿಕಾರಿ ದೇವರಾಜು, ರಾಜರಾಜೇಶ್ವರಿನಗರ ವಲಯದ ಉಪ ಆಯುಕ್ತ ಅಬ್ದುಲ್ ರಬ್, ರಾಜರಾಜೇಶ್ವರಿನಗರ ವಲಯದ ಜಂಟಿ ಆಯುಕ್ತ ಅಜಯ್ ವಿ ಮತ್ತು ಮಿರು ಇನ್ಫೋ ಸೆಲ್ಯೂಷನ್ ಎಂಬ ಸಂಸ್ಥೆಯ ಮುಖ್ಯಸ್ಥರು ಭಾಗಿಯಾಗಿದ್ದಾರೆ ಎಂದು ದೂರಿದರು.ಹತ್ತಾರು ನಿವೇಶನಗಳನ್ನೊಳಗೊಂಡ ಖಾಸಗಿ ಬಡಾವಣೆಯ ಬಿಡಿ ನಿವೇಶನಗಳ ಖಾತಾ ಮಾಡಲು ಕಾನೂನು ರೀತ್ಯಾ ಅವಕಾಶವಿರುವುದಿಲ್ಲ.ಜತೆಗೆ ಸ್ವತ್ತಿಗೆ ಯಾವುದೇ ಮಾಲೀಕನೂ ಸಹ ಖಾತಾ ಮಾಡಿಕೊಡುವಂತೆ ಅರ್ಜಿಗಳನ್ನೇ ಸಲ್ಲಿಸಿರುವುದಿಲ್ಲ. ವಾರ್ಡ್ ನಂಬರ್ ೧೯೮ ರ ‘ಎ’ ವಹಿ ಪುಸ್ತಕದಲ್ಲಿ ವಿಷಯ ನಿರ್ವಾಹಕ ಮತ್ತು ವ್ಯವಸ್ಥಾಪಕರು ತಮ್ಮ ಸಹಿಗಳನ್ನೇ ಹಾಕಿರುವುದಿಲ್ಲ.ಆದರೂ, ಸಂಚು ರೂಪಿಸಿ ಖಾತೆ ಮಾಡಿಕೊಡುವ ಮೂಲಕ ವಂಚನೆ ಮಾಡಲಾಗಿದೆ ಎಂದು ಆರೋಪಿಸಿದರು.ಈ ರೀತಿ ಕಾನೂನಿನ ಎಲ್ಲಾ ನಿಯಮಗಳನ್ನೂ ಗಾಳಿಗೆ ತೂರಿ ೨೦೦ ಕ್ಕೂ ಹೆಚ್ಚು ಸ್ವತ್ತುಗಳಿಗೆ ಕೇವಲ ೨೦೨೪ ರ ಫೆಬ್ರವರಿ ತಿಂಗಳ ಒಂದರಲ್ಲೇ ೨೦೦ ಕ್ಕೂ ಹೆಚ್ಚು ‘ಎ’ ಖಾತಾಗಳನ್ನು ಮಾಡಿರುವ ಮತ್ತು ಆ ಮೂಲಕ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಐದಾರು ಕೋಟಿ ನಷ್ಟ ಉಂಟು ಮಾಡಿ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆಸಿದ್ದಾರೆ.ಈ ಸಂಬಂಧಿಸಿದಂತೆ ವಿರುದ್ಧ ಪಾಲಿಕೆಯ ವತಿಯಿಂದಲೇ ಪೋಲೀಸ್ ಠಾಣೆಯಲ್ಲಿ ಪ್ರಕರಣಗಳನ್ನು ದಾಖಲಿಸಬೇಕೆಂದು ಮತ್ತು ಇವರ ವಿರುದ್ಧ ಕೂಡಲೇ ಕಾನೂನು ರೀತ್ಯಾ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಹಾಗೂ ಇವರುಗಳು ಮಾಡಿರುವ ಎಲ್ಲಾ ೨೦೦ ಕ್ಕೂ ಹೆಚ್ಚು ಸ್ವತ್ತುಗಳ ನಕಲಿ ‘ಎ’ ಖಾತಾಗಳನ್ನು ರದ್ದುಪಡಿಸುವ ಸಂಬಂಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ರಮೇಶ್ ಒತ್ತಾಯಿಸಿದರು.