ಆರ್‌ಆರ್ ನಗರದಲ್ಲಿ ನೀರಿನ ಸಮಸ್ಯೆ ಉಲ್ಬಣ
(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಫೆ.೨೫:ಉದ್ಯಾನ ನಗರಿಯಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ಝಳ ಏರುತ್ತಿರುವ ನಡುವೆಯೇ ಕುಡಿಯುವ ನೀರಿನ ಸಮಸ್ಯೆಯು ಉಲ್ಬಣಗೊಳ್ಳುತ್ತಿದೆ. ಬೆಂಗಳೂರಿನ ಆರ್‌ಆರ್ ನಗರದಲ್ಲಿ ನೀರಿಗಾಗಿ ತತ್ವಾರ ಉಂಟಾಗಿದ್ದು, ನಾಗರಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಬೋರ್‌ವೆಲ್‌ಗಳಲ್ಲಿ ನೀರಿಲ್ಲದೆ ಟ್ಯಾಂಕರ್‌ಗಳ ಮೂಲಕ ನೀರು ಖರೀದಿಸಬಹುದಾದ ಪರಿಸ್ಥಿತಿ ಎದುರಾಗಿದೆ. ಆರ್‌ಆರ್ ನಗರದ ಬಿಡಿಎ ಅಪಾರ್ಟ್‌ಮೆಂಟ್‌ನಲ್ಲೂ ಕುಡಿಯುವ ನೀರಿಗೆ ಸಂಕಷ್ಟ ಎದುರಾಗಿದೆ.
ಈ ಅಪಾರ್ಟ್‌ಮೆಂಟ್‌ನಲ್ಲಿ ೧೯೨ ಮನೆಗಳಿದ್ದು, ನಿವಾಸಿಗಳು ನೀರಿನ ಬವಣೆಗೆ ತುತ್ತಾಗಿದ್ದಾರೆ. ೧೦ ವರ್ಷಗಳಿಂದ ನೀರು ಪೂರೈಸುತ್ತಿದ್ದ ಬೋರ್‌ವೆಲ್ ಈಗ ಬತ್ತಿ ಹೋಗಿದೆ. ಅಂತರ್ಜಲ ಕುಸಿತದಿಂದಾಗಿ ಈ ಸಮಸ್ಯೆ ಎದುರಾಗಿದ್ದು, ಬೇರೆ ದಾರಿ ಇಲ್ಲದೆ ನಿವಾಸಿಗಳು ಟ್ಯಾಂಕರ್ ನೀರಿಗೆ ಮೊರೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ನೀರಿನ ಸಮಸ್ಯೆಯನ್ನೇ ಬಂಡವಾಳವನ್ನಾಗಿ ಮಾಡಿಕೊಂಡಿರುವ ಖಾಸಗಿ ಟ್ಯಾಂಕರ್‌ಗಳು ನಾಗರಿಕರಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದಾರೆ. ಪ್ರತಿ ತಿಂಗಳೂ ನೀರಿಗಾಗಿ ೩ ರಿಂದ ೪ ಲಕ್ಷ ಹಣ ಕಟ್ಟಬೇಕು ಎಂದು ಅಪಾರ್ಟ್‌ಮೆಂಟ್‌ನ ನಿವಾಸಿಗಳು ಬಿಡಿಎ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.