ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ; 9 ಮಂದಿ ಗಾಯ ಮಹಿಳೆ ಗಂಭೀರ, ಬ್ಯಾಟರಿ,ಟೈಮರ್ ಪತ್ತೆ

ಬೆಂಗಳೂರು,ಮಾ.1-ವೈಟ್‌ಫೀಲ್ಡ್‌ನ ಬ್ರೂಕ್‌ ಫೀಲ್ಡ್‌ ಸಮೀಪದ ರಾಮೇಶ್ವರಂ ಕೆಫೆಯಲ್ಲಿ ಇಂದು ಮಧ್ಯಾಹ್ನ ನಿಗೂಢ ಸ್ಫೋಟವು ಬಾಂಬ್ ನಿಂದ ಸಂಭವಿಸಿರುವುದು ಪತ್ತೆಯಾಗಿದ್ದು, ನಗರದ ಜನತೆಯನ್ನು ತಲ್ಲಣಗೊಳಿಸಿದೆ.
ಸ್ಫೋಟಗೊಂಡ ಸ್ಥಳದಲ್ಲಿ ಬ್ಯಾಟರಿ,ಟೈಮರ್ ಪತ್ತೆಯಾಗಿದ್ದು.ಟೈಮರ್ ಇಟ್ಟು ಬಾಂಬ್ ಸ್ಫೋಟ ಮಾಡಿರುವುದು ಖಚಿತವಾಗಿದೆ. ಬ್ಯಾಗ್ ಇಟ್ಟು ಬ್ಯಾಗಿನ ಒಳಗೆ ಟೈಮರ್ ಫಿಕ್ಸ್ ಮಾಡಿ ಸ್ಫೋಟ ಮಾಡಲಾಗಿದೆ ಎಂಬ ಬಗ್ಗೆ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದ್ದು,ಹೆಚ್ಚಿನ ಆತಂಕಕ್ಕೆ ಕಾರಣವಾಗಿದೆ.
ಜಿಲೇಟಿನ್ ಕಡ್ಡಿಗಳಿಂದ ಸ್ಪೋಟವಾಗಿದೆಯಾ? ಮೈಕ್ರೊ ಓವನ್‌ ಅಥವಾ ಬಾಯ್ಲರ್ ಸ್ಫೋಟ ಆಗಿದೆಯಾ ಎಂಬುದನ್ನು ಸಹ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಆದರೆ, ಅಂತಹ ಯಾವುದೇ ಸ್ಫೋಟ ಆಗಿಲ್ಲ ಎಂದು ಹೇಳಲಾಗುತ್ತಿದೆ. ಆದರೆ, ಇದೀಗ ಟೈಮರ್ ಸಿಕ್ಕಿದ್ದು, ಟೈಮರ್ ಇಟ್ಟು ಸ್ಫೋಟ ಮಾಡಲಾಗಿದೆಯೇ ಎನ್ನುವ ಶಂಕೆ ವ್ಯಕ್ತವಾಗಿದೆ. ಎಫ್‌ಎಸ್‌ಎಲ್ ಅಧಿಕಾರಿಗಳಿಂದಲೇ ಸ್ಫೋಟಕ್ಕೆ ಕಾರಣವೇನು ಎಂಬುದನ್ನು ಬಯಲಾಗಬೇಕಿದೆ. ಇತ್ತ ಪೊಲೀಸರು ಸಿಸಿಟಿವಿಗಳ ಪರಿಶೀಲನೆ ನಡೆಸುತ್ತಿದ್ದಾರೆ.
ಸ್ಪೋಟದಿಂದ ರಾಮೇಶ್ವರಂ ಕೆಫೆಯಲ್ಲಿದ್ದ 9 ಜನರಿಗೆ ಗಾಯಾಗಳಾಗಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ ಮೈಕ್ರೋ ಚಿಪ್ ಇಂಡಿಯಾ ಲಿ. ನಲ್ಲಿ ಕೆಲಸ ಮಾಡುತ್ತಿದ್ದ ಐವರು ಮಧ್ಯಾಹ್ನಕ್ಕೆ ಊಟಕ್ಕೆ ಬಂದಿದ್ದರು.
ಮಧ್ಯಾಹ್ನ 1ರ ವೇಳೆ ಊಟದ ಸಮಯಕ್ಕೆ ಸ್ಫೋಟಗೊಂಡಿದ್ದು, ಕೈ ತೊಳೆಯುವ ಜಾಗದಿಂದ ಶಬ್ಧ ಕೇಳಿ ಬಂದಿದೆ. ಉತ್ತರ ಭಾರತ ಮೂಲದ ಆಕ್ಸಿಸ್ ಬ್ಯಾಂಕ್ ಉದ್ಯೋಗಿ ಮೋಮಿ ಎಂಬಾಕೆ ಗಾಯಗೊಂಡಿದ್ದಾರೆ. ಫಾರುಕ್ ಹುಸಾಯ್, ದಿಪಾಂಶು ಎಂಬುವವರು ಗಾಯಗೊಂಡಿದ್ದು, ಸ್ವರ್ಣ ನಾರಾಯಣಪ್ಪ ಗಂಭೀರ ಗಾಯಗೊಂಡು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗಾಯಾಳುಗಳ ಬಗ್ಗೆ ಬ್ರೂಕ್ಫೀಲ್ಡ್ ಆಸ್ಪತ್ರೆಯ ವೈದ್ಯ ಪ್ರದೀಪ್ ಕುಮಾರ್ ಮಾತನಾಡಿ, ಗಾಯಾಳುಗಳ ದೇಹದಲ್ಲಿ ಪತ್ತೆಯಾದ ವಸ್ತುಗಳನ್ನು ಎಫ್ ಎಸ್ ಎಲ್ ಗೆ ನೀಡುತ್ತೇವೆ. ಬ್ರೂಕ್ಫೀಲ್ಡ್ ಆಸ್ಪತ್ರೆಯಲ್ಲಿ 3 ಗಾಯಾಳುಗಳು ದಾಖಲಾಗಿದ್ದಾರೆ. 45 ವರ್ಷದ ಮಹಿಳೆಗೆ ಶೇ.40ರಷ್ಟು ಗಾಯವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಮೂವರ ಜೀವಕ್ಕೆ ಯಾವುದೇ ಅಪಾಯವಿಲ್ಲ. ಸ್ಫೋಟದ ಶಬ್ದದಿಂದ ಮೂವರ ಕಿವಿ ಪರದೆಗೆ ಸ್ವಲ್ಪ ಪ್ರಮಾಣದಲ್ಲಿ ಹಾನಿಯಾಗಿದೆ. ಇಬ್ಬರ ಕಿವಿ ಪರದೆಗೆ ಸ್ವಲ್ಪ. ಈ ಪೈಕಿ ಗಾಯಾಳು ಮಹಿಳೆಗೆ ಪ್ಲಾಸ್ಟಿಕ್ ಸರ್ಜರಿ ಮಾಡಬೇಕಿದೆ ಎಂದು ಮಾಹಿತಿ ನೀಡಿದರು.
ಬಾಂಬ್ ಸ್ಫೋಟ:ಡಿಜಿಪಿ
ಇನ್ನು ಘಟನಾ ಸ್ಥಳಕ್ಕೆ ರಾಜ್ಯ ಪೊಲೀಸ್ ಮಹಾ‌ನಿರ್ದೇಶಕ(ಡಿಜಿ- ಐಜಿಪಿ)ಅಲೋಕ್ ಮೋಹನ್ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ರಾಮೇಶ್ವರಂ ಕೆಫೆಯಲ್ಲಿ ಮಧ್ಯಾಹ್ನ 1 ಗಂಟೆಗೆ ಬಾಂಬ್ ಸ್ಪೋಟ ಆಗಿದೆ. ಘಟನಾ ಸ್ಥಳಕ್ಕೆ ಎಫ್ಎಸ್ಎಲ್ ತಂಡ ಭೇಟಿ ನೀಡಿ ಪರಿಶೀಲಿಸುತ್ತಿದೆ. ಬಾಂಬ್ ಸ್ಫೋಟದಲ್ಲಿ ಒಟ್ಟು 9 ಜನರಿಗೆ ಗಂಭೀರ ಗಾಯಗಳಾಗಿವೆ. ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಪರಮೇಶ್ವರ್ ಮಾಹಿತಿ ಪಡೆದಿದ್ದಾರೆ/ ಎಫ್ಎಸ್ಎಲ್ ತಂಡ ಸಂಪೂರ್ಣ ಪರಿಶೀಲನೆ ಬಳಿಕ ಮಾಹಿತಿ ನೀಡ್ತೇವೆ. ತನಿಖೆ ಬಳಿಕ ಆರೋಪಿ ಏನು ತಂದಿದ್ದಾನೆ ಎನ್ನುವುದು ಗೊತ್ತಾಗಲಿದೆ. ಎನ್ಐಎ ಮತ್ತು ಐಬಿಗೆ ಮಾಹಿತಿ ನೀಡಿದ್ದೇವೆ, ತನಿಖೆ ನಡೆಸುತ್ತಿದ್ದಾರೆ ಎಂದರು.