ಅಮಾನಿಕೆರೆ ಕೋಡಿ ಹೊಸ ಸೇತುವೆ ಲೋಕಾರ್ಪಣೆ
ತುಮಕೂರು, ಸೆ. ೧೪- ನಗರದ ಜನರ ಬಹಳ ವರ್ಷಗಳ ಬೇಡಿಕೆಯಾಗಿದ್ದ ಸಿರಾಗೇಟ್ ರಸ್ತೆ ಅಮಾನಿಕೆರೆ ಕೋಡಿ ಹಳ್ಳ ಮೇಲ್ಸೇತುವೆಯನ್ನು ಸುಮಾರು ೬ ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಹಾಗೂ ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರು ಇಂದು ಲೋಕಾರ್ಪಣೆಗೊಳಿಸಿದರು.
ಅಮಾನಿಕೆರೆ ಕೋಡಿ ಹಳ್ಳಕ್ಕೆ ಸುಮಾರು ೬ ಕೋಟಿ ರೂ.ಗಳ ವೆಚ್ಚದಲ್ಲಿ ಮೇಲ್ಸೇತುವೆ ನಿರ್ಮಾಣ ಮಾಡಲಾಗಿದ್ದು, ಸಚಿವದ್ವಯರು ಇಂದು ಸೇತುವೆಯನ್ನು ಉದ್ಘಾಟಿಸುವ ಮೂಲಕ ವಾಹನ ಹಾಗೂ ಜನ ಸಂಚಾರಕ್ಕೆ ಮುಕ್ತಗೊಳಿಸಿದರು.
ಕಳೆದ ಮಾರ್ಚ್‌ನಲ್ಲಿ ವಿಧಾನಸಭಾ ಚುನಾವಣೆ ನೀತಿ ಸಂಹಿತೆ ಜಾರಿಗೊಳ್ಳುವ ದಿನ ತರಾತುರಿಯಲ್ಲಿ ಈ ಸೇತುವೆ ನಿರ್ಮಾಣಕ್ಕೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಗುದ್ದಲಿ ಪೂಜೆ ನೆರವೇರಿಸಿದ್ದರು. ಅಂದು ೬ ತಿಂಗಳಲ್ಲಿ ಸೇತುವೆ ಕಾಮಗಾರಿ ಪೂರ್ಣಗೊಳಿಸಿ ವಾಹನಗಳ ಸಂಚಾರಕ್ಕೆ ಮುಕ್ತಗೊಳಿಸುವುದಾಗಿ ಸಚಿವರು ಭರವಸೆ ನೀಡಿದ್ದರು. ಅದರಂತೆ ೬ ತಿಂಗಳೊಳಗೆ ಈ ಸೇತುವೆ ಕಾಮಗಾರಿ ಪೂರ್ಣಗೊಳಿಸಿ ಇಂದು ಲೋಕಾರ್ಪಣೆ ಮಾಡಲಾಯಿತು.
ಸೇತುವೆ ಉದ್ಘಾಟಿಸಿದ ಬಳಿಕ ಮಾತನಾಡಿದ ಸಚಿವ ಡಾ. ಜಿ. ಪರಮೇಶ್ವರ್ ಅವರು, ಈ ಸೇತುವೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ದಿನ ನೀಡಿದ ಮಾತಿನಂತೆ ೬ ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸಿ ಇಂದು ಲೋಕಾರ್ಪಣೆ ಮಾಡಲಾಗಿದೆ ಎಂದರು. ನಗರದ ಜನರು ಹಾಗೂ ವಾಹನಗಳ ಸಂಚಾರಕ್ಕೆ ಅಮಾನಿಕೆರೆ ಕೋಡಿ ಸೇತುವೆ ಈಗ ಮುಕ್ತವಾಗಿದೆ. ಗುಣಮಟ್ಟದ ಕಾಮಗಾರಿಯಿಂದ ಈ ಸೇತುವೆ ನಿರ್ಮಾಣವಾಗಿದೆ ಎಂದರು.
ಯಾವುದೇ ಕಾರಣಕ್ಕೂ ಕೂಡ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ. ಅದರ ಜತೆಗೆ ಅಭಿವೃದ್ಧಿ ಕಾರ್ಯಗಳನ್ನು ನಿಲ್ಲಿಸುವುದಿಲ್ಲ. ಎಷ್ಟೇ ಟೀಕೆ ಟಿಪ್ಪಣಿಗಳು ಬಂದರೂ ಸಹ ಅಭಿವೃದ್ಧಿ ಯೋಜನೆಗಳನ್ನು ಜತೆ ಜತೆಯಲ್ಲೇ ಕೊಂಡೊಯ್ಯುತ್ತೇವೆ ಎಂದರು.
ಮುಂದಿನ ೨೦೨೫ಕ್ಕೆ ತುಮಕೂರು ಭಾಗಕ್ಕೆ ಎತ್ತಿನಹೊಳೆ ಯೋಜನೆಯ ನೀರು ಬರಲಿದೆ ಎಂದು ಅವರು ಹೇಳಿದರು.
ತುಮಕೂರು ಶಿಕ್ಷಣ ಕೇಂದ್ರ. ಲಕ್ಷಾಂತರ ವಿದ್ಯಾರ್ಥಿಗಳು ತುಮಕೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಹಾಗಾಗಿ ತುಮಕೂರನ್ನು ಎಜುಕೇಷನ್ ಹಬ್ ಎಂದು ಕರೆಯಬಹುದು ಎಂದು ತಿಳಿಸಿದರು.
ತುಮಕೂರಿನಲ್ಲಿ ವ್ಯಾಸಂಗ ಮಾಡುತ್ತಿರುವ ಹೆಣ್ಣು ಮಕ್ಕಳಿಗೆ ಹಾಸ್ಟೆಲ್‌ಗಳ ಕೊರತೆ ಇದೆ. ಇದನ್ನು ಮನಗಂಡು ೧೨ ಹಾಸ್ಟೆಲ್ ನಿರ್ಮಾಣ ಮಾಡಲು ನಿರ್ಧರಿಸಿದ್ದು, ಸುಮಾರು ೫೦ ಕೋಟಿ ರೂ. ವೆಚ್ಚದಲ್ಲಿ ವಿದ್ಯಾರ್ಥಿನಿಯರು ಹಾಗೂ ವಿದ್ಯಾರ್ಥಿಗಳಿಗೆ ೧೨ ಹಾಸ್ಟೆಲ್‌ಗಳನ್ನು ನಿರ್ಮಾಣ ಮಾಡಲಾಗುವುದು. ಆದಷ್ಟು ಶೀಘ್ರದಲ್ಲೇ ಹಾಸ್ಟೆಲ್ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಾಗುವುದು ಎಂದರು.
ಅಭಿವೃದ್ದಿ ಮಾಡಬೇಕು ಹಾಗೂ ಬಡತನ ನಿರ್ಮೂಲನೆ ಮಾಡಬೇಕು ಎಂಬುದು ನಮ್ಮ ಸರ್ಕಾರ ಧ್ಯೇಯವಾಗಿದೆ ಎಂದು ಅವರು ಹೇಳಿದರು.
ತುಮಕೂರು ಬೆಂಗಳೂರಿನ ಒಂದು ಭಾಗವಾಗಬೇಕು ಎಂಬುದು ನಮ್ಮೆಲ್ಲರ ಉದ್ದೇಶ. ಅದಕ್ಕೆ ತಕ್ಕಂತೆ ಸೌಲಭ್ಯಗಳನ್ನು ಒದಗಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದರು.
ಈ ಸಂದರ್ಭದಲ್ಲಿ ಸಹಕಾರ ಸಚಿವ ಕೆ.ಎನ್. ರಾಜಣ್ಣ, ಶಾಸಕರಾದ ಜ್ಯೋತಿಗಣೇಶ್, ಸುರೇಶ್‌ಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಡಾ ಎಂ.ಆರ್. ಹುಲಿನಾಯ್ಕರ್, ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿ.ಪಂ. ಸಿಇಓ ಜಿ. ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಪಾಲಿಕೆ ಆಯುಕ್ತೆ ಬಿ.ವಿ. ಅಶ್ವಿಜ ಮತ್ತಿತರರು ಉಪಸ್ಥಿತರಿದ್ದರು.
