ಆರ್‌ಟಿಪಿಎಸ್ ೮ ಘಟಕ ತಾತ್ಕಾಲಿಕ ಸ್ಥಗಿತ
(ಸಂಜೆವಾಣಿ ಪ್ರತಿನಿಧಿಯಿಂದ)
ರಾಯಚೂರು,ಸೆ.೧೩:ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರದ ೬ ಉತ್ಪಾದನಾ ಘಟಕಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ವಿದ್ಯುತ್ ಕೇಂದ್ರದ ೬ನೇ ವಿದ್ಯುತ್ ಘಟಕವನ್ನು ವಾರ್ಷಿಕ ನಿರ್ವಹಣೆ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾಗಿದ್ದು, ವಿದ್ಯುತ್ ಬೇಡಿಕೆ ಕುಸಿತ ಹಿನ್ನೆಲೆ ಉಳಿದ ೫ ಘಟಕಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ.
ರಾಜ್ಯ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದಲ್ಲಿಯೂ ಈ ಬಾರಿ ಅತ್ಯುತ್ತಮ ಮಳೆ ಬಿದ್ದ ಹಿನ್ನೆಲೆಯಲ್ಲಿ ವಿದ್ಯುತ್ ಬೇಡಿಕೆ ಕುಸಿತಗೊಂಡಿದ್ದು, ವಿದ್ಯುತ್ ಉತ್ಪಾದನೆ ತಾತ್ಕಾಲಿಕ ಸ್ಥಗಿತಗೊಳಿಸಲಾಗಿದೆ.
ಶಾಖೋತ್ಪನ್ನ ವಿದ್ಯುತ್ ಕೇಂದ್ರದ ೮ ಘಟಕಗಳಲ್ಲಿ ೨೧೦ ಮೆಗಾ ವ್ಯಾಟ್ ಸಾಮರ್ಥ್ಯದ ೫ನೇ ಘಟಕ ಮತ್ತು ೨೫೦ ಮೆಗಾ ವ್ಯಾಟ್ ಸಾಮರ್ಥ್ಯದ ೮ನೇ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಉಳಿದಂತೆ ೨೧೦ ಮೆಗಾ ವ್ಯಾಟ್ ಸಾಮಾರ್ಥ್ಯದ ೬ನೇ ಘಟಕವನ್ನು ವಾರ್ಷಿಕ ನಿರ್ವಹಣೆಗಾಗಿ ಸ್ಥಗಿತಗೊಳಿಸಲಾಗಿದೆ.
ವಿದ್ಯುತ್‌ಗೆ ಬೇಡಿಕೆ ಕುಸಿತಗೊಂಡ ಹಿನ್ನೆಲೆ ವಿದ್ಯುತ್ ಕೇಂದ್ರದ ೧, ೨, ೩, ೪ ಮತ್ತು ೭ನೇ ಘಟಕಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.