ವೇಣೂರು ವಿರಾಟ್ ವಿರಾಗಿಗೆ ಮಹಾಮಜ್ಜನ ಸಂಪನ್ನ ಭಾರತೀಯತೆಗಿದೆ ಜಿನ ಪರಂಪರೆಯ
ಬೆಳ್ತಂಗಡಿ, ಮಾ.೧: ಭಾರತೀಯತೆಯ ಸಂಸ್ಕೃತಿ ಜೀವನದ ಪ್ರತಿಯೊಂದರಲ್ಲೂ ಹಾಸುಹೊಕ್ಕಾಗಿದೆ. ಕರ್ನಾಟಕದ ಇತಿಹಾಸದಲ್ಲಿ ಜೈನರ ಸಿದ್ಧಾಂತ, ಪದ್ಧತಿ ಎಲ್ಲೆಡೆ ಹಂಚಿಹೋಗಿದೆ. ದ.ಕ.ಜಿಲ್ಲೆಯಲ್ಲಿ ನೋಡಿದಾಗ ಪ್ರಭಾವಶಾಲಿಗಳಾಗಿ ವ್ಯಾಪಾರ ಮತ್ತು ವ್ಯವಹಾರ ಕೇಂದ್ರಿತವಾಗಿಸಿ ಗುರು ಸ್ಥಾನ ಮತ್ತು ರಾಜರ ಸ್ಥಾನದಲ್ಲಿ ಸಮಾಜವನ್ನು ಬೆಳೆಸಿದ್ದಾರೆ. ಒಟ್ಟಾರೆ ಈ ನಾಡಿಗೆ ಅನೇಕ ಸತ್ ಸಂಪ್ರದಾಯಗಳು ಬರುವಲ್ಲಿ ಜೈನರು ಮತ್ತು ಅವರ ಸಂಪ್ರದಾಯದ ಐತಿಹಾಸಿಕ ಕೊಡುಗೆಯಿದೆ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಬಣ್ಣಿಸಿದರು.
ವೇಣೂರು ಫಲ್ಗುಣಿ ತಟದಲ್ಲಿ ವಿರಾಜಮಾನನಾಗಿರುವ ಭಗವಾನ್ ಬಾಹುಬಲಿ ಸ್ವಾಮಿಗೆ ಫೆ.೨೨ ರಿಂದ ಮೊದಲ್ಗೊಂಡು ಮಸ್ತಾಕಾಭೀಷೇಕದ ಕಡೇದಿನ ಭರತೇಶ ಸಭಾಭವನದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಶ್ರವಣಬೆಳಗೊಳ, ಧರ್ಮಸ್ಥಳ, ವೇಣೂರು, ಕಾರ್ಕಳ ಬಾಹುಬಲಿ ಪ್ರತಿಮೆಗಳು ಶಾಂತಿ- ಸೌಹಾರ್ದತೆಯ
ಸ್ಫೂರ್ತಿಯಾಗಿದೆ. ಶ್ರವಣಬೆಳಗೊಳದಲ್ಲಿ ೧೯೮೦-೮೨ರಲ್ಲಿ ನನ್ನ ತಂದೆಯವರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಇಂದಿರಾಗಾಂಧಿಯವರು ಪ್ರಧಾನಿಯಾಗಿ ಆಗಮಿಸಿದ್ದರು. ಅಂದಿನ ನೆನಪು ಇಂದೂ ಇದೆ. ಅದು ಸಾವಿರ ವರ್ಷಗಳ ಸಂಭ್ರಮವಾಗಿತ್ತು. ವೇಣೂರಿನಲ್ಲಿ ೨ನೇ ಅಭಿಷೇಕದಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿರುವುದು ನನ್ನ ಪುಣ್ಯದ ಕ್ಷಣ. ಇಲ್ಲಿನ ಪೂರ್ವಸಿದ್ಧತೆಯಿಂದ ಅಜಿಲರ ಶ್ರಮದಿಂದ ಉತ್ತಮವಾಗಿ ಮೂಡಿಬಂದಿದೆ ಎಂದು ಶ್ರಮಿಸಿದ ಸರ್ವರಿಗೂ ಅಭಿನಂದಿಸಿದರು.
ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಅಲ್ಪಸಂಖ್ಯಾತರಾದ ನಮಗೆ ಜೀವನದ ಆದರ್ಶದಿಂದ ಗೌರವ ಸಿಗುತ್ತದೆ. ಆ ಗೌರವವನ್ನು ಉಳಿಸಿಕೊಳ್ಳುವುದು ನಮ್ಮ ಕರ್ತವ್ಯ. ಅದಕ್ಕಾಗಿ ಶಾಂತಿ, ತಾಳ್ಮೆ ಅನುಸಕರಿಸುವ ಮೂಲಕ ಭಾವನೆಯಿಂದ ಬಾಹುಬಲಿಯಾಗಬೇಕು. ಬಾಹುಬಲಿಯ ಮೂರ್ತಿ ವಿಶಾಲಗಾತ್ರವಿರಲು ಕಾರಣವಿದೆ. ಎಷ್ಟೇ ದೊಡ್ಡ ವ್ಯಕ್ತಿಯಾಗಿದ್ದರೂ ಎಷ್ಟೇ ಅಹಂಕಾರ ಶಾಲಿಯಾದರೂ ವಿಶಾಲಗಾತ್ರದ ಬಾಹುಬಲಿಯ ಮುಂದೆ ನಾವು ಬದಲಾಗಬೇಕೆಂಬುದು. ಮೂರ್ತಿಯಲ್ಲಿ ವ್ಯಕ್ತಿತ್ವನ್ನು ದಾಟಲು ಸಾಧ್ಯವಿಲ್ಲ, ಆದರೆ ನಾವು ಭಗವಾನ್ ಬಾಹುಬಲಿಯ ಪ್ರತಿರೂಪವಾಗಬಹುದು ಎಂದರು.