ಸ್ವೀಡನ್‌ನ ನ್ಯಾಟೋ ಎಂಟ್ರಿಗೆ ಹಂಗೇರಿ ಸಂಸತ್ತು ಒಪ್ಪಿಗೆ
ಬರ್ಲಿನ್, ಫೆ.೨೭- ನ್ಯಾಟೋ ಪಡೆ ಸೇರ್ಪಡೆ ವಿಚಾರದಲ್ಲಿ ಸ್ವೀಡನ್‌ನ ಅಂತಿಮ ದೊಡ್ಡ ಅಡಚಣೆ ನಿವಾರಣೆಯಾಗಿದೆ. ಹಂಗೇರಿಯ ಸಂಸತ್ತಿನಲ್ಲಿ ಸ್ವೀಡನ್‌ನ ಸದಸ್ಯತ್ವ ಸೇರ್ಪಡೆ ಪರ ಮತ ಚಲಾಯಿಸಿದ್ದು, ಈ ಹಿನ್ನೆಲೆಯಲ್ಲಿ ನ್ಯಾಟೋ ಸೇರ್ಪಡೆ ಬಹುತೇಕ ಅಂತಿಮಗೊಂಡಿದೆ.
೨೦೨೨ ರಲ್ಲಿ ಉಕ್ರೇನ್‌ನ ಮೇಲೆ ರಷ್ಯಾದ ಪೂರ್ಣ ಪ್ರಮಾಣದ ಆಕ್ರಮಣದ ನಂತರ ಸ್ವೀಡನ್ ದೇಶವು ರಕ್ಷಣಾ ಮೈತ್ರಿಯಾಗಿರುವ ನ್ಯಾಟೋಗೆ ಸೇರಲು ಅರ್ಜಿ ಸಲ್ಲಿಸಿತು. ನ್ಯಾಟೋದ ಆರ್ಟಿಕಲ್ ೫ರ ಅನ್ವಯ ಯಾವುದೇ ಇತರೆ ದೇಶವು ನ್ಯಾಟೋ ದೇಶದ ಮೇಲೆ ದಾಳಿ ನಡೆಸಿದರೆ ಒಕ್ಕೂಟದಲ್ಲಿರುವ ಎಲ್ಲಾ ದೇಶಗಳು ಒಟ್ಟಾಗಿ, ದಾಳಿಕೋರ ದೇಶದ ಮೇಲೆ ಯದ್ದ ಸಾರುತ್ತದೆ. ಹಾಗಾಗಿ ಇಲ್ಲಿನ ಸದಸ್ಯ ದೇಶಗಳಿಗೆ ರಕ್ಷಣಾ ಭದ್ರತೆ ಒದಗಿಸಿದಂತಾಗುತ್ತದೆ. ಈ ಹಿನ್ನೆಲೆಯಲ್ಲಿ ರಷ್ಯಾದ ಭಯದಿಂದ ನ್ಯಾಟೋಗೆ ಸೇರಲು ಇನ್ನಿಲ್ಲದ ಉತ್ಸಾಹ ವ್ಯಕ್ತಪಡಿಸಿತ್ತು. ಆದರೆ ನ್ಯಾಟೋ ಸೇರ್ಪಡೆಗೆ ಉಳಿದ ಸದಸ್ಯ ರಾಷ್ಟ್ರಗಳು ಕೂಡ ಒಪ್ಪಿಗೆ ಸೂಚಿಸುವುದು ಕಡ್ಡಾಯವಾಗಿದೆ. ಈ ನಿಟ್ಟಿನಲ್ಲಿ ಸ್ವೀಡನ್ ಸೇರ್ಪಡೆಗೆ ಹಂಗೇರಿ ಅಸಮಧಾನ ವ್ಯಕ್ತಪಡಿಸಿತ್ತು. ಆದರೆ ಹಲವು ಇತರೆ ಸದಸ್ಯ ದೇಶಗಳು ಹಂಗೇರಿ ಜೊತೆ ಮಾತುಕತೆ ನಡೆಸಿ, ವಿವಾದ ಅಂತ್ಯಕ್ಕೆ ಯತ್ನಿಸಿದ್ದವು. ಈ ಹಿನ್ನೆಲೆಯಲ್ಲಿ ಇದೀಗ ಹಂಗೇರಿ ಸಂಸತ್ತಿನಲ್ಲಿ ಸ್ವೀಡನ್‌ನ ನ್ಯಾಟೋ ಸೇರ್ಪಡೆ ಬಿಡ್ ಅನ್ನು ಬೆಂಬಲಿಸಿ, ಮತ ಚಲಾಯಿಸಲಾಗಿದೆ. ಇನ್ನು ಹಂಗೇರಿ ಸಂಸತ್ತಿನ ಅನುಮೋದನೆಗೆ ಮುಂದಿನ ಅಧ್ಯಕ್ಷರು ಸಹಿ ಹಾಕಬೇಕಬೇಕಿದೆ. ಬಳಿಕ ನ್ಯಾಟೋದ ಗುಂಪಿಗೆ ಸೇರಲು ಸ್ವೀಡನ್‌ಗೆ ಔಪಚಾರಿಕ ಆಹ್ವಾನವನ್ನು ಕಳುಹಿಸಲಾಗುತ್ತದೆ. ಈ ಪ್ರಕ್ರಿಯೆಯು ಸಾಮಾನ್ಯವಾಗಿ ಕೆಲವು ದಿನಗಳವರೆಗೆ ಇರುತ್ತದೆ. ಸದ್ಯ ನ್ಯಾಟೋದಲ್ಲಿ ೩೧ ರಾಷ್ಟ್ರಗಳು ಸೇರ್ಪಡೆಯಾಗಿವೆ.
ಇದೊಂದು ಐತಿಹಾಸಿಕ ದಿನವಾಗಿದೆ. ಸ್ವೀಡನ್ ೨೦೦ ವರ್ಷಗಳ ತಟಸ್ಥತೆಯನ್ನು ತ್ಯಜಿಸುವ ನಿಟ್ಟಿನಲ್ಲಿ ದೊಡ್ಡ ಹೆಜ್ಜೆಯಾಗಿದೆ. ಸ್ವೀಡನ್ ಒಂದು ಮಹೋನ್ನತ ದೇಶವಾಗಿದೆ. ಆದರೆ ನಾವು ಎಲ್ಲವನ್ನೂ ಮತ್ತು ನಾವು ನಂಬುವ ಎಲ್ಲವನ್ನೂ ಉತ್ತಮವಾಗಿ ರಕ್ಷಿಸಲು ನ್ಯಾಟೋಗೆ ಸೇರುತ್ತಿದ್ದೇವೆ.
-ಉಲ್ಫ್ ಕ್ರಿಸ್ಟರ್ಸನ್, ಸ್ವೀಡನ್ ಪ್ರಧಾನಿ