ಮುಳ್ಳಯ್ಯನಗಿರಿ ಬೆಟ್ಟದಲ್ಲಿಕಾಡ್ಗಿಚ್ಚು ಅರಣ್ಯ ನಾಶ
ಚಿಕ್ಕಮಗಳೂರು,ಫೆ.೨೫-ರಾಜ್ಯದ ಅತ್ಯಂತ ಎತ್ತರದ ಪರ್ವತ ಪ್ರದೇಶ ಹಾಗೂ ದೇಶ-ವಿದೇಶಿಗರ ನೆಚ್ಚಿನ ಪ್ರವಾಸಿ ತಾಣವೂ ಆಗಿರುವ ಜಿಲ್ಲೆಯ ಚಂದ್ರದ್ರೋಣ ಪರ್ವತಗಳ ಸಾಲಿನ ಮುಳ್ಳಯ್ಯನಗಿರಿ ಬೆಟ್ಟದಲ್ಲಿ ಕಾಡ್ಗಿಚ್ಚು ಹಬ್ಬಿದೆ. ಬೆಂಕಿಯ ಕೆನ್ನಾಲಿಗೆಗೆ ನೂರಾರು ಎಕರೆ ಅರಣ್ಯ ಸಂಪೂರ್ಣ ಸುಟ್ಟು ಕರಕಲಾಗಿದೆ. ಮುಳ್ಳಯ್ಯನಗಿರಿ ತಪ್ಪಲು ಎಂದರೆ ಅಪರೂಪದ ಸಸ್ಯ ಸಂಪತ್ತಿನ ರಾಶಿ ಇದೀಗ ಸುಟ್ಟು ಬೂದಿಯಾಗಿದೆ.
ಮುಳ್ಳಯ್ಯನಗರಿ ಸಮೀಪದ ಬೈರೆಗುಡ್ಡದಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡು ನೂರಾರು ಎಕರೆ ಅರಣ್ಯ ಸುಟ್ಟು ಭಸ್ಮವಾಗಿದೆ. ಬೈರೆಗುಡ್ಡ ಬಳಿ ಕಾಣಿಸಿಕೊಂಡ ಕಾಡ್ಗಿಚ್ಚು ಬೆಟ್ಟದಿಂದ ಗುಡ್ಡಕ್ಕೆ ಕವಿಕಲ್ ಗಂಡಿ ಅರಣ್ಯದವರೆಗೂ ವ್ಯಾಪಿಸಿದೆ. ಅರಣ್ಯಾಧಿಕಾರಿಗಳು ಕಾಡ್ಗಿಚ್ಚಿನ ಸ್ಥಳಕ್ಕೆ ತಲುಪಲು ಹರಸಾಹಸ ಪಡುತ್ತಿದ್ದಾರೆ. ಬೈರೆಗುಡ್ಡ ಬಹಳ ಎತ್ತರದ, ಅರಣ್ಯ ಮತ್ತು ಇಳಿಜಾರು ಪ್ರದೇಶವಾಗಿದೆ. ಮುಳ್ಳಯ್ಯನಗಿರಿಯಲ್ಲಿ ಬೀಸುತ್ತಿರುವ ಭಾರೀ ಗಾಳಿಗೆ ಅರಣ್ಯ ಪ್ರದೇಶ ಸುಟ್ಟು ಕರಕಲಾಗಿದೆ.
ಸದ್ಯ ಬಿಸಿಲಿನ ಝಳಕ್ಕೆ ಬೆಂಕಿಯ ಕೆನ್ನಾಲಿಗೆ ಹೆಚ್ಚಿದ ಪರಿಣಾಮ ಅಪರೂಪದ ಸಸ್ಯರಾಶಿ ನಾಶವಾಗಿದೆ. ಅರಣ್ಯಾಧಿಕಾರಿಗಳು ಸ್ಥಳದಲ್ಲೇ ಇದ್ದರೂ ಕೂಡ ಬೆಂಕಿಯನ್ನ ನಂದಿಸಲು ಸಾಧ್ಯವಾಗಿಲ್ಲ. ಅತ್ಯಂತ ಎತ್ತರ ಹಾಗೂ ಇಳಿಜಾರಿನ ಪ್ರದೇಶದ ಬೈರೇಗುಡ್ಡದ ಬಳಿ ಹೋಗುವುದು ಕಠಿಣವಾದ ಕಾರ್ಯ. ಸ್ಥಳಕ್ಕೆ ಭೇಟಿ ನೀಡಿರುವ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಅರಣ್ಯ ಇಲಾಖೆ, ಪೊಲೀಸ್, ಅಗ್ನಿಶಾಮಕ ಸಿಬ್ಬಂದಿಯ ಜೊತೆ ಸ್ಥಳೀಯರೂ ಕೂಡ ಕೈಜೋಡಿಸಿದ್ದಾರೆ. ಆದರೆ, ಭಾರೀ ಗಾಳಿಗೆ ಜ್ವಾಲೆ ಹರಡುತ್ತಲೇ ಇದೆ.ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಹೋರಾಡುತ್ತಿದ್ದಾರೆ.