ಮುಂದಿನ ವಾರಕದನ ವಿರಾಮ: ಬೈಡೆನ್ ವಿಶ್ವಾಸ
ನ್ಯೂಯಾರ್ಕ್, ಫೆ.೨೭- ಇಸ್ರೇಲ್ ಹಾಗೂ ಹಮಾಸ್ ನಡುವಿನ ಭೀಕರ ಕಾಳಗ ಮುಂದುವರೆದಿರುವ ನಡುವೆಯೇ ಇದೀಗ ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಯುದ್ಧಪೀಡಿತ ಗಾಝಾದಲ್ಲಿ ಮುಂದಿನ ಸೋಮವಾರದ ಒಳಗಾಗಿ ಕದನ ವಿರಾಮ ಏರ್ಪಡುವ ಸಾಧ್ಯತೆಗಳಿವೆ ಎಂದು ಬೈಡನ್ ಹೇಳಿದ್ದಾರೆ.
ನ್ಯೂಯಾರ್ಕ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೈಡೆನ್, ಇಸ್ರೇಲ್ ಹಾಗೂ ಹಮಾಸ್ ನಡುವಿನ ಶಾಂತಿ ಮಾತುಕತೆ ಹಾಗೂ ಕದನ ವಿರಾಮ ಘೋಷಣೆ ವಿಚಾರದಲ್ಲಿ ನಾವು ಮತ್ತಷ್ಟು ಹತ್ತಿರಗೊಂಡಿದ್ದೇವೆ ಎಂದು ನನಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‌ಎಸ್‌ಎ) ತಿಳಿಸಿದ್ದಾರೆ. ಅದರೆ ಈಗಲೇ ಏನು ಹೇಳಲು ಸಾಧ್ಯವಿಲ್ಲ. ಆದರೆ ಸೋಮವಾರದ ವೇಳೆಗೆ ಕದನ ವಿರಾಮ ಏರ್ಪಡುವ ಸಾಧ್ಯತೆಗಳಿವೆ ಎಂದು ತಿಳಿಸಿದ್ದಾರೆ.
ಇದಕ್ಕೂ ಮುನ್ನ ಹೆಚ್ಚಿನ ಮಾಹಿತಿ ನೀಡಿದ್ದ ಯುಎಸ್ ಸ್ಟೇಟ್ ಡಿಪಾರ್ಟ್‌ಮೆಂಟ್ ವಕ್ತಾರ ಮ್ಯಾಥ್ಯೂ ಮಿಲ್ಲರ್, ಕಳೆದ ಹಲವು ದಿನಗಳಲ್ಲಿ ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವ ಮಾತುಕತೆಗಳಲ್ಲಿ ಪ್ರಗತಿ ಮಾಡಲಾಗಿದೆ. ಈಜಿಪ್ಟ್, ಇಸ್ರೇಲ್, ಅಮೆರಿಕಾ ಮತ್ತು ಕತಾರ್ ನಡುವೆ ನಾವು ನಡೆಸಿದ ಸಂಭಾಷಣೆಗಳೊಂದಿಗೆ ನಾವು ಪ್ರಗತಿ ಹೊಂದಿದ್ದೇವೆ ಎಂದು ತಿಳಿಸಿದ್ದಾರೆ. ಇನ್ನು ಕಳೆದ ವಾರ ಗಾಝಾದಲ್ಲಿ ತಕ್ಷಣದ ಕದನ ವಿರಾಮವನ್ನು ಒತ್ತಾಯಿಸುವ ಯುಎನ್ ಭದ್ರತಾ ಮಂಡಳಿಯ ನಿರ್ಣಯವನ್ನು ಅಮೆರಿಕಾ ವೀಟೋ ಮಾಡಿದ್ದು, ಸಹಜವಾಗಿಯೇ ಜಾಗತಿಕ ಮಟ್ಟದಲ್ಲಿ ಟೀಕೆಗೆ ಗುರಿಯಾಗಿತ್ತು. ಅಲ್ಲದೆ ಅಮೆರಿಕಾವು ತನ್ನದೇ ಆದ ತಾತ್ಕಾಲಿಕ ಕದನ ವಿರಾಮ ನಿರ್ಣಯವನ್ನು ಪ್ರಸ್ತಾಪಿಸಿತು. ಇದರಲ್ಲಿ ದಕ್ಷಿಣ ಗಜಾನ್ ನಗರವಾದ ರಫಾವನ್ನು ಇಸ್ರೇಲ್ ಆಕ್ರಮಿಸದಂತೆ ವಿಚಾರ ಕೂಡ ಸೇರಿದೆ. ಇವೆಲ್ಲದರ ನಡುವೆ ಇದೀಗ ಮುಂದಿನ ಸೋಮವಾರದ ವೇಳೆಗೆ ಕದನ ವಿರಾಮ ಘೋಷಣೆಯಾಗುವ ಸಾಧ್ಯತೆ ಬಗ್ಗೆ ಬೈಡೆನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
. ಗಾಝಾ ನಿವಾಸಿಗಳ ಮೇಲೆ ಇಸ್ರೇಲ್ ನಡೆಸುತ್ತಿರುವ ದೌರ್ಜನ್ಯದ ವಿರುದ್ಧ ಈಗಾಗಲೇ ಜಾಗತಿಕ ಮಟ್ಟದಲ್ಲಿ ತೀವ್ರ ಆಕ್ರೋಶ ಕೂಡ ಕೇಳಿಬರುತ್ತಿದೆ. ಆದರೆ ಅತ್ತ ಹಮಾಸ್ ಉಗ್ರರು ಇಸ್ರೇಲ್ ನಾಗರಿಕರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದು, ಇದರ ವಿರುದ್ಧ ಕೂಡ ಅಮೆರಿಕಾ ಸೇರಿದಂತೆ ಮಿತ್ರರಾಷ್ಟ್ರಗಳು ಅಸಮಾಧಾನ ಹೊರಹಾಕಿವೆ.