ರಾಜಕೀಯಕ್ಕೆ ಮಾಜಿ ಕ್ರಿಕೆಟಿಗ ಗಂಭೀರ್ ಗುಡ್ ಬೈ
ನವದೆಹಲಿ,ಮಾ.೨- “ನನ್ನ ರಾಜಕೀಯ ಕರ್ತವ್ಯದಿಂದ ಮುಕ್ತಿ ಕೊಡಿ” ಎಂದು ಬಿಜೆಪಿ ಸಂಸದ ಹಾಗು ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಪಕ್ಷದ ರಾಷ್ಟ್ರೀಯ ಜೆಪಿ ನಡ್ಡಾ ಅವರಿಗೆ ಮನವಿ ಮಾಡಿದ್ದು ಈ ಮೂಲಕ ರಾಜಕೀಯದಿಂದ ನಿವೃತ್ತಿ ಪಡೆಯುವ ಸುಳಿವು ನೀಡಿದ್ದಾರೆ. ಈ ಕುರಿತು ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಗೌತಮ್ ಗಂಭೀರ್ ಅವರು , ಐಪಿಎಲ್ ೨೦೨೪ ರಲ್ಲಿ ಕೆಕೆಆರ್‍ನ ಮಾರ್ಗದರ್ಶಕರಾಗಿ ತನ್ನ ಕಾರ್ಯ ಪ್ರಾರಂಭಿಸುವ ಮೊದಲು ತನ್ನ ರಾಜಕೀಯ ಕರ್ತವ್ಯಗಳಿಂದ ಮುಕ್ತಗೊಳಿಸುವಂತೆ ಮನವಿ ಮಾಡಿದ್ದಾರೆ.
ಕ್ರಿಕೆಟ್ ಕಡೆಗೆ ಹೆಚ್ಚಿನ ಗಮನ ಹರಿಸಬೇಕಾಗಿದೆ. ಸದ್ಯದಲ್ಲಿಯೇ ಐಪಿಎಲ್ ಆರಂಭವಾಗುವುದರಿಂದ ಪಕ್ಷದ ಕರ್ತವ್ಯದಿಂದ ಮುಕ್ತಗೊಳಿಸಿ, ಇದುವರೆಗೂ ಜನರಿಗೆ ಸೇವೆ ಮಾಡಲು ಅವಕಾಶ ನೀಡಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಕೆಕೆಆರ್ ತಂಡಕ್ಕೆ ಹೊಸ ಮಾರ್ಗದರ್ಶಕರಾಗಿ ಮರಳುವ ಕೆಲವೇ ದಿನಗಳಲ್ಲಿ ಗಂಭೀರ್ ಅವರ ನಿರ್ಧಾರ ಬಂದಿದೆ. ಭಾರತದ ಮಾಜಿ ಆರಂಭಿಕ ಆಟಗಾರ ಮುಖ್ಯ ಕೋಚ್ ಚಂದ್ರಕಾಂತ್ ಪಂಡಿತ್ ಅವರೊಂದಿಗೆ ನಿಕಟವಾಗಿ ಕೆಲಸ ಮಾಡಲಿದ್ದಾರೆ. ಐಪಿಎಲ್ ಕಡೆಗೆ ಗಮನ ಹರಿಸುವ ಉದ್ದೇಶದಿಂದ ರಾಜಕೀಯದಿಂದ ನಿವೃತ್ತಿ ಪಡೆಯಲಿದ್ದಾರೆ ಎನ್ನುವ ಮಾತುಗಳಿಗೆ ರೆಕ್ಕೆ ಪುಕ್ಕ ಬಂದಿದೆ. ಗಂಭೀರ್ ಅವರು ೨೦೧೧-೧೭ ರಿಂದ ಕೋಲ್ಕತ್ತಾ ಮೂಲದ ಫ್ರಾಂಚೈಸಿಗೆ ನಾಯಕರಾಗಿದ್ದರು ಮತ್ತು ೨೦೧೨ ಮತ್ತು ೨೦೧೪ ರಲ್ಲಿ ಐಪಿಎಲ್ ಪ್ರಶಸ್ತಿಗಳಿಗೆ ಕಾರಣರಾದರು. ಗಂಭೀರ್ ಕೆಕೆಆರ್ ತಂಡಕ್ಕೆ ಮರಳುವ ಘೋಷಣೆಯನ್ನು ಕಳೆದ ವರ್ಷ ನವೆಂಬರ್ ೨೧ ರಂದು ಅಧಿಕೃತ ಮಾಡಿದ್ದರು.
“ಗೌತಮ್ ಗಂಭೀರ್ ಕೆಕೆಆರ್‍ಗೆ “ಮೆಂಟರ್ ಆಗಿ ಮರಳುತ್ತಾರೆ ಮತ್ತು ಮುಖ್ಯ ಕೋಚ್ ಚಂದ್ರಕಾಂತ್ ಪಂಡಿತ್ ಅವರೊಂದಿಗೆ ಕೈಜೋಡಿಸಲಿದ್ದಾರೆ” ಎಂದು ಕೆಕೆಆರ್ ಪ್ರಕಟಣೆಯಲ್ಲಿ ತಿಳಿಸಿದೆ.
ಭಾರತದ ಮಾಜಿ ಓಪನರ್ ೨೦೨೨ ಮತ್ತು ೨೩ ಋತುಗಳಲ್ಲಿ ಲಕ್ನೋ ಸೂಪರ್ ಜೈಂಟ್ಸ್‌ಗೆ ಮಾರ್ಗದರ್ಶಕರಾಗಿ ಕೆಲಸ ಮಾಡಿದರು. ಎರಡೂ ಸೀಸನ್‌ಗಳಲ್ಲಿ ಎಲ್ ಎಸ್ ಜಿ ತಂಡ ಪ್ಲೇಆಫ್ ತಲುಪಿತ್ತು.
ಕೆಕೆಆರ್ ತಂಡ ಮಾರ್ಚ್ ೨೩ ರಂದು ಕೋಲ್ಕತ್ತಾದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಅನ್ನು ಎದುರಿಸುವ ಮೂಲಕ ಈ ಋತುವಿನ ಐಪಿಎಲ್ ಕ್ರಿಕೆಟ್ ಪಂದ್ಯ ಆರಂಭವಾಗಲಿದೆ.