ಉಪಗ್ರಹ ಆಧಾರಿತ ಟೋಲ್‌ಗೆ ಶೀಘ್ರ ಚಾಲನೆ
ನವದೆಹಲಿ,ಸೆ,೧೪- ದೇಶದ ಹೆದ್ದಾರಿಗಳಲ್ಲಿ ಉಪಗ್ರಹ ಆಧಾರಿತ ಟೋಲ್ ಸಂಗ್ರಹವನ್ನು ಸದ್ಯದಲ್ಲಿಯೇ ಆರಂಭಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
ಗ್ಲೋಬಲ್ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಮ್ -ಜಿಎನ್‌ಎಸ್‌ಎಸ್ ಮತ್ತು ವಾಹನಗಳಲ್ಲಿ ಅಳವಡಿಸಲಾಗಿರುವ ಆನ್-ಬೋರ್ಡ್ ಘಟಕಗಳೊಂದಿಗೆ ಟೋಲ್ ಸಂಗ್ರಹಕ್ಕೆ ಶೀಘ್ರವೇ ಕೇಂದ್ರ ಸರ್ಕಾರ ಚಾಲನೆ ನೀಡಲು ಮುಂದಾಗಿದೆ.
ಈಗಾಗಲೇ ಕೇಂದ್ರ ಹೆದ್ದಾರಿ ಮತ್ತು ಭೂಸಾರಿಗೆ ಸಚಿವಾಲಯ ಹೊಸ ವ್ಯವಸ್ಥೆಯನ್ನು ಹೆದ್ದಾರಿಗಳಾದ್ಯಂತ ಜಾರಿ ಮಾಡಲು ಉದ್ದೇಶಿಸಿದೆ. ಈ ಮೂಲಕ ಈ ವ್ಯವಸ್ಥೆ ಜಾರಿಯಾದರೆ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಭೌತಿಕ ಟೋಲ್ ಪ್ಲಾಜಾಗಳು ಅಥವಾ ಟೋಲ್ ಗೇಟ್‌ಗಳ ಅಗತ್ಯ ಇರುವುದಿಲ್ಲ.
ಹೊಸ ಟೋಲ್ ವ್ಯವಸ್ಥೆಯ ಪ್ರಮುಖ ಮುಖ್ಯಾಂಶವೆಂದರೆ ಉಪಗ್ರಹ ಅಥವಾ ಉಪಗ್ರಹಗಳ ಸಮೂಹ ವಾಹನಗಳ ಚಲನೆಯನ್ನು ಟ್ರ್ಯಾಕ್ ಮಾಡಲಿದೆ. ವಾಹನ ಸವಾರರು ಹೆದ್ದಾರಿಗಳಲ್ಲಿ ಪ್ರಯಾಣಿಸಿದ ಅಂತರಕಷ್ಟೇ ಟೋಲ್ ನಿಗಧಿ ಮಾಡಲಿದೆ. ಇದರಿಂದ ವಾಹನ ಚಾಲಕರು ತಾವು ರಸ್ತೆ ಬಳಸಿದ ಮಾರ್ಗಕ್ಕಷ್ಟೇ ಪಾವತಿ ಮಾಡಬೇಕಾಗುತ್ತದೆ.
ಜೊತೆಗೆ ಟೋಲ್‌ಗಳಲ್ಲಿ ಸರದಿಯಲ್ಲಿ ನಿಲ್ಲುವುದೂ ಕೂಡ ತಪ್ಪಲಿದೆ. ಮುಂದಿನ ವಾರದಲ್ಲಿ ಉಪಗ್ರಹ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆ ಆರಂಭವಾಗಲಿದ್ದು ಇದರಿಂದ ಟೋಲ್ ಸಂಗ್ರಹ ಸುಲಭವಾಗಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರತಿ ವಾಹನಕ್ಕೆ ವರ್ಗಾವಣೆ ಮಾಡಲಾಗದ ಗ್ಲೋಬಲ್ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಮ್ ಅಳವಡಿಸಬೇಕಾಗುತ್ತದೆ. ಇದರಿಂದ ವಾಹನ ಹೆದ್ದಾರಿಯಲ್ಲಿ ಸಂಚರಿಸಿದಾಗ ಅದರ ಆಧಾರದ ಮೇಲೆ ಟೋಲ್ ಸಂಗ್ರಹ ಮಾಡುವ ಉದ್ದೇಶ ಹೊಂದಿದೆ.
ವಾಹನಗಳ ಪ್ರವೇಶ ಮತ್ತು ನಿರ್ಗಮನದ ಟ್ರ್ಯಾಕಿಂಗ್ ಅನ್ನು ಒಂದು ರೀತಿಯ ಸಿಗ್ನಲ್ ಮೂಲಸೌಕರ್ಯ ಬಳಸಿ ಮಾಡಲಾಗುತ್ತದೆ, ಇವುಗಳನ್ನು ಸುಂಕದ ಹೆದ್ದಾರಿ ಜಾಲದಲ್ಲಿ ಸ್ಥಾಪಿಸಲಾಗುವುದು ವಾಹನ ನೋಂದಣಿ ಸಂಖ್ಯೆ, ಪ್ರಕಾರ ಮತ್ತು ಬ್ಯಾಂಕ್ ಖಾತೆ ವಿವರಗಳಂತಹ ಮಾಹಿತಿಯನ್ನು ಸಂಗ್ರಹಿಸುವ ವರ್ಚುವಲ್ ಟೋಲ್ ಬೂತ್ ಆಗಿ ಕಾರ್ಯನಿರ್ವಹಿಸುತ್ತವೆ ಎಂದು ತಿಳಿಸಲಾಗಿದೆ.