ಕೇಜ್ರಿ ಬಿಡುಗಡೆ ಠಾಕ್ರೆ ಸ್ವಾಗತ
ಮುಂಬೈ,ಸೆ.೧೪- ಅಬಕಾರಿ ನೀತಿ ಹಗರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿರುವುದನ್ನು ಶಿವಸೇನಾ ಯುಬಿಟಿ ನಾಯಕ ಆದಿತ್ಯ ಠಾಕ್ರೆ ಸ್ವಾಗತಿಸಿದ್ದಾರೆ.
ಕೇಜ್ರಿವಾಲ್ ಬಿಡುಗಡೆ ಕುರಿತು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಆದಿತ್ಯ ಠಾಕ್ರೆ ಅವರು ‘ರಾಜಕೀಯಕ್ಕಿಂತ ಸತ್ಯವೇ ಮೇಲುಗೈ ಸಾಧಿಸುತ್ತದೆ’ ಎಂದು ಹೇಳಿದ್ದಾರೆ.
‘ಅರವಿಂದ ಕೇಜ್ರಿವಾಲ್ ಅವರು ಜೈಲಿನಿಂದ ಬಿಡುಗಡೆಯಾಗಿರುವುದು ಸಂತಸ ಮೂಡಿಸಿದೆ. ಪ್ರಜಾಪ್ರಭುತ್ವ ಮತ್ತು ಸಂವಿಧಾನದ ರಕ್ಷಣೆಗಾಗಿ ಮತ್ತೆ ಹೋರಾಡಲು ಸಿದ್ಧವಾಗಿದ್ದಾರೆ’ ಎಂದು ತಿಳಿಸಿದ್ದಾರೆ.
ಬಂಡಾಯಗಾರರ ವಿರುದ್ದ ಕಿಡಿ:
‘ಒಂದು ಬದಿಯಲ್ಲಿ ತಮ್ಮತನಕ್ಕೆ ದ್ರೋಹ ಬಗೆದು ಓಡಿಹೋಗುವ ಹೇಡಿಗಳಿದ್ದಾರೆ. ಮತ್ತೊಂದು ಬದಿಯಲ್ಲಿ ಅರವಿಂದ ಕೇಜ್ರಿವಾಲ್ ಅವರಂತೆ ಸತ್ಯಕ್ಕಾಗಿ ಹೋರಾಡುವವರೂ ಇದ್ದಾರೆ.ಸತ್ಯಮೇವ ಜಯತೇ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೇ ಸೇರಿದಂತೆ ಶಿವಸೇನಾದ ಬಂಡಾಯ ನಾಯಕರನ್ನು ಉಲ್ಲೇಖಿಸಿ ಆದಿತ್ಯ ಠಾಕ್ರೆ ಕಿಡಿಕಾರಿದ್ದಾರೆ.
೨೦೨೨ರ ಜೂನ್‌ನಲ್ಲಿ ಶಿಂದೆ ಅವರು ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರವನ್ನು ಪತನಗೊಳಿಸಿದರು. ಬಳಿಕ ಬಿಜೆಪಿ ಬೆಂಬಲದೊಂದಿಗೆ ಮುಖ್ಯಮಂತ್ರಿಯಾದರು. ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಕೂಡ ೨೦೨೩ರ ಜುಲೈನಲ್ಲಿ ಶಿಂದೆ ನೇತೃತ್ವದ ಸರ್ಕಾರದೊಂದಿಗೆ ಕೈಜೋಡಿಸಿದ್ದಾರೆ ಎಂದು ದೂರಿದ್ದಾರೆ.