ಅಂಬಾನಿ ಮನೆಯಲ್ಲಿ ವಿವಾಹ ಪೂರ್ವ ಸಮಾರಂಭ
ಜಾಮ್‌ನಗರ,ಮಾ.೧-ಉದ್ಯಮಿ ಮುಕೇಶ್ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ವಿವಾಹ ಪೂರ್ವ ಸಮಾರಂಭವನ್ನು ಮದುವೆಗೂ ಮುನ್ನ ಆಯೋಜಿಸಲಾಗಿದೆ. ಇದು ಇಂದಿನಿಂದ ಪ್ರಾರಂಭವಾಗಿದೆ. ಜಾಮ್‌ನಗರದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದ್ದು, ಮೂರು ದಿನಗಳ ಕಾಲ ನಡೆಯಲಿದೆ.
ಗಣ್ಯರ ಆಗಮನದಿಂದ ಜಾಮ್‌ನಗರ ಗಿಜಿಗುಡುತ್ತಿದೆ.
ಅತಿಥಿಗಳನ್ನು ಸ್ವಾಗತಿಸಲು ವಿಮಾನ ನಿಲ್ದಾಣದಲ್ಲಿ ಸ್ವಾಗತ ಕಮಾನುಗಳನ್ನೂ ಹಾಕಲಾಗಿದೆ.ಈ ಸಂದರ್ಭದಲ್ಲಿ ಮುಕೇಶ್ ಪತ್ನಿ ನೀತಾ ಅಂಬಾನಿ ಅತಿಥಿಗಳನ್ನು ಆಹ್ವಾನಿಸುವ ವಿಶೇಷ ವಿಡಿಯೋ ಸಂದೇಶವನ್ನು ನೀಡಿದ್ದಾರೆ.
ಮಾರ್ಚ್ ೧ ರಿಂದ ಪ್ರಾರಂಭವಾಗಿ ಮಾರ್ಚ್ ೩ ರಂದು ಕೊನೆಗೊಳ್ಳಲಿದೆ. ಇದರಲ್ಲಿ ಹಾಲಿವುಡ್‌ನಿಂದ ಬಾಲಿವುಡ್‌ವರೆಗಿನ ಮಹಾನ್ ವ್ಯಕ್ತಿಗಳು ಭಾಗವಹಿಸಲಿದ್ದಾರೆ. ಹಾಲಿವುಡ್ ಪಾಪ್ ತಾರೆ ರಿಹಾನ್ನಾ ಇಲ್ಲಿ ಪ್ರದರ್ಶನ ನೀಡಲಿದ್ದು, ಗುರುವಾರ ಜಾಮ್‌ನಗರ ತಲುಪಿದ್ದಾರೆ. ಇವರಲ್ಲದೆ ಅರ್ಜುನ್ ಕಪೂರ್, ಅಮಿತಾಬ್ ಬಚ್ಚನ್, ರಣಬೀರ್ ಕಪೂರ್, ಆಲಿಯಾ ಭಟ್, ಕತ್ರಿನಾ ಕೈಫ್, ವಿಕ್ಕಿ ಕೌಶಲ್, ಶಾರುಖ್ ಖಾನ್ ಸೇರಿದಂತೆ ಹಲವು ಹಿರಿಯ ನಟರು ಈ ವಿವಾಹ ಪೂರ್ವ ಸಮಾರಂಭದಲ್ಲಿ ಭಾಗವಹಿಸುತ್ತಿದ್ದಾರೆ.
ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ತಮ್ಮ ಪತ್ನಿಯೊಂದಿಗೆ ಜಾಮ್‌ನಗರ ತಲುಪಿದ್ದಾರೆ. ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಪೂರ್ವ ಸಮಾರಂಭದಲ್ಲಿ ಪಾಲ್ಗೊಳ್ಳಲು ಅವರು ಆಗಮಿಸಿದ್ದಾರೆ.
ಮಾರ್ಚ್ ೧ ರ ಸಂಜೆ ಅತಿಥಿಗಳಿಗಾಗಿ ’ಈವ್ನಿಂಗ್ ಇನ್ ಎವರ್‌ಲ್ಯಾಂಡ್-ಥೀಮ್’ ಕಾಕ್‌ಟೈಲ್ ಪಾರ್ಟಿಯನ್ನು ಆಯೋಜಿಸಲಾಗಿದೆ. ಮಾರ್ಚ್ ೨ ರಂದು ಮೊದಲಿಗೆ ಎಲ್ಲರೂ ರಿಲಯನ್ಸ್ ಅನಿಮಲ್ ರೆಸ್ಕ್ಯೂ ಸೆಂಟರ್ ಪ್ರವಾಸಕ್ಕೆ ತೆರಳಲಿದ್ದು, ಸಂಜೆ ಪಾರ್ಟಿ ಆಯೋಜಿಸಲಾಗಿದೆ, ಮಾರ್ಚ್ ೩ ರಂದು ಎಲ್ಲರೂ ’ಟಸ್ಕರ್ ಟ್ರಯಲ್’ನಲ್ಲಿ ತೆರಳಲಿದ್ದು, ಕೊನೆಯ ಕಾರ್ಯಕ್ರಮ ಸಾಂಪ್ರದಾಯಿಕವಾಗಿ ನಡೆಯಲಿದೆ.
ಅನಂತ್ ಮತ್ತು ರಾಧಿಕಾ ಜನವರಿ ೨೦೨೩ ರಲ್ಲಿ ಮುಂಬೈನಲ್ಲಿರುವ ಅಂಬಾನಿ ನಿವಾಸವಾದ ಆಂಟಿಲಿಯಾದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಜುಲೈನಲ್ಲಿ ಇಬ್ಬರೂ ಮದುವೆಯಾಗಲಿದ್ದಾರೆ.