ಟ್ಯಾಂಕರ್ ಪಲ್ಟಿ: ಸ್ಫೋಟದಲ್ಲಿ ೨೫ ಸಜೀವ ದಹನ
ಹೈತಿ.ಸೆ.೧೫-ಪೆಟ್ರೋಲ್ ಸಾಗಿಸುತ್ತಿದ್ದ ಟ್ಯಾಂಕರ್ ಪಲ್ಟಿಯಾದ ಪರಿಣಾಮ ಭಾರಿ ಸ್ಫೋಟ ಸಂಭವಿಸಿ ೨೫ ಮಂದಿ ಸಾವನ್ನಪ್ಪಿರುವ ಘಟನೆ ಕೆರೆಬಿಯನ್ ದ್ವೀಪದ ಹೈತಿಯಲ್ಲಿ ನಡೆದಿದೆ. ದಾರುಣ ಘಟನೆಯಲ್ಲಿ ೪೦ ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಂಭೀರವಾಗಿ ಸುಟ್ಟ ರೋಗಿಗಳಿಗೆ ಚಿಕಿತ್ಸೆ ನೀಡಲು ಹೈತಿಯ ಆಸ್ಪತ್ರೆಗಳು ಸಾಕಷ್ಟು ಸೌಲಭ್ಯಗಳನ್ನು ಹೊಂದಿಲ್ಲ.
೧.೨ ಕೋಟಿ ಜನಸಂಖ್ಯೆ ಹೊಂದಿರುವ ಈ ದೇಶವು ಇಂಧನ ಕೊರತೆಯಿಂದ ಸಂಕಷ್ಟದಲ್ಲಿದೆ. ಗುಂಪುಗಳ ನಡುವಿನ ಕಾಳಗದಿಂದಾಗಿ ದೇಶಕ್ಕೆ ಸರಕುಗಳನ್ನು ಆಮದು ಮಾಡಿಕೊಳ್ಳುವುದು ಕಷ್ಟಕರವಾಗಿದೆ. ಮೂರು ವರ್ಷಗಳ ಹಿಂದೆ ಪ್ರಬಲ ಭೂಕಂಪದಿಂದ ತತ್ತರಿಸಿದ್ದ ೬೦,೦೦೦ ಜನರು ವಾಸಿಸುವ ಮಿರಾಗೋನೆಯಲ್ಲಿ ನಿನ್ನೆ ಅಪಘಾತ ಸಂಭವಿಸಿದೆ. ೨೦೨೧ ರಲ್ಲಿ, ಹೈತಿಯ ಎರಡನೇ ಅತಿದೊಡ್ಡ ನಗರವಾದ ಕ್ಯಾಪ್-ಹೈತಿಯಲ್ಲಿ ಇಂಧನ ತುಂಬಿದ ಟ್ರಕ್ ಉರುಳಿಬಿದ್ದು ಸ್ಫೋಟಗೊಂಡಾಗ ೭೫ ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು.
ನಗರದ ಪೂರ್ವ ಅಂಚಿನಲ್ಲಿರುವ ಸನ್ಮಾರಿ ಪ್ರದೇಶದಲ್ಲಿ ಮಧ್ಯರಾತ್ರಿ ಪೆಟ್ರೋಲ್ ಸಾಗಿಸುತ್ತಿದ್ದ ಟ್ರಕ್ ಪಲ್ಟಿಯಾದ ನಂತರ ಟ್ಯಾಂಕರ್ ಸ್ಫೋಟಗೊಂಡಿದೆ.
ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆಯಲ್ಲಿ ಸುಮಾರು ೨೦ ಮನೆಗಳೂ ಸುಟ್ಟು ಕರಕಲಾಗಿದ್ದವು. ಟ್ಯಾಂಕರ್ ಪಲ್ಟಿಯಾದ ನಂತರ ಕೆಲವರು ರಸ್ತೆಯಲ್ಲಿ ಸುರಿದ ಪೆಟ್ರೋಲ್ ಸಂಗ್ರಹಿಸಲು ಓಡಿದರು.
ಈ ಸಂದರ್ಭದಲ್ಲಿ ಇಂಧನ ಟ್ಯಾಂಕರನ್‌ಲ್ಲಿ ಸ್ಫೋಟ ಸಂಭವಿಸಿದೆ. ಬೆಂಕಿ ವೇಗವಾಗಿ ಹರಡಿತು. ಇದರಿಂದಾಗಿ ಜನರು ಸಜೀವ ದಹನವಾದರು. ಈ ಅಪಘಾತದ ಬಗ್ಗೆ ಸಂತಾಪ ವ್ಯಕ್ತಪಡಿಸಿರುವ ದೇಶದ ಪ್ರಧಾನಿ ಏರಿಯಲ್ ಹೆನ್ರಿ, ಸುಟ್ಟಗಾಯಗಳಿಂದ ಸಾವನ್ನಪ್ಪಿರುವವರ ಗುರುತು ಪತ್ತೆ ಹಚ್ಚುವುದು ಕಷ್ಟದ ವಿಷಯವಾಗಿದೆ ಎಂದು ಹೇಳಿದರು. ಮೇಯರ್ ಪ್ರಕಾರ, ವೇಗವಾಗಿ ಬಂದ ಟ್ಯಾಂಕರ್ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ, ನಂತರ ಹತ್ತಿರದಲ್ಲಿದ್ದ ಜನರು ಇಂಧನ ಸಂಗ್ರಹಿಸಲು ಓಡಿದಾಗ ಸ್ಫೋಟ ಸಂಭವಿಸಿದೆ.