ದರ್ಶನ್‌ಗೆ ಜೈಲರ್ ಎಚ್ಚರಿಕೆ
ಬಳ್ಳಾರಿ,ಸೆ.೧೪:ಕೊಲೆ ಪ್ರಕರಣದ ಆರೋಪ ಹೊತ್ತು ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ಟಿವಿಗಾಗಿ ಮಾಡುತ್ತಿರುವ ಕಿರಿಕಿರಿ, ಅಹಂಕಾರ, ದರ್ಪ ತೋರಿಸಿ ಪದೇ ಪದೇ ಅಸಭ್ಯ ವರ್ತನೆ ತೋರುತ್ತಿರುವುದಕ್ಕೆ ಜೈಲು ಅಧಿಕಾರಿಗಳು ದರ್ಶನ್‌ಗೆ ಖಡಕ್ ಎಚ್ಚರಿಕೆ ನೀಡಿದ್ದು, ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ಅನುಭವಿಸಿದ್ದ ದರ್ಶನ್, ಬಳ್ಳಾರಿ ಜೈಲಿನಲ್ಲಿ ಸೆಲ್‌ನ ಕಸ ಗುಡಿಸಿ, ಶೌಚಾಲಯ ಸ್ವಚ್ಛಗೊಳಿಸುವ ಕೆಲಸವನ್ನು ತಾವೇ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ.
ಬಳ್ಳಾರಿ ಜೈಲಿನಲ್ಲಿ ದರ್ಶನ್‌ಗೆ ನಿಜವಾದ ಸೆರೆವಾಸ ಹೇಗಿರುತ್ತದೆ ಎಂಬ ಅನುಭವ ಆಗುತ್ತಿದ್ದು, ಸೆಲ್‌ನಲ್ಲಿ ಕಸ ಗುಡಿಸುವುದು, ಬಟ್ಟೆ ತೊಳೆಯುವುದು, ಶೌಚಾಲಯ ಸ್ವಚ್ಛತೆ ಎಲ್ಲವನ್ನೂ ಅವರೇ ಮಾಡಿಕೊಳ್ಳುತ್ತಿದ್ದಾರೆ ಎಂದು ಬಲ್ಲ ಮೂಲಗಳು ಹೇಳಿವೆ.
ಜೈಲಿನ ನಿಯಮದ ಪ್ರಕಾರ ಶೌಚಾಲಯವನ್ನು ವಾರಕ್ಕೊಮ್ಮೆ ಜೈಲಿನ ಸ್ವಚ್ಛತಾ ಕೆಲಸಗಾರರು ಬಂದು ಸ್ವಚ್ಛ ಮಾಡುತ್ತಾರೆ.
ಉಳಿದ ದಿನ ಸೆಲ್‌ನಲ್ಲಿರುವ ಆರೋಪಿಗಳೇ ಕ್ಲೀನ್ ಮಾಡಿಕೊಳ್ಳಬೇಕು. ಹಾಗಾಗಿ ದರ್ಶನ್ ಸೆಲ್‌ನಲ್ಲಿ ತಾನೇ ಕಸ ಗುಡಿಸಿಕೊಂಡು ಸ್ವಚ್ಛತಾ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ.
ಖಡಕ್ ವಾರ್ನಿಂಗ್
ಜೈಲಿನಲ್ಲಿ ಟಿವಿ ಕೊಡುವಂತೆ ಕಿರಿಕಿರಿ ಮಾಡುತ್ತ ಅಸಭ್ಯ ವರ್ತನೆ ತೋರಿರುವ ದರ್ಶನ್‌ಗೆ ಜೈಲಿನ ಅಧಿಕಾರಿಗಳಿ ಖಡಕ್ ಎಚ್ಚರಿಕೆ ನೀಡಿ ಪಾಠ ಹೇಳಿದ್ದಾರೆ.
ಇದು ಜೈಲು ಇರುವಷ್ಟು ದಿನ ಜೈಲಿನ ನಿಯಮ ಪಾಲನೆ ಮಾಡಿ ಎಂದು ದರ್ಶನ್‌ಗೆ ಜೈಲು ಅಧಿಕಾರಿಗಳು ತಮ್ಮದೇ ಶೈಲಿನಲ್ಲಿ ವಾರ್ನಿಂಗ್ ಸಹ ನೀಡಿದ್ದಾರೆ ಎನ್ನಲಾಗಿದೆ.
ಜೈಲಿನ ಶಿಸ್ತನ್ನು ಉಲ್ಲಂಘನೆ ಮಾಟುತ್ತಿದ್ದೀರಿ. ಇದು ಸರಿಯಲ್ಲ ಎಂದು ಅಧಿಕಾರಿಗಳು ದರ್ಶನ್‌ಗೆ ತಿಳಿಸಿದ್ದು, ಜೈಲು ನಿಯಮಾವಳಿ ಪ್ರಕಾರ ಏನು ಸೌಲಭ್ಯ ಕೊಡಲು ಸಾಧ್ಯವೋ ಅದನ್ನು ಒದಗಿಸುತ್ತೇವೆ, ಹೆಚ್ಚಿನ ಸೌಲಭ್ಯ ಬೇಕು ಎಂದರೆ ನ್ಯಾಯಾಲಯಕ್ಕೆ ಅರ್ಜಿ ಹಾಕಿ ಸುಮ್ಮನೆ ಅದು ಕೊಡಿ ಇದು ಕೊಡಿ ಎಂದು ಕಿರಿಕಿರಿ ಮಾಡಬೇಡಿ ಎಂದು ಜೈಲರ್ ದರ್ಶನ್‌ಗೆ ಖಡಕ್ ಆಗಿಯೇ ಹೇಳಿದ್ದಾರೆ ಎಂದು ಜೈಲು ಮೂಲಗಳು ಹೇಳಿವೆ.
ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್, ಟಿವಿ ಕೊಡುವಂತೆ ಜೈಲು ಅಧಿಕಾರಿಗಳಿಗೆ ಮನವಿ ಮಾಡಿದ್ದರು.
ಅದರಂತೆ ಜೈಲು ಅಧಿಕಾರಿಗಳು ಹೊಸ ಟಿವಿ ಇಲ್ಲದ ಕಾರಣ ಹಳೆಯ ಟಿವಿಯನ್ನೇ ದುರಸ್ಥಿ ಮಾಡಿ ಕೊಟ್ಟಿದ್ದರು. ಆ ಟಿವಿ ಸರಿಯಿಲ್ಲ ತೆಗೆದುಕೊಂಡು ಹೋಗಿ ಎಂದು ದರ್ಶನ್ ಕಿರಿಕಿರಿ ಮಾಡುತ್ತಿದ್ದರು ಎಂದು ಹೇಳಲಾಗಿದೆ.
ಕಾರಾಗೃಹ ಇಲಾಖೆ ಅಧಿಕಾರಿಗಳ ಎತ್ತಂಗಡಿ
ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದ ಸಂಬಂಧ ನ್ಯಾಯಾಂಗ ಬಂಧನದಲ್ಲಿದ್ದ ನಟ ದರ್ಶನ್ ಗೆ ಪರಪ್ಪನ ಅಗ್ರಹಾರದ ಕಾರಾಗೃಹದಲ್ಲಿ ವಿಶೇಷ ಅತಿಥ್ಯ ನೀಡಿದ ಹಿನ್ನೆಲೆಯಲ್ಲಿ ಕಾರಾಗೃಹ ಇಲಾಖೆಗೆ ರಾಜ್ಯ ಸರ್ಕಾರ ಮೇಜರ್ ಸರ್ಜರಿ ಮಾಡಿದೆ.
ಪರಪ್ಪನ ಅಗ್ರಹಾರದ ಕಾರಾಗೃಹದಲ್ಲಿದ್ದ ನಾಲ್ವರು ಜೈಲು ವೀಕ್ಷಕರನ್ನು ರಾಜ್ಯದ ಬೇರೆ ಜೈಲುಗಳಿಗೆ ವರ್ಗಾವಣೆ ಮಾಡಿ ಮಂಗಳೂರು ಕೇಂದ್ರ ಕಾರಾಗೃಹದಲ್ಲಿದ್ದ ಜೈಲರ್ ಶಂಭು ಷಣ್ಮುಖಪ್ಪ ವೆನ್ನಾಲ ಅವರನ್ನು ಪರಪ್ಪನ ಅಗ್ರಹಾರ ಜೈಲಿಗೆ ವರ್ಗಾವಣೆ ಮಾಡಲಾಗಿದೆ.
ಇದರ ಜೊತೆಗೆ ರಾಜ್ಯದ ಇತರ ಕಾರಾಗೃಹದ ಜೈಲರ್‌ಗಳು, ಮುಖ್ಯ ವೀಕ್ಷಕರು, ವೀಕ್ಷಕರು, ವಾರ್ಡರ್ ಸೇರಿ ೪೩ ಮಂದಿಯನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ.
ವರ್ಗಾವಣೆಯಾದ ಅಧಿಕಾರಿಗಳು:
ಜೈಲರ್ ಶಂಭು ಷಣ್ಮುಖಪ್ಪ ವೆನ್ನಾಲ ಅವರನ್ನು ಮಂಗಳೂರು ಕೇಂದ್ರ ಕಾರಾಗೃಹದಿಂದ ಪರಪ್ಪನ ಅಗ್ರಹಾರ ಜೈಲಿಗೆ,ಧಾರವಾಡ ಕಾರಾಗೃಹದ ಮುಖ್ಯ ವೀಕ್ಷಕಿ ಸುಮಿತ್ರಾ ಎಂ.ರಾಠೋಡ್ ವಿಜಯಪುರ ಕೇಂದ್ರ ಕಾರಾಗೃಹಕ್ಕೆ ವರ್ಗಾವಣೆ ಮಾಡಲಾಗಿದೆ.
ಶಿವಮೊಗ್ಗ ಕಾರಗೃಹದ ಹೆಡ್ ವಾರ್ಡರ್ ಗಣಪತಿ ಸಾಗರ ಉಪ ಕಾರಾಗೃಹಕ್ಕೆ,ಮಂಗಳೂರು ಜೈಲಿನ ಹೆಡ್ ವಾರ್ಡರ್ ಬಸವರಾಜ ಜಾಧವ್ ಕೇಂದ್ರ ಕಾರಾಗೃಹ ಧಾರವಾಡಕ್ಕೆ,ಮಂಗಳೂರು ಜೈಲಿನ ಹೆಡ್ ವಾರ್ಡರ್ ಪ್ರಭು- ಕೇಂದ್ರ ಕಾರಾ ಗೃಹ ಕಲಬುರಗಿಗೆ ವರ್ಗಾಯಿಸಲಾಗಿದೆ.
ಚಿತ್ರದುರ್ಗದ ಜೈಲಿನ ಮುಖ್ಯ ವೀಕ್ಷಕಿ ಶೈಲ ಸಿ.ಕೆ.- ಜಿಲ್ಲಾ ಕಾರಾಗೃಹ ದಾವಣಗೆರೆಗೆ,ಪರಪ್ಪನ ಅಗ್ರಹಾರ ಜೈಲಿನ ಮುಖ್ಯ ವೀಕ್ಷಕ ಜಿ.ಜಿ.ಮಂಜುನಾಥ್ ತಾಲೂಕು ಉಪ ಕಾರಾಗೃಹ ಹುಬ್ಬಳ್ಳಿಗೆ,ಕಾರಾವಾರ ಜೈಲಿನ ವೀಕ್ಷಕ ಸಂತೋಷ್ ಕರಿಯಣ್ಣನವರ- ಜಿಲ್ಲಾ ಕಾರಾಗೃಹ ದಾವಣಗೆರೆಗೆ ವರ್ಗಾವಣೆ ಮಾಡಲಾಗಿದೆ.
ಪರಪ್ಪನ ಅಗ್ರಹಾರ ಜೈಲಿನ ವೀಕ್ಷಕ ಶಿವಾನಂದ ಧನಪಾಲ್ ಕಾಂಬಳೆ ಕೇಂದ್ರ ಕಾರಾಗೃಹ ವಿಜಯಪುರ ಜೈಲಿಗೆ,ಪರಪ್ಪನ ಅಗ್ರಹಾರ ಜೈಲಿನ ಮತ್ತೊಬ್ಬ ವೀಕ್ಷಕ ಶಿವ ಲಮಾಣಿ- ಜಿಲ್ಲಾ ಕಾರಾಗೃಹ ಗದಗಕ್ಕೆ ವರ್ಗಾಯಿಸಲಾಗಿದೆ.
ಪರಪ್ಪನ ಅಗ್ರಹಾರ ಜೈಲಿನ ವೀಕ್ಷಕ ನೂರಲಿ ಹುಸೇನಸಾಬ ಮುಜಾವರ -ಕೇಂದ್ರ ಕಾರಾಗೃಹ ವಿಜಯಪುರಕ್ಕೆ,ಬೀದರ್ ಜೈಲಿನ
ವೀಕ್ಷಕ ಶಿವ ಕುಮಾರ್- ಕಲಬುರಗಿ ಜೈಲಿಗೆ,ಕಲಬುರಗಿ ಜೈಲಿನ ವೀಕ್ಷಕ ಮಂಜುನಾಥ ಕಟಗಿ-ಹಾವೇರಿ ಜಿಲ್ಲಾ ಕಾರಾಗೃಹಕ್ಕೆ ವರ್ಗಾವಣೆಯಾಗಿದ್ದಾರೆ.