ಗಣೇಶಮೂರ್ತಿ ವಿಸರ್ಜನೆ ವೇಳೆ ಮೂವರು ನೀರು ಪಾಲು
ತುಮಕೂರು, ಸೆ. 15- ಗಣೇಶಮೂರ್ತಿ ವಿಸರ್ಜನೆ ವೇಳೆ ಕೆರೆಯಲ್ಲಿ ಮುಳುಗಿ ತಂದೆ-ಮಗ ಸೇರಿ ಮೂವರು ಮೃತಪಟ್ಟಿರುವ ಘಟನೆ ತುರುವೇಕೆರೆ ತಾಲ್ಲೂಕಿನ ಮಾರಸಂದ್ರ ಗ್ರಾಮದಲ್ಲಿಂದು ನಡೆದಿದೆ.
ಮಾರಸಂದ್ರ ಗ್ರಾಮದ ರೇವಣ್ಣ, ಪುತ್ರ ಶರತ್ ಹಾಗೂ ದಯಾನಂದ್ ಎಂಬುವರೇ ಮೃತಪಟ್ಟಿರುವ ದುರ್ದೈವಿಗಳು.
ಗ್ರಾಮದಲ್ಲಿ ಪ್ರತಿಷ್ಠಾಪಿಸಿದ್ದ ಗಣಪತಿಯನ್ನು ಮೆರವಣಿಗೆ ನಡೆಸಿ ಮಧ್ಯಾಹ್ನ 3ಗಂಟೆಯ ಬಳಿಕ ರಂಗನಕಟ್ಟೆಯಲ್ಲಿ ಗಣಪತಿ ವಿಸರ್ಜನೆ ಮಾಡಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಶರತ್ ಮತ್ತು ದಯಾನಂದ್ ಗಣೇಶಮೂರ್ತಿ ಹಿಡಿದು ನೀರಿಗೆ ಇಳಿದಿದ್ದಾರೆ.
ಈ ಸಂದರ್ಭದಲ್ಲಿ ಕಟ್ಟೆಯಲ್ಲಿನ ಕೆಸರಿನಿಂದ ಕಾಲುಗಳು ಕೆಸರಿನಲ್ಲಿ ಸಿಲುಕೊಂಡು ಈಜಲು ಸಾಧ್ಯವಾಗದೆ ರಕ್ಷಣೆಗಾಗಿ ಇಬ್ಬರು ಕೂಗಿಕೊಂಡಿದ್ದಾರೆ. ಆಗ ಶರತ್ ತಂದೆ ರೇವಣ್ಣ ನೀರಿಗೆ ಧುಮುಕಿದ್ದಾರೆ. ಆದರೆ ಆತನಿಗೂ ಈಜು ಬಾರದೆ ಮೂವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಈ ಸುದ್ದಿ ತಿಳಿದ ಕೂಡಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ,