ಮಣಿಕರ್ಣಿಕಾ ಫಿಲ್ಮ್ಸ್ ಕಚೇರಿ ಮಾರಾಟ ಮಾಡಿದ ಕಂಗನಾ
ನವದೆಹಲಿ,ಸೆ.೧೭-ಕಂಗನಾ ರಣಾವತ್ ಬಾಲಿವುಡ್ ಚಿತ್ರರಂಗದ ತನ್ನ ನಿಷ್ಠುರ ಮಾತುಗಳಿಗೆ ಹೆಸರುವಾಸಿ. ನಟಿ ಅನೇಕ ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಇದೀಗ ನಟಿ ಪಾಲಿ ಹಿಲ್ ಬಂಗಲೆಯನ್ನು ಮಾರಾಟ ಮಾಡಿದ್ದಾರೆ ಎಂಬ ಸುದ್ದಿ ಬಂದಿದೆ.ಅವರು ತಮ್ಮ ನಿರ್ಮಾಣ ಸಂಸ್ಥೆ ಮಣಿಕರ್ಣಿಕಾ ಫಿಲ್ಮ್ಸ್ ಕಚೇರಿಯನ್ನು ಮಾರಾಟ ಮಾಡಿದ್ದಾರೆ.
ಸದ್ಯಕ್ಕೆ ಉಂಟಾಗಿರುವ ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು ಹಿನ್ನೆಲೆಯಲ್ಲಿ ಈ ಬಂಗಲೆ ಮಾರಾಟ ಮಾಡಲಾಗಿದೆ ಎಂದು ಕಂಗನಾ ತಿಳಿಸಿದ್ದಾರೆ.ಹೈದರಾಬಾದ್ ಕಂಪನಿಯೊಂದು ಈ ಬಂಗಲೆಯನ್ನು ಖರೀದಿಸಿದೆ.
ವಿವಾದಾತ್ಮಕ ಆಸ್ತಿಯಾಗಿದ್ದ ಈ ಬಂಗಲೆಯನ್ನು ನಟಿ ೩೨ ಕೋಟಿ ರೂ.ಗೆ ಮಾರಾಟ ಮಾಡಿದ್ದಾರೆ. ಅವರು ಸೆಪ್ಟೆಂಬರ್ ೨೦೧೭ ರಲ್ಲಿ ಈ ಆಸ್ತಿಯನ್ನು ೨೦.೭ ಕೋಟಿ ರೂ.ಗೆ ಖರೀದಿಸಿದ್ದರು. ಅವರು ಡಿಸೆಂಬರ್ ೨೦೨೨ ರಲ್ಲಿ ಆಸ್ತಿಯ ವಿರುದ್ಧ ಐಸಿಐಸಿಐ ಬ್ಯಾಂಕ್‌ನಿಂದ ೨೭ ಕೋಟಿ ರೂಪಾಯಿ ಸಾಲವನ್ನೂ ಪಡೆದಿದ್ದರು. ಬಂಗಲೆಯನ್ನು ಅವರ ನಿರ್ಮಾಣ ಸಂಸ್ಥೆಯಾದ ಮಣಿಕರ್ಣಿಕಾ ಫಿಲಂಸ್‌ನ ಕಚೇರಿಯಾಗಿ ಬಳಸಲಾಗುತ್ತಿತ್ತು.
ಕಳೆದ ತಿಂಗಳು, ಕೋಡ್ ಎಸ್ಟೇಟ್ ಹೆಸರಿನ ಯೂಟ್ಯೂಬ್ ಪುಟವು ಪ್ರೊಡಕ್ಷನ್ ಹೌಸ್‌ನ ಕಚೇರಿ ಮಾರಾಟಕ್ಕಿದೆ ಎಂದು ಬಹಿರಂಗಪಡಿಸುವ ವೀಡಿಯೊವನ್ನು ಸಹ ಹಂಚಿಕೊಂಡಿದೆ. ಪ್ರೊಡಕ್ಷನ್ ಹೌಸ್ ಮತ್ತು ಮಾಲೀಕರ ಹೆಸರನ್ನು ಉಲ್ಲೇಖಿಸದಿದ್ದರೂ, ವೀಡಿಯೊದಲ್ಲಿ ಬಳಸಲಾದ ಚಿತ್ರಗಳು ಮತ್ತು ದೃಶ್ಯಗಳು ಅದು ಕಂಗನಾ ಅವರ ಕಚೇರಿ ಎಂದು ತೋರಿಸಿದೆ.
ಕಂಗನಾ ರಣಾವತ್ ಅವರ ಬಂಗಲೆ ಮತ್ತು ಹೊರ ಪ್ರದೇಶವು ೨೮೫ ಚದರ ಮೀಟರ್ ಎಂದು ವೀಡಿಯೊ ಬಹಿರಂಗಪಡಿಸಿದೆ. ಇದು ೩೦೪೨ ಚದರ ಅಡಿ ವಿಸ್ತೀರ್ಣದ ಬಂಗಲೆಯನ್ನು ಹೊಂದಿದ್ದರೆ, ೫೦೦ ಚದರ ಅಡಿ ಹೆಚ್ಚುವರಿ ಪಾರ್ಕಿಂಗ್ ಪ್ರದೇಶವಿದೆ. ಬಂಗಲೆಯು ಎರಡು ಮಹಡಿಗಳನ್ನು ಹೊಂದಿದ್ದು, ಇದರ ಬೆಲೆ ೪೦ ಕೋಟಿ ರೂ. ಅಂದರೆ, ಈ ಮೊದಲು ಈ ಬಂಗಲೆಯ ಬೆಲೆ ೪೦ ಕೋಟಿ ಎಂದು ಹೇಳಲಾಗಿದ್ದು, ೩೨ ಕೋಟಿಗೆ ಮಾರಾಟವಾಗಿದೆ. ಕಂಗನಾಗೆ ನೇರವಾಗಿ ೮ ಕೋಟಿ ರೂಪಾಯಿ ನಷ್ಟವಾಗಿದೆ.