ಆರ್‌ಎಸ್‌ಎಸ್ ನ ರುದ್ರೇಶ್‌ ಕೊಲೆ ಆಫ್ರಿಕಾದಲ್ಲಿ ಆರೋಪಿ ಮೊಹಮ್ಮದ್‌ ಗೌಸ್‌ ಸೆರೆ
ಬೆಂಗಳೂರು,ಮಾ.2-ಕಳೆದ 2016ರಲ್ಲಿ ನಡೆದ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್‌ಎಸ್) ಕಾರ್ಯಕರ್ತ ರುದ್ರೇಶ್‌ ಕೊಲೆ ಪ್ರಕರಣವನ್ನು ಭೇದಿಸಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ ಐಎ) ಅಧಿಕಾರಿಗಳು ಪ್ರಕರಣದ ಪ್ರಮುಖ ಆರೋಪಿ,ಕುಖ್ಯಾತ ಗ್ಯಾಂಗ್‌ಸ್ಟರ್‌ ಮೊಹಮ್ಮದ್‌ ಗೌಸ್‌ ನಿಯಾಜಿಯನ್ನು ದಕ್ಷಿಣ ಆಫ್ರಿಕಾದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೊಹಮ್ಮದ್‌ ಗೌಸ್‌ ನಿಯಾಜಿ

ಪೊಲೀಸ್ ಇಲಾಖೆಗೆ ಸವಾಲಾಗಿದ್ದ ಆರ್‌ಎಸ್‌ಎಸ್ ಕಾರ್ಯಕರ್ತ ರುದ್ರೇಶ್‌ ಕೊಲೆ ಪ್ರಕರಣದಲ್ಲಿ ಎನ್‌ಐಎ ಅಧಿಕಾರಿಗಳಿಗೆ ದೊರೆತ ಮಹತ್ವದ ಯಶಸ್ಸು ಎನ್ನಲಾಗಿದೆ.
2014ರ ಮುಂಬೈ ಗಲಭೆಯ ಪ್ರಮುಖ ಆರೋಪಿಯಾಗಿರುವ ಮೊಹಮ್ಮದ್‌ ಗೌಸ್‌ ನಿಯಾಜಿಯು ರುದ್ರೇಶ್‌ ಹತ್ಯೆ ಬಳಿಕ ದೇಶ ಬಿಟ್ಟು ಪರಾರಿಯಾಗಿದ್ದ. ಆದರೆ, ಈತನ ಪತ್ತೆಗೆ ಗುಜರಾತ್‌ ಭಯೋತ್ಪಾದನೆ ನಿಗ್ರಹ ದಳವು ನಿರಂತರವಾಗಿ ಪ್ರಯತ್ನಿಸಿತ್ತು. ಎಟಿಎಸ್‌ ಸತತ ಪ್ರಯತ್ನದ ಫಲವಾಗಿ ಮೊಹಮ್ಮದ್‌ ಗೌಸ್‌ ನಿಯಾಜಿಯು ದಕ್ಷಿಣ ಆಫ್ರಿಕಾದಲ್ಲಿದ್ದಾನೆ ಎಂಬುದನ್ನು ಪತ್ತೆಹಚ್ಚಿತ್ತು.
ಮೊಹಮ್ಮದ್‌ ಗೌಸ್‌ ನಿಯಾಜಿಯನ್ನು ಪತ್ತೆಹಚ್ಚಿದ್ದ ಎಟಿಎಸ್‌, ಈ ಕುರಿತು ಎನ್‌ಐಎಗೆ ಮಹತ್ವದ ಸುಳಿವು ನೀಡಿತ್ತು. ಇದಾದ ಬಳಿಕ, ಎನ್‌ಐಎ ಅಧಿಕಾರಿಗಳು ದಕ್ಷಿಣ ಆಫ್ರಿಕಾ ಅಧಿಕಾರಿಗಳಿಗೆ ಮೊಹಮ್ಮದ್‌ ಗೌಸ್‌ ನಿಯಾಜಿಯ ಕುರಿತು ಮಾಹಿತಿ ಒದಗಿಸಿದ್ದು ದಕ್ಷಿಣ ಆಫ್ರಿಕಾ ಅಧಿಕಾರಿಗಳ ನೆರವಿನಿಂದ ಎನ್‌ಐಎ ಅಧಿಕಾರಿಗಳು ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ. ಈತನ ಕುರಿತು ಮಾಹಿತಿ ನೀಡಿದವರಿಗೆ 5 ಲಕ್ಷ ರೂ. ಬಹುಮಾನ ನೀಡಲಾಗುವುದು ಎಂದು ಪೊಲೀಸರು ಘೋಷಿಸಿದ್ದರು.
ನಿಷೇಧಿತ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾದ (ಪಿಎಫ್ ಐ) ಪ್ರಮುಖ ನಾಯಕನಾಗಿರುವ ಮೊಹಮ್ಮದ್‌ ಗೌಸ್‌ ನಿಯಾಜಿಯು ಮೋಸ್ಟ್‌ ವಾಂಟೆಡ್‌ ಗ್ಯಾಂಗ್‌ಸ್ಟರ್‌ ಕೂಡ ಎನಿಸಿದ್ದಾನೆ. ಈತನನ್ನು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಕರೆತರುವ ಪ್ರಕ್ರಿಯೆಗೆ ಎನ್‌ಐಎ ಅಧಿಕಾರಿಗಳು ಚಾಲನೆ ನೀಡಿದ್ದಾರೆ. ಮೊದಲು ಈತನನ್ನು ಮುಂಬೈಗೆ ಕರೆದುಕೊಂಡು ಬಂದು, ಹೆಚ್ಚಿನ ವಿಚಾರಣೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ. ಮೊಹಮ್ಮದ್‌ ಗೌಸ್‌ ನಿಯಾಜಿಯು ಪಿಎಫ್‌ಐನ ದಕ್ಷಿಣ ಭಾರತದ ಮುಖ್ಯಸ್ಥನಾಗಿದ್ದ ಎಂದು ಮೂಲಗಳು ತಿಳಿಸಿವೆ.
ಏನಿದು ಪ್ರಕರಣ:
ಆರ್‌ಎಸ್‌ಎಸ್‌ ಮುಖಂಡ ಆರ್.‌ ರುದ್ರೇಶ್‌ ಅವರನ್ನು 2016ರ ಅಕ್ಟೋಬರ್‌ 16ರಂದು ಬೆಂಗಳೂರಿನಲ್ಲಿ ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ಇಬ್ಬರು ದುಷ್ಕರ್ಮಿಗಳು ಶಿವಾಜಿ ನಗರದ ಕಾಮರಾಜ ರಸ್ತೆಯಲ್ಲಿ ರುದ್ರೇಶ್‌ ಮೇಲೆ ದಾಳಿ ನಡೆಸಿ, ಹತ್ಯೆಗೈದಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 2016ರಲ್ಲಿಯೇ ಪಾಶಾ, ಅಹ್ಮದ್‌, ಸಾದಿಕ್‌, ಮುಜೀಬ್‌ ಉಲ್ಲಾ, ಷರೀಫ್‌ ಸೇರಿ ಪಿಎಫ್‌ಐನ ಹಲವು ಆರೋಪಿಗಳನ್ನು ಬಂಧಿಸಿದ್ದರು. ಪ್ರಕರಣವು ರಾಜ್ಯಾದ್ಯಂತ ಸುದ್ದಿಯಾದ ಬಳಿಕ ಎನ್‌ಐಎ ತನಿಖೆಗೆ ವಹಿಸಲಾಗಿತ್ತು.