ರಾಜ್ಯದ ಹಲವೆಡೆ ಭಾರಿ ಮಳೆ ಮುನ್ಸೂಚನೆ
ಬೆಂಗಳೂರು.ಸೆ.೧೭- ರಾಜ್ಯದ ಕೆಲ ಜಿಲ್ಲೆಗಳಲ್ಲಿ ಮಳೆ ಅರ್ಭಟ ಮುಂದುವರೆದಿದ್ದು, ಮುಂದಿನ ಒಂದು ವಾರ ವಿವಿಧ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.
ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆ ಪ್ರಮಾಣ ತೀರಾ ಕಡಿಮೆಯಾಗಿದೆ. ಆದರೆ ಮಲೆನಾಡು ಭಾಗಗಳಲ್ಲಿ ಮಳೆ ಜೋರಾಗಿದ್ದು ಮುಂದಿನ ಕೆಲ ದಿನಗಳವರೆಗೆ ಹಲವೆಡೆ ಧಾರಾಕಾರವಾಗಿ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇಂದು ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ ಮತ್ತು ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆ ಇದೆ. ದಕ್ಷಿಣ ಒಳನಾಡಿನ ಕೆಲ ಜಿಲ್ಲೆಗಳಲ್ಲೂ ಇಂದು ಮಳೆ ಆಗುವ ಸಾಧ್ಯತೆಯಿದೆ.
ಇನ್ನೂ ರಾಜ್ಯದ ಚಿಕ್ಕಮಗಳೂರು, ಶಿವಮೊಗ್ಗ, ಬೆಳಗಾವಿ ಸೇರಿದಂತೆ ಕೆಲವೆಡೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದ್ದು, ಕೆಲ ಭಾಗಗಳಲ್ಲಿ ಗಾಳಿಯ ವೇಗದೊಂದಿಗೆ ಗುಡುಗು ಸಹಿತ ಧಾರಾಕಾರ ಮಳೆ ಬೀಳಲಿದೆ ಎಂದು ಐಎಂಡಿ ಸೂಚನೆ ನೀಡಿದೆ.
ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, ಸೆಪ್ಟೆಂಬರ್ ತಿಂಗಳು ಪೂರ್ತಿ ಮಳೆ ಮುಂದುವರೆಯಲಿದೆ ಎಂದು ಹವಾಮಾನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೂ ಇಂದು ಸಾಧಾರಣ ಮಳೆ ಬೀಳಲಿದೆ ಎಂದು ಐಎಂಡಿ ಸೂಚನೆ ನೀಡಿದೆ. ಹಗಲಿನಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಸಂಜೆ ಚಳಿ ಹೆಚ್ಚಾಗಲಿದೆ. ಬೆಂಗಳೂರಿನ ಗರಿಷ್ಠ ತಾಪಮಾನ ೩೧ ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ತಾಪಮಾನ ೨೦ ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಅಂದಾಜಿಸಲಾಗಿದೆ. ಕಳೆದ ಕೆಲ ದಿನಗಳಿಂದ ಬೆಂಗಳೂರಿನಲ್ಲಿ ಮಳೆ ಅರ್ಭಟ ಕಡಿಮೆಯಾಗಿದೆ. ಮಳೆಯಾಗುವ ಲಕ್ಷಣಗಳು ಇದ್ದರೂ ಮಳೆಯಾಗುತ್ತಿಲ್ಲ.
ಆದರೆ ಮುಂದಿನ ಕೆಲ ದಿನಗಳವರೆಗೆ ಇದೇ ರೀತಿ ವಾತಾವರಣ ಮುಮದುವರೆಯಲಿದ್ದು ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಇನ್ನೂ ಕಳೆದ ದಿನ ರಾಜ್ಯದ ಹಲವೆಡೆ ಭಾರೀ ಮಳೆಯಾಗಿದೆ. ಕಾರವಾರ, ಭಟ್ಕಳ ತಾಲ್ಲೂಕಿನ ಶಿರಾಲಿಯಲ್ಲಿ ಅತ್ಯಧಿಕ ಮಳೆಯಾಗಿದೆ. ಇನ್ನೂ ಉತ್ತರ ಕನ್ನಡ ಜಿಲ್ಲೆಯ ಕುಮುಟಾ, ಸಿದ್ದಾಪುರ, ಗೋಕರ್ಣ, ಚಿಕ್ಕಮಗಳೂರಿನ ತರೀಕೆರೆ, ಕುಂದಾಪುರ ಉತ್ತಮ ಮಳೆಯಾಗಿದೆ.