ಶಾಸಕ ಸೋಮಶೇಖರ್ ವಿರುದ್ಧ ಪ್ರತಿಭಟನೆ
ಬೆಂಗಳೂರು, ಫೆ.೨೯ : ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಬಿಜೆಪಿ ಶಾಸಕ ಎಸ್. ಟಿ. ಸೋಮಶೇಖರ್ ವಿರುದ್ಧ ಜೆಡಿಎಸ್ ಬಿಜೆಪಿ ಎನ್‌ಡಿಎ ಮೈತ್ರಿ ಕೂಟದ ಮುಖಂಡರು ಕೆಂಗೇರಿ ಉಪನಗರದ ಹೊಯ್ಸಳ ಸರ್ಕಲ್ ನಲ್ಲಿ ಪ್ರತಿಭಟನೆ ನಡೆಸಿ ರಸ್ತೆಯಲ್ಲಿ ಟೈರ್ ಸುಟ್ಟು ರಾಜೀನಾಮೆಗೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಜೆಡಿಎಸ್ ಮುಖಂಡ ಟಿ.ಎನ್. ಜವರಾಯಿಗೌಡ ಮಾತನಾಡಿ ಪಕ್ಷದಿಂದ ಪಕ್ಷಕ್ಕೆ ಜಿಗಿಯುವುದರಲ್ಲಿ ನಿಸ್ಸೀಮರಾಗಿರುವ ಎಸ್. ಟಿ. ಸೋಮಶೇಖರ್ ಈ ಬಾರಿ ಬಿಜೆಪಿಯಿಂದ ಶಾಸಕರಾಗಿ ಆಯ್ಕೆಯಾಗಿ ಪಕ್ಷ ಹಾಗೂ ನಿಷ್ಠಾವಂತ ಕಾರ್ಯಕರ್ತರಿಗೆ ದ್ರೋಹ ಬಗೆಯುವ ಮೂಲಕ ಹಳೆ ಚಾಳಿಯನ್ನೇ ಮುಂದುವರಿಸಿದ್ದಾರೆ ಎಂದು ಕಿಡಿಕಾರಿದರು. ಬಿಜೆಪಿ ಪಕ್ಷದಲ್ಲಿ ಮೂರು ವರ್ಷ ನಿರಂತರ ಸಚಿವರಾಗಿ ಕಾರ್ಯನಿರ್ವಹಿಸಿ ಅಭಿವೃದ್ಧಿಯ ಹೆಸರಿನಲ್ಲಿ ಲೂಟಿ ಮಾಡಿ ಈಗ ಪಕ್ಷವನ್ನು ತೊರೆಯಲು ಅಡ್ಡ ಮತದಾನದ ಮೂಲಕ ಯಶವಂತಪುರ ಕ್ಷೇತ್ರದ ಮತದಾರರಿಗೆ ದ್ರೋಹ ಬಗೆದಿದ್ದಾರೆ ಎಂದು ಆರೋಪಿಸಿದರು. ಯಶವಂತಪುರ ವಿಧಾನಸಭಾ ಕ್ಷೇತ್ರ ಭಾಜಪ ನಗರ ಮಂಡಲ ಅಧ್ಯಕ್ಷ ಅನಿಲ್ ಚಳಗೇರಿ ಮಾತನಾಡಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಆಡಳಿತ ಕಾಲದಲ್ಲಿ ಸಹಕಾರ ಸಚಿವರಾಗಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿಯಾಗಿ ೧೫೦೦ ಕೋಟಿ ಅನುದಾನ ಪಡೆದು ಮಾಜಿ ಮುಖ್ಯಮಂತ್ರಿಗಳ ಹುಟ್ಟು ಹಬ್ಬದ ದಿನದಂದೇ ಅಡ್ಡ ಮತದಾನ ಮಾಡುವ ಮೂಲಕ ಪಕ್ಷ ಹಾಗೂ ಯಡಿಯೂರಪ್ಪ ರವರ ಬೆನ್ನಿಗೆ ಚೂರಿ ಹಾಕಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು, ಆತ್ಮಸಾಕ್ಷಿ ಇದ್ದರೆ ಕೂಡಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಿಜೆಪಿ ಪಕ್ಷ ತೊರೆಯಬೇಕೆಂದು ಒತ್ತಾಯಿಸಿದರು.
ಯಶವಂತಪುರ ವಿಧಾನಸಭಾ ಕ್ಷೇತ್ರ ಬಿಜೆಪಿ ಮಂಡಲ ಅಧ್ಯಕ್ಷ ಸಿ.ಎಂ.ಮಾರೇಗೌಡ ಮಾತನಾಡಿ ಅಧಿಕಾರದ ಆಸೆ ಹಾಗೂ ಸ್ವಾರ್ಥಕ್ಕಾಗಿ ಬಿಜೆಪಿ ಪಕ್ಷಕ್ಕೆ ಅನ್ಯಾಯ ಮಾಡಿದ್ದಾರೆ ಮುಂದಿನ ದಿನಗಳಲ್ಲಿ ಯಶವಂತಪುರ ಕ್ಷೇತ್ರದ ಮತದಾರರು ತಕ್ಕ ಪಾಠ ಕಲಿಸಿದ್ದಾರೆ ಎಂದು ತಿಳಿಸಿದರು.
ಬಿಜೆಪಿ ಮುಖಂಡರಾದ ರ.ಅಂಜನಪ್ಪ, ವಾಜರಹಳ್ಳಿ ಶಶಿಕುಮಾರ್, ಯಶವಂತಪುರ ವಿಧಾನಸಭಾ ಕ್ಷೇತ್ರ ಗ್ರಾಮಾಂತರ ಮಂಡಲ ಭಾಜಪ ಅಧ್ಯಕ್ಷ ರಂಗರಾಜು, ಬಿಬಿಎಂಪಿ ಮಾಜಿ ಸದಸ್ಯ ವಿ.ವಿ ಸತ್ಯನಾರಾಯಣ, ಬಿಬಿಎಂಪಿ ಕೆಂಗೇರಿ ವಾರ್ಡ್ ಅಧ್ಯಕ್ಷ ಸಂತೋಷ್, ಜೆಡಿಎಸ್ ಉಲ್ಲಾಳು ಘಟಕದ ದೇವರಾಜ್, ಕಿಟ್ಟಿ, ಮುಂತಾದ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.